Year Ender 2023: ಸರಣಿಗಳಲ್ಲಿ ಹೀರೋ-ಐಸಿಸಿ ಟೂರ್ನಿಯಲ್ಲಿ ಝೀರೋ: ಇದು ಟೀಮ್ ಇಂಡಿಯಾ

| Updated By: ಝಾಹಿರ್ ಯೂಸುಫ್

Updated on: Dec 13, 2023 | 8:59 PM

Team India: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯೊಂದಿಗೆ ಭಾರತ ತಂಡವು ಈ ವರ್ಷವನ್ನು ಆರಂಭಿಸಿತ್ತು. ಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆತಿಥೇಯ ಭಾರತ ತಂಡ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು. ಇದರ ಬೆನ್ನಲ್ಲೇ ನ್ಯೂಝಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿತು.

Year Ender 2023: ಸರಣಿಗಳಲ್ಲಿ ಹೀರೋ-ಐಸಿಸಿ ಟೂರ್ನಿಯಲ್ಲಿ ಝೀರೋ: ಇದು ಟೀಮ್ ಇಂಡಿಯಾ
Team India
Follow us on

Team India In 2023: ಭಾರತ ಕ್ರಿಕೆಟ್ ತಂಡವು 2023 ರಲ್ಲಿ ಯಾವುದೇ ಐಸಿಸಿ ಟ್ರೋಫಿಯನ್ನು ಗೆಲ್ಲದಿರಬಹುದು. ಆದರೆ, ಈ ವರ್ಷ ಟೀಮ್ ಇಂಡಿಯಾ (Team India) ಅದ್ಭುತ ಪ್ರದರ್ಶನವಂತು ನೀಡಿದೆ. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು. ಭಾರತ ತಂಡವು ಈ ವರ್ಷ ಟಿ20, ಏಕದಿನ ಮತ್ತು ಟೆಸ್ಟ್ ಸ್ವರೂಪಗಳಲ್ಲಿ ಒಟ್ಟು 11 ದ್ವಿಪಕ್ಷೀಯ ಸರಣಿಗಳನ್ನು ಆಡಿದೆ. ಈ ವೇಳೆ 9 ಸರಣಿಗಳನ್ನು ಗೆದ್ದುಕೊಂಡಿದೆ. ಅಂದರೆ ಕೇವಲ 2 ಸರಣಿಗಳಲ್ಲಿ ಮಾತ್ರ ಭಾರತ ತಂಡ ಪರಾಜಯಗೊಂಡಿದೆ. ಅಷ್ಟೇ ಅಲ್ಲದೆ ಈ ಬಾರಿಯ ವಿಶ್ವಕಪ್​ನಲ್ಲೂ ಸೋಲಿಲ್ಲದ ಸರದಾರನಾಗಿ​ ಫೈನಲ್​ಗೆ ಪ್ರವೇಶಿಸಿತ್ತು. ಆದರೆ ಅಂತಿಮ ಹಣಾಹಣಿಯಲ್ಲಿ ಟೀಮ್ ಇಂಡಿಯಾ ಸೋಲನುಭವಿಸಿ ನಿರಾಸೆ ಮೂಡಿಸಿತು.

ಏಕದಿನ ಸರಣಿಗಳಲ್ಲಿ ಪರಾಕ್ರಮ:

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯೊಂದಿಗೆ ಭಾರತ ತಂಡವು ಈ ವರ್ಷವನ್ನು ಆರಂಭಿಸಿತ್ತು. ಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆತಿಥೇಯ ಭಾರತ ತಂಡ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು. ಇದರ ಬೆನ್ನಲ್ಲೇ ನ್ಯೂಝಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿತು.

ಆದರೆ, ಮಾರ್ಚ್​ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ 1-2 ಅಂತರದ ಸೋಲು ಅನುಭವಿಸಿತು. ವಿಶೇಷ ಎಂದರೆ ಸೆಪ್ಟೆಂಬರ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು 2-1 ಅಂತರದಿಂದ ಗೆಲ್ಲುವ ಮೂಲಕ ಟೀಮ್ ಇಂಡಿಯಾ ಸೇಡು ತೀರಿಸಿಕೊಂಡಿತ್ತು. ಮತ್ತೊಂದೆಡೆ, ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ಭಾರತ 2-1 ರಿಂದ ಗೆದ್ದುಕೊಂಡಿದೆ.

