IPL 2022: ಐಪಿಎಲ್ ಸೀಸನ್ 15 ನ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (MI vs DC) ತಂಡಗಳು ಮುಖಾಮುಖಿಯಾಗಿತ್ತು. ಆರ್ಸಿಬಿ (RCB) ಹಾಗೂ ಡೆಲ್ಲಿ ಪಾಲಿಗೆ ನಿರ್ಣಾಯಕವಾಗಿದ್ದ ಈ ಪಂದ್ಯವನ್ನು ಮೂರು ತಂಡಗಳ ಅಭಿಮಾನಿಗಳು ಎದುರು ನೋಡಿದ್ದರು. ಅದರಲ್ಲೂ ಮುಂಬೈ ಇಂಡಿಯನ್ಸ್ ತಂಡವನ್ನು ಹುರಿದುಂಬಿಸಲು ಆರ್ಸಿಬಿ ಅಭಿಮಾನಿಗಳು ಕೂಡ ಸ್ಟೇಡಿಯಂನತ್ತ ಮುಖಮಾಡಿದ್ದರು. ಅದರಂತೆ ಮುಂಬೈ ಇಂಡಿಯನ್ಸ್ ತಂಡವು ಗೆಲುವಿನ ಹಾದಿಯತ್ತ ಸಾಗುತ್ತಿದ್ದಂತೆ ಸ್ಟೇಡಿಯಂನಲ್ಲಿ ಆರ್ಸಿಬಿ ಜಯಘೋಷ ಮುಗಿಲುಮುಟ್ಟಿತ್ತು.
ಇತ್ತ ಆರ್ಸಿಬಿ ಅಭಿಮಾನಿಗಳ ಘೋಷಣೆಗಳು ಮೊಳಗುತ್ತಿದ್ದಂತೆ ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಮತ್ತಷ್ಟು ಒತ್ತಡಕ್ಕೆ ಒಳಗಾದಂತೆ ಭಾಸವಾಗಿದ್ದರು. ಇದೀಗ ಆರ್ಸಿಬಿ ಅಭಿಮಾನಿಗಳ ಫುಲ್ ಚಿಯರಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲೂ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಎಷ್ಟು ಆರ್ಸಿಬಿ ಅಭಿಮಾನಿಗಳಿದ್ದರೂ ಎಂಬುದನ್ನು ವಾಂಖೆಡೆ ಸ್ಟೇಡಿಯಂನಲ್ಲಿ ಮೊಳಗಿದ ಈ ಘೋಷಣೆಯನ್ನು ಕೇಳಿದ್ರೆ ಊಹಿಸಿಕೊಳ್ಳಬಹುದು.
ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಮುಂಬೈ ಇಂಡಿಯನ್ಸ್ ಭರ್ಜರಿ ಜಯ ಸಾಧಿಸಿಸುವುದರೊಂದಿಗೆ ಆರ್ಸಿಬಿ ತಂಡವು ಪ್ಲೇಆಫ್ಗೆ ಎಂಟ್ರಿ ಕೊಟ್ಟಿದೆ. ಡೆಲ್ಲಿ ಪಾಲಿಗೆ ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ಸೋಲುವ ಮೂಲಕ ರಿಷಭ್ ಪಂತ್ ಪಡೆ ಪಾಯಿಂಟ್ ಟೇಬಲ್ನಲ್ಲಿ 5ನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಇದರೊಂದಿಗೆ 4ನೇ ಸ್ಥಾನದಲ್ಲಿರುವ ಆರ್ಸಿಬಿ ತಂಡವು ಪ್ಲೇಆಫ್ಗೆ ಪ್ರವೇಶಿಸಿದ್ದು, ಅದರಂತೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ ಎಲಿಮಿನೇಟರ್ ಪಂದ್ಯವಾಡಲಿದೆ.
Chants of rcb rcb all over the stadium ??#DCvsMI pic.twitter.com/Rhv73FUx0s
— S (@kokkilidevara) May 21, 2022
ಇನ್ನು ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರಲಿಲ್ಲ. ರೋವ್ಮನ್ ಪೊವೆಲ್ ಅವರ 43 ರನ್ಗಳ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿತು.
160 ರನ್ಗಳ ಟಾರ್ಗೆಟ್ ಪಡೆದ ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶನ್ (48), ಡೆವಾಲ್ಡ್ ಬ್ರೆವಿಸ್ (37) ಹಾಗೂ ಟಿಮ್ ಡೇವಿಡ್ (34) ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಂತೆ 19.1 ಓವರ್ಗಳಲ್ಲಿ 160 ರನ್ಗಳ ಗುರಿ ತಲುಪುವ ಮೂಲಕ ಮುಂಬೈ ಇಂಡಿಯನ್ಸ್ ಗೆಲುವಿನೊಂದಿಗೆ ಐಪಿಎಲ್ 2022ರ ಅಭಿಯಾನವನ್ನು ಅಂತ್ಯಗೊಳಿಸಿದೆ. ಇತ್ತ ಮುಂಬೈ ಇಂಡಿಯನ್ಸ್ ಗೆಲುವಿನೊಂದಿಗೆ ಆರ್ಸಿಬಿ ತಂಡವು 8ನೇ ಬಾರಿಗೆ ಪ್ಲೇಆಫ್ ಪ್ರವೇಶಿಸಿದೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.