David Warner: ಜೈ ಶ್ರೀರಾಮ್: ಹೃತ್ಪೂರ್ವಕ ಶುಭಾಶಯ ತಿಳಿಸಿದ ಡೇವಿಡ್ ವಾರ್ನರ್

| Updated By: ಝಾಹಿರ್ ಯೂಸುಫ್

Updated on: Jan 23, 2024 | 7:01 AM

David Warner: ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿರುವ ಡೇವಿಡ್ ವಾರ್ನರ್ ಟಿ20 ಕ್ರಿಕೆಟ್​ನಲ್ಲಿ ಮುಂದುವರೆದಿದ್ದಾರೆ. ಇದಾಗ್ಯೂ 2025 ರಲ್ಲಿ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿಯಲ್ಲಿ ಕಣಕ್ಕಿಳಿಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ 37 ವರ್ಷದ ವಾರ್ನರ್ ಅವರನ್ನು ಮುಂದಿನ ವರ್ಷ ಮತ್ತೆ ಏಕದಿನ ಪಂದ್ಯಕ್ಕೆ ಪರಿಗಣಿಸುವುದು ಅನುಮಾನ.

David Warner: ಜೈ ಶ್ರೀರಾಮ್: ಹೃತ್ಪೂರ್ವಕ ಶುಭಾಶಯ ತಿಳಿಸಿದ ಡೇವಿಡ್ ವಾರ್ನರ್
David Warner
Follow us on

ಅಯೋಧ್ಯೆ ರಾಮಮಂದಿರದಲ್ಲಿ ರಾಮ ಲಲ್ಲಾನ ವಿಗ್ರಹದ ‘ಪ್ರಾಣ ಪ್ರತಿಷ್ಠಾಪನೆಯಾಗಿದೆ. ಈ ಶುಭ ಸಮಾರಂಭದ ಬಳಿಕ ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗ ಡೇವಿಡ್ ವಾರ್ನರ್ (David Warner) ಶುಭಾಶಯಗಳನ್ನು ತಿಳಿಸಿರುವುದು ವಿಶೇಷ. ವಿಶ್ವದ ಪ್ರಸಿದ್ಧ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ವಾರ್ನರ್, ‘ಜೈ ಶ್ರೀ ರಾಮ್’ ಘೋಷಣೆಯೊಂದಿಗೆ ತಮ್ಮ ಅಭಿನಂದನಾ ಸಂದೇಶವನ್ನು ತಿಳಿಸಿದ್ದಾರೆ.

ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶ್ರೀರಾಮಚಂದ್ರನ ಆಗಮನದ ಫೋಟೋವೊಂದನ್ನು ಹಂಚಿಕೊಂಡಿರುವ ವಾರ್ನರ್, ಜೈ ಶ್ರೀರಾಮ್ ಇಂಡಿಯಾ ಎಂದು ಬರೆದುಕೊಂಡಿದ್ದಾರೆ. ಇದೀಗ ಡೇವಿಡ್ ವಾರ್ನರ್ ಅವರ ಈ ಪೋಸ್ಟ್​ಗೆ ಮೆಚ್ಚುಗೆಗಳ ಮಹಾಪೂರವೇ ಹರಿದು ಬರುತ್ತಿದೆ.

ಇಂಟರ್​ನ್ಯಾಷನಲ್​ ಲೀಗ್​ನಲ್ಲಿ ವಾರ್ನರ್:

ಡೇವಿಡ್ ವಾರ್ನರ್​ ಸದ್ಯ ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿ ಆಡುತ್ತಿದ್ದಾರೆ. ಯುಎಇನಲ್ಲಿ ನಡೆಯುತ್ತಿರುವ ಈ ಲೀಗ್​ನಲ್ಲಿ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಮಾಲೀಕತ್ವದ ದುಬೈ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹಾಗೆಯೇ ಮುಂಬರುವ ಐಪಿಎಲ್​ನಲ್ಲಿ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ಪರ ಇನಿಂಗ್ಸ್ ಆರಂಭಿಸಲಿದ್ದಾರೆ.

