ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಮುಟ್ಟಿದೆಲ್ಲಾ ಚಿನ್ನ ಎಂಬ ಮಾತಿದೆ. ಇದಕ್ಕೆ ಸಾಕ್ಷಿಯೇ ಧೋನಿಯ ಕ್ರಿಕೆಟ್ ಕೆರಿಯರ್. ಝೀರೋದಿಂದ ಶುರುವಾದ ಅವರ ಕ್ರಿಕೆಟ್ ಪಯಣ ಅಂತ್ಯವಾಗಿದ್ದು ಅತ್ಯಂತ ಯಶಸ್ವಿ ನಾಯಕ ಎಂಬ ಹೀರೋ ಪಟ್ಟದೊಂದಿಗೆ ಎಂಬುದು ವಿಶೇಷ. ಆ ಬಳಿಕ ಒಂದಷ್ಟು ಬ್ಯುಸಿನೆಸ್ನಲ್ಲೂ ಧೋನಿ ತೊಡಗಿಸಿಕೊಂಡಿದ್ದರು. ಅತ್ತ ಧೋನಿಯ ಹೆಸರು ತಳುಕು ಹಾಕಿಕೊಳ್ಳುತ್ತಿದ್ದಂತೆ ಅವರ ಮಾಡುತ್ತಿದ್ದ ವ್ಯವಹಾರಗಳಿಗೆ ಭಾರೀ ಪ್ರಚಾರ ಕೂಡ ಲಭಿಸುತ್ತಿತ್ತು. ಇದೀಗ ಕ್ರಿಕೆಟ್ನಿಂದ ನೇರವಾಗಿ ಧೋನಿ ಸಿನಿರಂಗಕ್ಕೆ ಕಾಲಿಡಲು ಮುಂದಾಗಿದ್ದಾರೆ. ಕ್ರಿಕೆಟ್ಗೂ ಸಿನಿಮಾಗೂ ಅವಿನಾಭಾವ ಸಂಬಂಧ ಇದ್ದರೂ, ಧೋನಿಯ ಎಂಟ್ರಿ ಮಾತ್ರ ವಿಶೇಷವಾಗಿದೆ. ಏಕೆಂದರೆ ಸಿನಿರಂಗಕ್ಕೆ ಧೋನಿ ಬರುತ್ತಿರುವುದು ನಟನಾಗಿ ಅಲ್ಲ, ಬದಲಾಗಿ ಚಿತ್ರ ನಿರ್ಮಾಪಕನಾಗಿ ಎಂಬುದು ವಿಶೇಷ.
ಹೌದು, ಮಹೇಂದ್ರ ಸಿಂಗ್ ಧೋನಿ ಕಾಲಿವುಡ್ ಅಂಗಳಕ್ಕೆ ನಿರ್ಮಾಪಕರಾಗಿ ಕಾಲಿಡುತ್ತಿದ್ದಾರೆ. ಈಗಾಗಲೇ ವಿಶ್ವದಾದ್ಯಂತ ಸಿನಿಪ್ರಿಯರನ್ನು ಸೆಳೆದಿರುವ ಕಾಲಿವುಡ್ ಚಿತ್ರದ ಮೂಲಕ ಹೊಸ ಇನಿಂಗ್ಸ್ ಆರಂಭಿಸಲು ಸಿಎಸ್ಕೆ ನಾಯಕ ಮುಂದಾಗಿದ್ದಾರೆ. ಇದಕ್ಕಾಗಿ ಈಗಾಗಲೇ ಒಂದು ಸುತ್ತಿನ ಮಾತುಕತೆ ಕೂಡ ನಡೆದಿದೆ. ಸಿನಿರಂಗದ ಮೂಲಗಳ ಮಾಹಿತಿ ಪ್ರಕಾರ, ಧೋನಿ ತಮಿಳು ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಯನತಾರಾ ನಾಯಕಿಯಾಗಿ ನಟಿಸಲಿರುವ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ.
