IND A vs SA A: ಸೌತ್ ಆಫ್ರಿಕಾ ವಿರುದ್ಧ ಭರ್ಜರಿ ಶತಕ ಸಿಡಿಸಿದ ಪ್ರದೋಶ್
South Africa A vs India A: ಈ ಹಂತದಲ್ಲಿ ಜೊತೆಗೂಡಿದ ಪ್ರದೋಶ್ ಪೌಲ್ ಹಾಗೂ ಸರ್ಫರಾಝ್ ಖಾನ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. 3ನೇ ವಿಕೆಟ್ಗೆ ಶತಕದ ಜೊತೆಯಾಟವಾಡಿದ ಈ ಜೋಡಿಯು 40 ಓವರ್ಗಳಲ್ಲಿ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು.
ಪೊಟ್ಚೆಫ್ಸ್ಟ್ರೂಮ್ನ ಸೆನ್ವೆಸ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ಎ (South Africa A) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಎ (India A) ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಎ ತಂಡದ ನಾಯಕ ಶ್ರೀಕರ್ ಭರತ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.
ಆರಂಭಿಕ ಆಟಗಾರ ಶೆಕ್ಲೆಟನ್ (0) ಅವರನ್ನು 2ನೇ ಓವರ್ನಲ್ಲಿ ಔಟ್ ಮಾಡುವ ಮೂಲಕ ವಿಧ್ವತ್ ಕಾವೇರಪ್ಪ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಸೌರಭ್ ಕುಮಾರ್ ಎಸೆತದಲ್ಲಿ ಯಾಸೀನ್ ವಲ್ಲಿ (16) ಕ್ಲೀನ್ ಬೌಲ್ಡ್ ಆದರು.
ಈ ಹಂತದಲ್ಲಿ ಜೊತೆಗೂಡಿದ ರೂಬಿನ್ ಹರ್ಮನ್ ಹಾಗೂ ಜೀನ್ ಡುಪ್ಲೆಸಿಸ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 146 ಎಸೆತಗಳನ್ನು ಎದುರಿಸಿದ ಹರ್ಮನ್ 95 ರನ್ಗಳಿಸಿ ಸೌರಭ್ಗೆ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ಜವಾಬ್ದಾರಿಯುತ ಇನಿಂಗ್ಸ್ ಕಟ್ಟಿದ ಜೀನ್ ಡುಪ್ಲೆಸಿಸ್ 213 ಎಸೆತಗಳಲ್ಲಿ 8 ಫೋರ್ ಹಾಗೂ 1 ಸಿಕ್ಸ್ನೊಂದಿಗೆ 106 ರನ್ ಬಾರಿಸಿದರು. ಈ ಹಂತದಲ್ಲಿ ದಾಳಿಗಿಳಿದ ಪ್ರಸಿದ್ಧ್ ಕೃಷ್ಣ ಡುಪ್ಲೆಸಿಸ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಅಷ್ಟೇ ಅಲ್ಲದೆ ಕೊನೆಯ ನಾಲ್ವರು ಆಟಗಾರರ ವಿಕೆಟ್ ಕಬಳಿಸಿ ಪ್ರಸಿದ್ಧ್ ಕೃಷ್ಣ ಐದು ವಿಕೆಟ್ಗಳ ಸಾಧನೆ ಮಾಡಿದರು. ಇದರೊಂದಿಗೆ ಸೌತ್ ಆಫ್ರಿಕಾ ತಂಡವು 319 ರನ್ಗಳಿಸಿ ಆಲೌಟ್ ಆಯಿತು. ಭಾರತ ಎ ತಂಡದ ಪರ ಪ್ರಸಿದ್ಧ್ ಕೃಷ್ಣ ಕೇವಲ 43 ರನ್ಗಳಿಗೆ 5 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು.
ಇದಾದ ಬಳಿಕ ಇನಿಂಗ್ಸ್ ಆರಂಭಿಸಿದ ಭಾರತ ಎ ತಂಡ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ಎಡಗೈ ಆರಂಭಿಕ ಸಾಯಿ ಸುದರ್ಶನ್ ಕೇವಲ 14 ರನ್ಗಳಿಸಿ ವಿಕೆಟ್ ಒಪ್ಪಿಸಿದರೆ, ದೇವದತ್ ಪಡಿಕ್ಕಲ್ 30 ರನ್ ಬಾರಿಸಿ ಔಟಾದರು.
ಈ ಹಂತದಲ್ಲಿ ಜೊತೆಗೂಡಿದ ಪ್ರದೋಶ್ ಪೌಲ್ ಹಾಗೂ ಸರ್ಫರಾಝ್ ಖಾನ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. 3ನೇ ವಿಕೆಟ್ಗೆ ಶತಕದ ಜೊತೆಯಾಟವಾಡಿದ ಈ ಜೋಡಿಯು 40 ಓವರ್ಗಳಲ್ಲಿ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು.
