CSK ತಂಡದ ಸ್ಟಾರ್ ಆಟಗಾರ ಅಂಬಾಟಿ ರಾಯುಡು (Ambati Rayudu) ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಬಾರಿಯ ಐಪಿಎಲ್ ನನ್ನ ಕೊನೆಯ ಟೂರ್ನಿಯಾಗಿದ್ದು, ಈ ಮೂಲಕ ನಾನು ಐಪಿಎಲ್ಗೆ ಗುಡ್ ಬೈ ಹೇಳುತ್ತಿದ್ದೇನೆ ಎಂದು ರಾಯುಡು ಟ್ವೀಟ್ ಮಾಡಿ ತಿಳಿಸಿದ್ದರು. ಆದರೆ ನಿವೃತ್ತಿ ಘೋಷಿಸಿದ ಕೆಲವೇ ಕ್ಷಣಗಳಲ್ಲಿ ಟ್ವೀಟ್ ಡಿಲೀಟ್ ಮಾಡುವ ಮೂಲಕ ಅಂಬಾಟಿ ರಾಯುಡು ಅಚ್ಚರಿ ಮೂಡಿಸಿದ್ದಾರೆ. ಇತ್ತ ರಾಯುಡು ನಿವೃತ್ತಿ ಘೋಷಿಸಿರುವ ಸುದ್ದಿ ವೈರಲ್ ಆಗಿದ್ದು, ಇದಾಗ್ಯೂ ಆ ಬಳಿಕ ಸಿಎಸ್ಕೆ ಆಟಗಾರ ಯಾವುದೇ ಸ್ಪಷ್ಟನೆ ನೀಡಿಲ್ಲ.
2013 ರಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರತದ ಪರ ಪದಾರ್ಪಣೆ ಮಾಡಿದ್ದ ರಾಯುಡು 55 ODI ಪಂದ್ಯಗಳಲ್ಲಿ 3 ಶತಕ ಮತ್ತು 10 ಅರ್ಧ ಶತಕಗಳನ್ನು ಒಳಗೊಂಡಂತೆ 1694 ರನ್ ಕಲೆಹಾಕಿದ್ದಾರೆ. ಹಾಗೆಯೇ, 2016 ರಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ರಾಯುಡು 6 ಟಿ20 ಪಂದ್ಯಗಳಲ್ಲಿ 42 ರನ್ ಗಳಿಸಿದ್ದರು.
2019 ರ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಅಕಾಂಕ್ಷಿಯಾಗಿದ್ದ ರಾಯುಡುಗೆ ತಂಡದಲ್ಲಿ ಚಾನ್ಸ್ ಸಿಕ್ಕಿರಲಿಲ್ಲ. ಈ ಬಗ್ಗೆ ಆಯ್ಕೆಗಾರರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದ ರಾಯುಡು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರಣೆ ನಿವೃತ್ತಿ ನೀಡಿದ್ದರು. ಇದಾದ ಬಳಿಕ ಐಪಿಎಲ್ನಲ್ಲಿ ಮುಂದುವರೆದಿದ್ದ ಹೈದರಾಬಾದ್ನ ಆಟಗಾರ ಈ ಬಾರಿ ನಿರೀಕ್ಷಿತ ಆಟ ಪ್ರದರ್ಶಿಸಿರಲಿಲ್ಲ.
ಐಪಿಎಲ್ 2022 ರಲ್ಲಿ ಅಂಬಟಿ ರಾಯುಡು ಆಡಿರುವ 12 ಪಂದ್ಯಗಳಲ್ಲಿ 27.10 ಸರಾಸರಿಯಲ್ಲಿ 271 ರನ್ ಗಳಿಸಿದ್ದಾರೆ. ಇತ್ತ ಸಿಎಸ್ಕೆ ತಂಡವು ಪ್ಲೇಆಫ್ ರೇಸ್ನಿಂದ ಹೊರಬಿದ್ದಿದ್ದು, ಇದರ ಬೆನ್ನಲ್ಲೇ ಅಂಬಾಟಿ ರಾಯುಡು ಕೂಡ ಐಪಿಎಲ್ಗೆ ಗುಡ್ ಬೈ ಹೇಳುವುದಾಗಿ ತಿಳಿಸಿದ್ದಾರೆ. ಆದರೆ ಆ ಬಳಿಕ ಟ್ವೀಟ್ ಅಳಿಸಿ ಹಾಕುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸಿಎಸ್ಕೆ ಪರ ಆಡಿರುವ 36 ವರ್ಷದ ಅಂಬಾಟಿ ರಾಯುಡು 187 ಪಂದ್ಯಗಳಿಂದ ಒಟ್ಟು 4187 ರನ್ ಕಲೆಹಾಕಿದ್ದಾರೆ. ಈ ವೇಳೆ ಒಂದು ಶತಕ ಹಾಗೂ 22 ಅರ್ಧಶತಕಗಳು ಮೂಡಿಬಂದಿವೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.