ಇಂಗ್ಲೆಂಡ್ ಪ್ರವಾಸದಲ್ಲಿರುವ ನ್ಯೂಜಿಲೆಂಡ್ (England vs New Zealand) ಕ್ರಿಕೆಟ್ ತಂಡ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಲಂಡನ್ನ ಲಾರ್ಡ್ಸ್ (Lords) ಮೈದಾನದಲ್ಲಿ ಆರಂಭವಾಗಿರುವ ಪ್ರಥಮ ಟೆಸ್ಟ್ನ ದ್ವಿತೀಯ ದಿನದಾಟದ ಅಂತ್ಯಕ್ಕೆ ಕಿವೀಸ್ ಪಡೆ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಕಳೆದುಕೊಂಡು 236 ರನ್ ಕಲೆಹಾಕಿದೆ. ಡ್ಯಾರಿ ಮಿಚೆಲ್ (Daryl Mitchell) ಹಾಗೂ ಟಾಮ್ ಬ್ಲಂಡೆಲ್ ಕ್ರೀಸ್ ಕಚ್ಚಿ ಆಡುತ್ತಿದ್ದು ಶತಕದ ಅಂಚಿನಲ್ಲಿದ್ದಾರೆ. ಒಟ್ಟಾರೆ ನ್ಯೂಜಿಲೆಂಡ್ ಎರಡನೇ ದಿನಕ್ಕೇ 227 ರನ್‌ಗಳ ಮುನ್ನಡೆ ಸಾಧಿಸಿದೆ. ಮಿಚೆಲ್ ಹಾಗೂ ಬ್ಲಂಡೆಲ್ ಜೋಡಿ ಎರಡನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಕುಸಿಯುವುದರಿಂದ ತಡೆದಿದ್ದು ಮಾತ್ರವಲ್ಲ ಸವಾಲಿನ ಮೊತ್ತ ಪೇರಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಬ್ಯಾಟಿಂಗ್ ಆರಂಭಿಸಿದ ಕಿವೀಸ್ ಪಡೆ ಭಾರೀ ಆಘಾತಕ್ಕೆ ಒಳಗಾಗಿ ಅಗ್ರ ಕ್ರಮಾಂಕದ ಆರು ಆಟಗಾರರು ಶೀಘ್ರವಾಗಿ ವಿಕೆಟ್ ಒಪ್ಪಿಸಿ ಫೆವಿಲಿಯನ್‌ಗೆ ಸೇರಿದರು. ಇಂಗ್ಲೆಂಡ್ ತಂಡಕ್ಕೆ ಅನುಭವಿ ಜೇಮ್ಸ್ ಆಂಡರ್ಸನ್ ಹಾಗೂ ಚೊಚ್ಚಲ ಪಂದ್ಯವಾಡುತ್ತಿರುವ ಮ್ಯಾಟಿ ಪಾಟ್ಸ್ ತಲಾ 4 ವಿಕೆಟ್ಸ್ ಪಡೆದು ಮಿಂಚಿದರು. ಪ್ರಮುಖ ಬ್ಯಾಟರ್ಗಳ ವೈಫಲ್ಯದ ನಡುವೆಯೂ ಕೆಳ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಕಾಲಿನ್ ಡಿಗ್ರ್ಯಾಂಡ್ಹೊಮ್ 42(50), ಟಿಮ್ ಸೌಥಿ 26(23) ಉಪಯುಕ್ತ ಬ್ಯಾಟಿಂಗ್ ಮೂಲಕ ನೆರವಾದರು. ಪರಿಣಾಮ ಶತಕದ ಗಡಿದಾಟಿದ ಕಿವೀಸ್ 132 ರನ್‌ಗಳಿಗೆ ಸರ್ವಪತನ ಕಂಡಿತು.