ಅಷ್ಟೇ ಅಲ್ಲದೆ 85 ಎಸೆತಗಳಲ್ಲಿ 68 ರನ್ ಬಾರಿಸಿ ಸರ್ಫರಾಝ್ ಖಾನ್ ಔಟಾದರು. ಇದಾಗ್ಯೂ ಪ್ರದೋಶ್ ಪೌಲ್ ಅಬ್ಬರ ಮಾತ್ರ ನಿಲ್ಲಲಿಲ್ಲ. ಸೌತ್ ಆಫ್ರಿಕಾ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ 22ರ ಹರೆಯದ ಪ್ರದೋಶ್ 141 ಎಸೆತಗಳಲ್ಲಿ ಭರ್ಜರಿ ಶತಕ ಪೂರೈಸಿದರು.
ಸೆಂಚುರಿ ಬಳಿಕ ಉತ್ತಮ ಬ್ಯಾಟಿಂಗ್ ಮುಂದುವರೆಸಿದ ಪ್ರದೋಶ್ 209 ಎಸೆತಗಳಲ್ಲಿ 23 ಫೋರ್ ಹಾಗೂ 1 ಭರ್ಜರಿ ಸಿಕ್ಸ್ನೊಂದಿಗೆ 163 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ಶಾರ್ದೂಲ್ ಠಾಕೂರ್ 70 ರನ್ಗಳ ಕೊಡುಗೆ ನೀಡುವ ಮೂಲಕ ಟೀಮ್ ಇಂಡಿಯಾ ಮೊತ್ತವನ್ನು 350 ರ ಗಡಿದಾಟಿಸಿದರು.
ಅದರಂತೆ ಮೂರನೇ ದಿನದಾಟದ ಮುಕ್ತಾಯದ ವೇಳೆಗೆ ಭಾರತ ಎ ತಂಡವು 6 ವಿಕೆಟ್ ಕಳೆದುಕೊಂಡು 377 ರನ್ ಕಲೆಹಾಕಿದೆ. ಈ ಮೂಲಕ 58 ರನ್ಗಳ ಅಲ್ಪ ಮುನ್ನಡೆ ಸಾಧಿಸಿದೆ.
ಸೌತ್ ಆಫ್ರಿಕಾ ಎ ಪ್ಲೇಯಿಂಗ್ ಇಲೆವೆನ್: ಕ್ಯಾಮರೂನ್ ಶೆಕ್ಲೆಟನ್ , ಯಾಸೀನ್ ವಲ್ಲಿ , ರೂಬಿನ್ ಹರ್ಮನ್ , ಜೀನ್ ಡು ಪ್ಲೆಸಿಸ್ , ಬ್ರೈಸ್ ಪಾರ್ಸನ್ಸ್ (ನಾಯಕ) , ಕಾನರ್ ಎಸ್ಟರ್ಹ್ಯೂಜೆನ್ (ವಿಕೆಟ್ ಕೀಪರ್) , ಇವಾನ್ ಜೋನ್ಸ್ , ಈಥನ್ ಬಾಷ್ , ಕರ್ಟ್ಲಿನ್ ಮನ್ನಿಕಮ್ , ಸಿಯಾ ಪ್ಲಾಟ್ಜಿ , ಒಡಿರಿಲ್ ಮೊಡಿಮೊಕೋನೆ.
ಇದನ್ನೂ ಓದಿ: ಧೋನಿ ದಾಖಲೆ ಮುರಿದ ಸೂರ್ಯಕುಮಾರ್ ಯಾದವ್
ಭಾರತ ಎ ಪ್ಲೇಯಿಂಗ್ ಇಲೆವೆನ್: ಸಾಯಿ ಸುದರ್ಶನ್ , ದೇವದತ್ ಪಡಿಕ್ಕಲ್ , ಶ್ರೀಕರ್ ಭರತ್ (ನಾಯಕ) , ಪ್ರದೋಶ್ ಪೌಲ್ , ಸರ್ಫರಾಝ್ ಖಾನ್ , ಧ್ರುವ ಜುರೆಲ್ , ಶಾರ್ದೂಲ್ ಠಾಕೂರ್ , ಸೌರಭ್ ಕುಮಾರ್ , ತುಷಾರ್ ದೇಶಪಾಂಡೆ , ಪ್ರಸಿದ್ಧ್ ಕೃಷ್ಣ , ವಿಧ್ವತ್ ಕಾವೇರಪ್ಪ.