ವಾರ್ನರ್ ವಿದಾಯ:

ಡೇವಿಡ್ ವಾರ್ನರ್ ಈಗಾಗಲೇ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಸಿಡ್ನಿಯಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದ ಮೂಲಕ ವಾರ್ನರ್ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಹಾಗೆಯೇ ಏಕದಿನ ವಿಶ್ವಕಪ್ ಫೈನಲ್ ಬಳಿಕ ಒಡಿಐ ಕ್ರಿಕೆಟ್​ನಿಂದ ಕೂಡ ನಿವೃತ್ತಿ ಘೋಷಿಸಿದ್ದಾರೆ.

ವಿಶೇಷ ಎಂದರೆ ಟೆಸ್ಟ್​ ಕ್ರಿಕೆಟ್​ನ ಅಂತಿಮ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವಾರ್ನರ್ (57) ತಮ್ಮ ಕೊನೆಯ ಇನಿಂಗ್ಸ್​ನಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದರು. ಈ ಅರ್ಧಶತಕದೊಂದಿಗೆ ಆಸ್ಟ್ರೇಲಿಯಾ ಪರ ಟೆಸ್ಟ್​ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಬಾರಿಸಿದ ಆರಂಭಿಕ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದರು.

ಇದಕ್ಕೂ ಮುನ್ನ ಈ ದಾಖಲೆ ಮ್ಯಾಥ್ಯೂ ಹೇಡನ್ ಅವರ ಹೆಸರಿನಲ್ಲಿತ್ತು. ಆಸ್ಟ್ರೇಲಿಯಾ ತಂಡದ ಮಾಜಿ ಎಡಗೈ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್ ಓಪನರ್ ಆಗಿ ಕಣಕ್ಕಿಳಿದು ಒಟ್ಟು 8625 ರನ್ ಕಲೆಹಾಕಿ ಇತಿಹಾಸ ಬರೆದಿದ್ದರು. ಇದೀಗ ಈ ದಾಖಲೆಯನ್ನು ಡೇವಿಡ್ ವಾರ್ನರ್ ಮುರಿದಿದ್ದಾರೆ.

ಆಸ್ಟ್ರೇಲಿಯಾ ಪರ 203 ಟೆಸ್ಟ್ ಇನಿಂಗ್ಸ್​ ಆಡಿರುವ ಡೇವಿಡ್ ವಾರ್ನರ್ ಆರಂಭಿಕನ ಸ್ಥಾನದಲ್ಲಿ ಒಟ್ಟು 8786 ರನ್ ಕಲೆಹಾಕಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಪರ ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಬಾರಿಸಿದ ಆರಂಭಿಕ ಬ್ಯಾಟರ್ ಎಂಬ ದಾಖಲೆಯೊಂದಿಗೆ ವಾರ್ನರ್ ವಿದಾಯ ಹೇಳಿದ್ದರು.

ಇದನ್ನೂ ಓದಿ: ಅಫ್ಘಾನಿಸ್ತಾನ್ ವಿರುದ್ಧ ಗೆದ್ದು ಪಾಕಿಸ್ತಾನ್ ತಂಡದ ವಿಶ್ವ ದಾಖಲೆ ಮುರಿದ ಟೀಮ್ ಇಂಡಿಯಾ

ODI ವೃತ್ತಿ ಜೀವನ:

ಆಸ್ಟ್ರೇಲಿಯಾ ಪರ 161 ಏಕದಿನ ಇನ್ನಿಂಗ್ಸ್‌ಗಳನ್ನು ಆಡಿರುವ ವಾರ್ನರ್ 45.01 ರ ಸರಾಸರಿಯಲ್ಲಿ ಒಟ್ಟು 6,932 ರನ್ ಗಳಿಸಿದ್ದಾರೆ. ಈ ವೇಳೆ 22 ಶತಕಗಳು ಮತ್ತು 33 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದೀಗ ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ವಾರ್ನರ್ ಟಿ20 ಕ್ರಿಕೆಟ್​ನಲ್ಲಿ ಮಾತ್ರ ಮುಂದುವರೆಯುತ್ತಿದ್ದಾರೆ. ಒಂದು ವೇಳೆ ಮುಂಬರುವ ಟಿ20 ವಿಶ್ವಕಪ್​ಗಾಗಿ ಆಸ್ಟ್ರೇಲಿಯಾ​ ತಂಡದಲ್ಲಿ ಸ್ಥಾನ ಪಡೆಯದಿದ್ದರೆ ಚುಟುಕು ಕ್ರಿಕೆಟ್​ಗೂ ವಿದಾಯ ಹೇಳಬಹುದು.