ನಂತರ ತನ್ನ ಮೊದಲ ಇನ್ನಿಂಗ್ಸ್ ಶುರುಮಾಡಿದ ಇಂಗ್ಲೆಂಡ್ ಪರ ಆರಂಭಿಕರಾಗಿ ಕಣಕ್ಕಿಳಿದ ಅಲೆಕ್ಸ್ ಲೀಸ್ 25(77) ಹಾಗೂ ಜ್ಯಾಕ್ ಕ್ರಾವ್ಲೆ 43(56) ಮೊದಲ ವಿಕೆಟ್‌ಗೆ 59 ರನ್ ಗಳ ಭರ್ಜರಿ ಆರಂಭ ನೀಡಿದರು. ಆದರೆ ನಂತರದಲ್ಲಿ ನಾಟಕೀಯ ಕುಸಿತ ಕಂಡ ಆಂಗ್ಲರ ಪಡೆ, ಕೇವಲ 25 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಭಾರೀ ಆಘಾತ ಕಂಡಿತು. ಮಧ್ಯಮ ಕ್ರಮಾಂಕದಲ್ಲಿ ಬಂದ ನಾಯಕ ಬೆನ್ ಸ್ಟೋಕ್ಸ್(1) ಸೇರಿದಂತೆ ಯಾವುದೇ ಆಟಗಾರರು ನೆಲಕಚ್ಚಿ ಆಡಲಿಲ್ಲ. ಮೊದಲ ದಿನದಂತ್ಯಕ್ಕೆ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿ ದ್ವಿತೀಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.
Asia Cup 2022: ಶ್ರೀಲಂಕಾ ಏಷ್ಯಾಕಪ್ ಆತಿಥ್ಯ ವಹಿಸಬೇಕೆಂದರೆ ಈ ಸರಣಿ ಯಶಸ್ವಿಯಾಗಲೇಬೇಕು..!
ಎರಡನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ 20 ರನ್‌ಗಳನ್ನು ಸೇರಿಸುವಲ್ಲಿ ಮಾತ್ರವೇ ಯಶಸ್ವಿಯಾಗಿ 141 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 9 ರನ್‌ಗಳ ಅಲ್ಪ ಮುನ್ನಡೆಯನ್ನು ಪಡೆಯಿತು. ಅದಾದ ಬಳಿಕ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಮತ್ತೊಮ್ಮೆ ಕುಸಿತ ಕಾಣುತ್ತಾ ಸಾಗಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಟಾಮ್ ಲಾಥಂ(14), ವಿಲ್ ಯಂಗ್(1), ಕೇನ್ ವಿಲಿಯಂಸನ್(15) ಹಾಗೂ ಡ್ವೇನ್ ಕಾನ್ವೆ(13) ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲರಾದರು. ಪರಿಣಾಮ ಕಿವೀಸ್ ಪಡೆ 56 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.
ಆದರೆ, 5ನೇ ವಿಕೆಟ್‌ಗೆ ಜೊತೆಯಾದ ಟಾಮ್ ಬ್ಲಂಡೆಲ್(90*) ಹಾಗೂ ಡ್ಯಾರಿ ಮಿಚೆಲ್(97*) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಟಾಪ್ ಆರ್ಡರ್ ವೈಫಲ್ಯದ ನಡುವೆಯೂ ಜವಾಬ್ದಾರಿಯುತ ಆಟವಾಡಿದ ಈ ಜೋಡಿ 5ನೇ ವಿಕೆಟ್‌ಗೆ ಅಜೇಯ 180 ರನ್‌ಗಳ ಜೊತೆಯಾಟದಿಂದ ತಂಡಕ್ಕೆ ಆಸರೆಯಾದರು. ಪರಿಣಾಮ 2ನೇ ದಿನದ ಅಂತ್ಯಕ್ಕೆ ನ್ಯೂಜಿಲೆಂಡ್ 4 ವಿಕೆಟ್ ನಷ್ಟಕ್ಕೆ 236 ರನ್‌ಗಳಿಸಿದ್ದು, 227 ರನ್‌ಗಳ ಮುನ್ನಡೆ ಪಡೆದುಕೊಂಡಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:58 am, Sat, 4 June 22