ಡೆಲ್ಲಿ ಕ್ಯಾಪಿಟಲ್ಸ್‌ನ (Delhi Capitals) ಸ್ಫೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್ (David Warner) ಪ್ರಸ್ತುತ ಐಪಿಎಲ್‌ನಲ್ಲಿ (IPL 2022) ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ವಾರ್ನರ್ ಅವರ ಅಜೇಯ 60 ರನ್ಗಳ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ದ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಉತ್ತಮ ಫಾರ್ಮ್ನಲ್ಲಿರುವ ವಾರ್ನರ್ ಈ ಬಾರಿ 3 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದಾಗ್ಯೂ ಅವರ ಮಕ್ಕಳು ಮಾತ್ರ ಸಂತೋಷವಾಗಿಲ್ಲ ಎಂದು ಖುದ್ದು ಡೇವಿಡ್ ವಾರ್ನರ್ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ವಾರ್ನರ್, ‘ನಾನು 3 ಅರ್ಧಶತಕ ಬಾರಿಸಿದರೂ, ಜೋಸ್ ಬಟ್ಲರ್‌ನಂತೆ ಶತಕವನ್ನು ಏಕೆ ಬಾರಿಸುತ್ತಿಲ್ಲ ಎಂದು ನನ್ನ ಮಕ್ಕಳು ಕೇಳುತ್ತಾರೆ. ಹೀಗಾಗಿ ನಾನು ಮತ್ತಷ್ಟು ಚೆನ್ನಾಗಿ ಆಡಬೇಕಿದೆ. ಮತ್ತೊಂದೆಡೆ ಮಕ್ಕಳು ಆಟವನ್ನು ಗಮನಿಸುತ್ತಿರುವುದು ಖುಷಿಯ ವಿಚಾರ ಎಂದು ವಾರ್ನರ್ ಹೇಳಿದ್ದಾರೆ. ಏಕೆಂದರೆ ಈ ಬಾರಿಯ ಐಪಿಎಲ್‌ನಲ್ಲಿ ಜೋಸ್ ಬಟ್ಲರ್ ಎರಡು ಶತಕ ಬಾರಿಸಿದ್ದಾರೆ. ಅಲ್ಲದೆ ಉತ್ತಮ ಫಾರ್ಮ್ನಲ್ಲಿದ್ದಾರೆ. ಹೀಗಾಗಿ ಅವರಂತೆ ಶತಕ ಬಾರಿಸುವುದನ್ನು ವಾರ್ನರ್ ಮಕ್ಕಳೂ ಕೂಡ ಎದುರು ನೋಡುತ್ತಿದ್ದಾರೆ.
ವಾರ್ನರ್ ಹೊಸ ಆರಂಭ:
ಆಸ್ಟ್ರೇಲಿಯಾದ ಎಡಗೈ ಓಪನರ್ ಡೇವಿಡ್ ವಾರ್ನರ್ ಕಳೆದ ಸೀಸನ್ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿದ್ದರು. ಅವರ ನಾಯಕತ್ವದಲ್ಲಿ, ಸನ್‌ರೈಸರ್ಸ್ 2016 ರಲ್ಲಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಐಪಿಎಲ್ 2022 ರ ಮೆಗಾ ಹರಾಜಿನ ಮೊದಲು ಅವರನ್ನು ಫ್ರಾಂಚೈಸಿ ಬಿಡುಗಡೆ ಮಾಡಿತ್ತು. ಈ ಸೀಸನ್ನಲ್ಲಿ ಡೆಲ್ಲಿ ಪರ ಆಡುತ್ತಿರುವಾಗ ವಾರ್ನರ್ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 191 ರನ್ ಗಳಿಸಿದ್ದಾರೆ. ಈ ವೇಳೆ 152.80 ಸ್ಟ್ರೈಕ್ ರೇಟ್ನಲ್ಲಿ ಮೂರು ಅರ್ಧಶತಕಗಳನ್ನು ಬಾರಿಸಿದ್ದಾರೆ.
ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅತ್ಯುತ್ತಮ ಆರಂಭ ಒದಗಿಸುತ್ತಿರುವ ವಾರ್ನರ್ ತಂಡದ ಗೆಲುವಿನಲ್ಲೂ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಈ ಮೂಲಕ ಸೋಲುಗಳಿಂದ ಕಂಗೆಟ್ಟಿದ್ದ ಡೆಲ್ಲಿ ತಂಡವನ್ನು ಜಯದತ್ತ ಕೊಂಡೊಯ್ಯುವಲ್ಲಿ ವಾರ್ನರ್ ಕೊಡುಗೆ ನೀಡುತ್ತಿದ್ದಾರೆ. ಇದೀಗ ಮೂರು ಅರ್ಧಶತಕ ಬಾರಿಸಿರುವ ವಾರ್ನರ್ ಇದೇ ಫಾರ್ಮ್ ಮುಂದುವರೆಸಿದರೆ ಎದುರಾಳಿ ಬೌಲರ್ಗಳಿಗೆ ಚಿಂತೆ ಶುರುವಾಗುವುದರಲ್ಲಿ ಅನುಮಾನವೇ ಇಲ್ಲ.
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