ಕೆಲವೇ ದಿನಗಳ ಹಿಂದೆ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ಗೆ ತನ್ನ ತವರು ಮೈದಾನವಾದ ಸಿಡ್ನಿಯಲ್ಲೇ ವಿದಾಯ ಹೇಳಿದ್ದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ (David Warner) ಇದೀಗ ಬಿಗ್ ಬ್ಯಾಷ್ ಲೀಗ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಗ್ ಬ್ಯಾಷ್ನಲ್ಲಿ (Big Bash League) ಇಂದು ಸಿಡ್ನಿ ಥಂಡರ್ ಮತ್ತು ಸಿಡ್ನಿ ಸಿಕ್ಸರ್ಸ್ ತಂಡಗಳ ನಡುವೆ ಪಂದ್ಯ ನಡೆಯಿತು. ಈ ಪಂದ್ಯ ಆರಂಭಕ್ಕೂ ಮುನ್ನ ಸಿಡ್ನಿ ಥಂಡರ್ ಪರ ಕಣಕ್ಕಿಳಿಯುವ ಸಲುವಾಗಿ ಡೇವಿಡ್ ವಾರ್ನರ್ ಸಿಡ್ನಿ ಮೈದಾನಕ್ಕೆ ಆಗಮಿಸಿದರು. ಸಿಡ್ನಿ ಮೈದಾನಕ್ಕೆ ವಾರ್ನರ್ ಆಗಮನ ಹೇಗಿತ್ತೆಂದರೆ ಕ್ರಿಕೆಟ್ ಇತಿಹಾಸದಲ್ಲೇ ಕ್ರಿಕೆಟಿಗೊಬ್ಬನಿಗೆ ಈ ರೀತಿಯ ಗ್ಯ್ರಾಂಡ್ ಎಂಟ್ರಿ ಹಿಂದೆಂದೂ ಸಿಕ್ಕಿರಲಿಲ್ಲ. ವಾಸ್ತವವಾಗಿ ರಾಷ್ಟ್ರೀಯ ತಂಡಕ್ಕೆ ವಿದಾಯ ಹೇಳಿದ್ದ ಬಳಿಕ ಟಿ20 ಲೀಗ್ನಲ್ಲಿ ಕಣಕ್ಕಿಳಿಯುತ್ತಿರುವ ವಾರ್ನರ್ರನ್ನು ಹೆಲಿಕಾಪ್ಟರ್ (helicopter) ಮೂಲಕ ನೇರವಾಗಿ ಸಿಡ್ನಿ ಮೈದಾನಕ್ಕೆ ಕರೆತರಲಾಯಿತು. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಕ್ರಿಕೆಟಿಗನೊಬ್ಬ ಕ್ರಿಕೆಟ್ ಮೈದಾನಕ್ಕೆ ಹೆಲಿಕಾಪ್ಟರ್ನಲ್ಲಿ ಬಂದಿಳಿದ ದಾಖಲೆ ಡೇವಿಡ್ ವಾರ್ನರ್ ಹೆಸರಿನಲ್ಲಿ ದಾಖಲಾಯಿತು.
ಅಷ್ಟಕ್ಕೂ ವಾರ್ನರ್ ಅವರ ಈ ರೀತಿಯ ಗ್ರ್ಯಾಂಡ್ ಎಂಟ್ರಿಯ ಹಿಂದೆ ಕಾರಣವೂ ಇದೆ. ಅದೆನೆಂದರೆ ಇಂದು ವಾರ್ನರ್ ಅವರ ಸಹೋದರ ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ಹಾಗಾಗಿ ಸಹೋದರನ ಮದುವೆಯಲ್ಲಿ ಪಾಲ್ಗೊಂಡ ವಾರ್ನರ್ ಆ ನಂತರ ಬಿಗ್ ಬ್ಯಾಷ್ ಪಂದ್ಯವನ್ನಾಡಲು ಹೆಲಿಕಾಪ್ಟರ್ ಏರಿದರು. ಇದರಿಂದಾಗಿಯೇ ವಾರ್ನರ್ ಪಂದ್ಯದ ಆರಂಭಕ್ಕೂ ಮುನ್ನ ಕ್ರೀಡಾಂಗಣವನ್ನು ತಲುಪಲುನ ಸಾಧ್ಯವಾಯಿತು.
Full journey of David Warner in Helicopter to SCG for Big Bash match. 🔥
– What an entry…..!!!!pic.twitter.com/TwTsQe9954
— Johns. (@CricCrazyJohns) January 12, 2024
ಡೇವಿಡ್ ವಾರ್ನರ್ ಹೆಲಿಕಾಪ್ಟರ್ ಮೂಲಕ ಮೈದಾನಕ್ಕೆ ಎಂಟ್ರಿಕೊಟ್ಟ ವಿಡಿಯೋವನ್ನು BBL ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಮೈದಾನಕ್ಕೆ ಹೆಲಿಕಾಪ್ಟರ್ನಲ್ಲಿ ಬಂದ ಬಳಿಕ ಚಾನೆಲ್ 7 ಗೆ ನೀಡಿದ ಹೇಳಿಕೆಯಲ್ಲಿ ವಾರ್ನರ್, ಈ ರೈಡ್ ತುಂಬಾ ಚೆನ್ನಾಗಿತ್ತು. ಮೇಲಿನಿಂದ ಸಿಡ್ನಿಯನ್ನು ನೋಡುವುದು ವಿಭಿನ್ನ ಸಂತೋಷ, ಅದು ಸಾಕಷ್ಟು ಅದ್ಭುತವಾಗಿತ್ತು. ಕಳೆದ ವಾರ ಈ ಮೈದಾನದಲ್ಲಿ ನನಗೆ ಬಹಳ ವಿಶೇಷವಾದ ಕ್ಷಣವಾಗಿತ್ತು (ವಾರ್ನರ್ ಇದೇ ಮೈದಾನದಲ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದರು) ಎಂದರು.
ಇನ್ನು ಪಂದ್ಯದ ವಿಚಾರಕ್ಕೆ ಬಂದರೆ ಸಿಡ್ನಿ ಥಂಡರ್ ಮತ್ತು ಸಿಡ್ನಿ ಸಿಕ್ಸರ್ಸ್ ತಂಡಗಳ ನಡುವೆ ಪಂದ್ಯದಲ್ಲಿ ವಾರ್ನರ್ ಪ್ರತಿನಿಧಿಸಿದ್ದ ಸಿಡ್ನಿ ಥಂಡರ್ ತಂಡ 19 ರನ್ಗಳ ಸೋಲು ಅನುಭವಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಡ್ನಿ ಸಿಕ್ಸರ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 151 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸಿಡ್ನಿ ಥಂಡರ್ ತಂಡ 20ನೇ ಓವರ್ನಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 132 ರನ್ ಕೆಲಹಾಕಲಷ್ಟೇ ಶಕ್ತವಾಯಿತು. ಈ ಪಂದ್ಯದಲ್ಲಿ ವಾರ್ನರ್ 39 ಎಸೆತಗಳನ್ನು ಎದುರಿಸಿ 1 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 37 ರನ್ ಕಲೆಹಾಕಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:46 pm, Fri, 12 January 24