ಒಂದು ತಂಡದಿಂದ ಬೇರೊಂದು ತಂಡಕ್ಕೆ ಸೇರಲು ಅಡ್ಡದಾರಿ ಹಿಡಿದ ಯುವ ಕ್ರಿಕೆಟಿಗನ ವಿರುದ್ದ ತ್ರಿಪುರಾದಲ್ಲಿ ಎಫ್ಐಆರ್ ದಾಖಲಾಗಿದೆ. ಇತ್ತೀಚೆಗಷ್ಟೇ ಟೀಮ್ ಇಂಡಿಯಾ ಆಟಗಾರ ವೃದ್ಧಿಮಾನ್ ಸಹಾ ಬಂಗಾಳ ತಂಡದಿಂದ ತ್ರಿಪುರಾ ರಣಜಿ ತಂಡಕ್ಕೆ ತೆರಳಿದ್ದರು. ಅವರಂತೆಯೇ, ಬಂಗಾಳದ ಯುವ ಆಟಗಾರನು ತನ್ನ ತಂಡವನ್ನು ತೊರೆಯಲು ಮುಂದಾಗಿದ್ದಾರೆ. ಅಲ್ಲದೆ ತ್ರಿಪುರಾ ತಂಡವನ್ನು ಪ್ರತಿನಿಧಿಸಲು ಬಯಸಿದ್ದರು. ಇದಕ್ಕಾಗಿ ಅಡ್ಡದಾರಿ ಹಿಡಿದು ಈಗ ಸಿಕ್ಕಿಬಿದ್ದಿದ್ದಾರೆ. ಅದರಂತೆ ತ್ರಿಪುರಾ ಅಂಡರ್-19 ತಂಡಕ್ಕೆ ಸೇರಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಕ್ರಿಕೆಟಿಗನ ವಿರುದ್ಧ ಪ್ರಕರಣ ದಾಖಲಾಗಿದೆ.
ಪಿಟಿಐ ವರದಿ ಪ್ರಕಾರ, ಪಶ್ಚಿಮ ಬಂಗಾಳದ ಬ್ಯಾರಕ್‌ಪೋರ್‌ನ ಯುವ ಕ್ರಿಕೆಟಿಗ ತ್ರಿಪುರಾ ಪರ ಆಡಲು ಖಾಯಂ ನಿವಾಸಿ ಪ್ರಮಾಣಪತ್ರ (ಪಿಆರ್‌ಟಿಸಿ) ಮತ್ತು ತ್ರಿಪುರದ ಪಡಿತರ ಚೀಟಿಯಂತಹ ನಕಲಿ ದಾಖಲೆಗಳನ್ನು ಮಾಡಿದ್ದಾರೆ. ಈ ಯುವ ಕ್ರಿಕೆಟಿಗನ ಹೆಸರನ್ನು ಬಿಶಾಲ್‌ಗಢ ಕ್ರಿಕೆಟ್ ಸಂಸ್ಥೆಯು ಅಂಡರ್-19 ಟ್ರಯಲ್ಸ್‌ಗಾಗಿ ತ್ರಿಪುರಾ ಕ್ರಿಕೆಟ್ ಸಂಸ್ಥೆಗೆ (ಟಿಸಿಎ) ಶಿಫಾರಸು ಮಾಡಿತ್ತು. ಅಸೋಸಿಯೇಷನ್ ಜುಲೈ 11 ರಂದು ಪ್ರಕಟಿಸಿದ 19 ವರ್ಷದೊಳಗಿನವರ ತಂಡದಲ್ಲಿ ಈ ಆಟಗಾರನ ಹೆಸರೂ ಇತ್ತು. ಆದರೆ ನಕಲಿ ದಾಖಲೆಗಳನ್ನು ನೀಡಿರುವುದು ಬೆಳಕಿಗೆ ಬರುತ್ತಿದ್ದಂತೆ ಟಿಸಿಎ ಕಾರ್ಯದರ್ಶಿ ಕಿಶೋರ್ ದಾಸ್ ಈ ಆಟಗಾರನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಅದರ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಕಳೆದ ಕೆಲ ಸಮಯದಿಂದ, ಅನೇಕ ಆಟಗಾರರು ತ್ರಿಪುರಾ ರಾಜ್ಯ ತಂಡಗಳತ್ತ ಮುಖ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳ ಆಟಗಾರ ವೃದ್ದಿಮಾನ್ ಸಹಾ ಅವರು 2022-2023ರ ದೇಶೀಯ ಸೀಸನ್ನಲ್ಲಿ ತ್ರಿಪುರಾ ಸೀನಿಯರ್ ತಂಡದ ಪರ ಆಡಲಿದ್ದಾರೆ. ಇದರ ಬೆನ್ನಲ್ಲೇ ಬಂಗಾಳ ತಂಡದ ಯುವ ಆಟಗಾರ ನಕಲಿ ದಾಖಲೆಯೊಂದಿಗೆ ತ್ರಿಪುರ ಪರ ಕಣಕ್ಕಿಳಿಯಲು ಯತ್ನಿಸಿ ಇದೀಗ ಸಿಕ್ಕಿಬಿದ್ದಿದ್ದಾನೆ.
Published On - 6:31 pm, Sun, 17 July 22