ಟಿ20ಯಲ್ಲೂ ಮಿಂಚಿಂಗ್:

ಈ ವರ್ಷ ಭಾರತ ತಂಡವು ನಾಲ್ಕು ಟಿ20 ಸರಣಿಗಳನ್ನು ಆಡಿದೆ. ಜನವರಿಯಲ್ಲಿ ಶ್ರೀಲಂಕಾವನ್ನು 2-1 ರಿಂದ ಸೋಲಿಸಿದ ಟೀಮ್ ಇಂಡಿಯಾ, ಆ ಬಳಿಕ ನ್ಯೂಝಿಲೆಂಡ್ ವಿರುದ್ಧ 2-1 ಅಂತರದಿಂದ ಜಯ ಸಾಧಿಸಿತ್ತು. ಆಗಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ 2-3 ಅಂತರದಿಂದ ಸೋಲನುಭವಿಸಬೇಕಾಯಿತು. ಆ ಬಳಿಕ ಐರ್ಲೆಂಡ್ ವಿರುದ್ಧ 2-0 ಹಾಗೂ ಆಸ್ಟ್ರೇಲಿಯಾ ವಿರುದ್ಧ 4-1 ಅಂತರದಿಂದ ಟೀಮ್ ಇಂಡಿಯಾ ಜಯಭೇರಿ ಬಾರಿಸಿತ್ತು.

ಟೆಸ್ಟ್​ನಲ್ಲೂ ಪಾಸ್:

ಈ ವರ್ಷ ಭಾರತ ಕೇವಲ ಎರಡು ಟೆಸ್ಟ್ ಸರಣಿಗಳನ್ನು ಮಾತ್ರ ಗೆದ್ದಿದೆ. ಮೊದಲ ಟೆಸ್ಟ್ ಸರಣಿ ಆಸ್ಟ್ರೇಲಿಯಾ ವಿರುದ್ಧವಾಗಿತ್ತು. 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಟೀಮ್ ಇಂಡಿಯಾ 2-1 ಅಂತರದಿಂದ ಗೆದ್ದುಕೊಂಡಿತು. ಇನ್ನು ಜುಲೈನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 1-0 ಅಂತರದಿಂದ ಸೋಲಿಸಿತು.

ಐಸಿಸಿ ಫೈನಲ್​ನಲ್ಲಿ ಮುಗ್ಗರಿಸಿದ ಟೀಮ್ ಇಂಡಿಯಾ:

ಟೀಮ್ ಇಂಡಿಯಾ ಈ ವರ್ಷ 2 ಐಸಿಸಿ ಫೈನಲ್​ಗಳಲ್ಲಿ ಸೋಲನುಭವಿಸಿತ್ತು ಎಂಬುದು ಬೇಸರದ ಸಂಗತಿ. ಇಂಗ್ಲೆಂಡ್​ನ ಓವಲ್​ ಮೈದಾನದಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸುವ ಮೂಲಕ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಳ್ಳುವ ಅವಕಾಶ ಕೈಚೆಲ್ಲಿಕೊಂಡಿತು.

ಇನ್ನು ಈ ಬಾರಿಯ ಏಕದಿನ ವಿಶ್ವಕಪ್​ನಲ್ಲಿ ಅಭೂತಪೂರ್ವ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿತ್ತು. ಆದರೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿ ನಿರಾಸೆ ಮೂಡಿಸಿತು.

ಇದನ್ನೂ ಓದಿ: IPL 2024 Auction: ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 333 ಆಟಗಾರರ ಪಟ್ಟಿ ಇಲ್ಲಿದೆ

ಏಷ್ಯನ್ ಚಾಂಪಿಯನ್​:

ಐಸಿಸಿ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಸೋತರೂ ಈ ಬಾರಿ ಏಷ್ಯಾ ಕಪ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ. ಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನು ಏಕಪಕ್ಷೀಯವಾಗಿ ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು ವಿಶೇಷ. ಒಟ್ಟಾರೆ ಹೇಳುವುದಾದರೆ 2023 ಟೀಮ್ ಇಂಡಿಯಾ ಪಾಲಿಗೆ ಅಭೂತಪೂರ್ವ ಯಶಸ್ಸನ್ನು ನೀಡಿತ್ತು ಎನ್ನಬಹುದು. ಈ ಯಶಸ್ಸಿನ ಹಾದಿಯು 2024 ರಲ್ಲೂ ಮುಂದುವರೆಯುವುದನ್ನು ನಿರೀಕ್ಷಿಸಬಹುದು.