ಈ ಬಗ್ಗೆ ನಯನತಾರಾ ಜೊತೆ ಕೂಡ ಮಾತುಕತೆ ನಡೆದಿದ್ದು, ಅತ್ತ ಲೇಡಿ ಸೂಪರ್ ಸ್ಟಾರ್ ಕಡೆಯಿಂದ ಕೂಡ ಗ್ರೀನ್ ಸಿಗ್ನಲ್ ಸಿಕ್ಕಿದೆಯಂತೆ. ಹೀಗಾಗಿ ಈ ಚಿತ್ರವು ಶೀಘ್ರದಲ್ಲೇ ಸೆಟ್ಟೇರುವ ಸಾಧ್ಯತೆಯಿದೆ. ಇದಾಗ್ಯೂ ಚಿತ್ರದ ನಿರ್ದೇಶಕ ಯಾರು ಹಾಗೂ ಇತರೆ ತಾರಾಬಳಗದಲ್ಲಿ ಯಾರೆಲ್ಲಾ ಇದ್ದಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ.
ಧೋನಿ ಕಾಲಿವುಡ್ಗೆ ಕಾಲಿಡುತ್ತಿರುವುದೇಕೆ? 2016 ರಲ್ಲಿ ಮಹೇಂದ್ರ ಸಿಂಗ್ ಧೋನಿ ಜೀವನಾಧಾರಿತ ಚಿತ್ರ ಎಂಎಸ್ ಧೋನಿ- ದಿ ಅನ್ಟೋಲ್ಡ್ ಸ್ಟೋರಿ ಚಿತ್ರವು ಹಿಂದಿ ಹಾಗೂ ತಮಿಳಿನಲ್ಲಿ ತೆರೆಕಂಡಿತ್ತು. ಈ ವೇಳೆ ತಮಿಳುನಾಡಿನಾದ್ಯಂತ ಈ ಚಿತ್ರವು ಭರ್ಜರಿ ಪ್ರದರ್ಶನ ಕಂಡಿತು. ಇತ್ತ ಸಿಎಸ್ಕೆ ಫೇಮ್ನೊಂದಿಗೆ ತಮಿಳುನಾಡಿನ ಅಭಿಮಾನಿಗಳ ಪಾಲಿನ ಥಲಾ ಎಂದೇ ಖ್ಯಾತರಾಗಿರುವ ಧೋನಿ ಚಿತ್ರವೊಂದನ್ನು ನಿರ್ಮಿಸಿದರೆ ಅದು ಕಾಲಿವುಡ್ನಲ್ಲಿ ಯಶಸ್ವಿಯಾಗುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಕಾಲಿವುಡ್ ಮೂಲಕವೇ ಹೊಸ ಇನಿಂಗ್ಸ್ ಆರಂಭಿಸಲು ಧೋನಿ ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಹೊಸ ಉದ್ಯಮದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಆಪ್ತ ಸಹಾಯಕ ಸಂಜಯ್ ಅವರನ್ನು ನೇಮಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೊಂದು ಮಹಿಳಾ ಕೇಂದ್ರಿತ ಮನರಂಜನಾ ಚಿತ್ರ ಎನ್ನಲಾಗಿದ್ದು, ಹೀಗಾಗಿಯೇ ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಏಕೆಂದರೆ ಸೌತ್ ಸಿನಿರಂಗದಲ್ಲಿ ನಯನತಾರಾ ಅತ್ಯಂತ ಯಶಸ್ವಿ ನಟಿ. ಅದರಲ್ಲೂ ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಪ್ರೇಕ್ಷಕರಿಗೆ ನಯನತಾರಾ ಚಿರಪರಿಚಿತ. ಈ ಹಿಂದೆ ಕನ್ನಡದಲ್ಲಿ ಉಪೇಂದ್ರ ನಿರ್ದೇಶನದ ಸೂಪರ್ ಚಿತ್ರದಲ್ಲಿ ಸೌತ್ ಸುಂದರಿ ಕಾಣಿಸಿಕೊಂಡಿದ್ದರು. ಹೀಗಾಗಿ ತಮಿಳಿನಲ್ಲಿ ಚಿತ್ರ ನಿರ್ಮಿಸಿದರೂ ಉಳಿದ ಭಾಷೆಗಳಲ್ಲಿ ಡಬ್ ಮಾಡುವ ಮೂಲಕ ಪ್ರೇಕ್ಷಕರನ್ನು ಸೆಳೆಯಬಹುದು. ಈ ಎಲ್ಲಾ ಪ್ಲ್ಯಾನ್ಗಳೊಂದಿಗೆ ಮಹೇಂದ್ರ ಸಿಂಗ್ ಧೋನಿ ಸಿನಿರಂಗದಲ್ಲಿ ಹೊಸ ಇನಿಂಗ್ಸ್ ಆರಂಭಿಸಲು ಮುಂದಾಗಿದ್ದಾರೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.