- Kannada News Photo gallery Cricket photos BCCI Awards 2024 Ravi Shastri to get BCCI’s lifetime achievement award on Tuesday
BCCI Awards 2024: ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ
BCCI Awards 2024: ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್, ಮಾಜಿ ಆಲ್‌ರೌಂಡರ್ ಮತ್ತು ಪ್ರಸ್ತುತ ಕಾಮೆಂಟೇಟರ್ ರವಿಶಾಸ್ತ್ರಿ ಅವರು ಜೀವಮಾನ-ಸಾಧನೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದೇ ಮಂಗಳವಾರದಂದು ಹೈದರಾಬಾದ್‌ನಲ್ಲಿ ರವಿಶಾಸ್ತ್ರಿ ಅವರಿಗೆ ಬಿಸಿಸಿಐ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪ್ರದಾನ ಮಾಡಲಿದೆ.
Updated on: Jan 22, 2024 | 8:31 PM

ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್, ಮಾಜಿ ಆಲ್‌ರೌಂಡರ್ ಮತ್ತು ಪ್ರಸ್ತುತ ಕಾಮೆಂಟೇಟರ್ ರವಿಶಾಸ್ತ್ರಿ ಅವರು ಜೀವಮಾನ-ಸಾಧನೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದೇ ಮಂಗಳವಾರದಂದು ಹೈದರಾಬಾದ್‌ನಲ್ಲಿ ರವಿಶಾಸ್ತ್ರಿ ಅವರಿಗೆ ಬಿಸಿಸಿಐ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪ್ರದಾನ ಮಾಡಲಿದೆ.

2019 ರ ನಂತರ ಅಂದರೆ ಬರೋಬ್ಬರಿ 4 ವರ್ಷಗಳ ನಂತರ ಈ ಪ್ರಶಸ್ತಿ ಸಮಾರಂಭವನ್ನು ಬಿಸಿಸಿಐ ಮರು ಆಯೋಜಿಸುತ್ತಿದೆ. ಕೊರೊನಾದಿಂದಾಗಿ ಈ ಪ್ರಶಸ್ತಿ ಸಮಾರಂಭವನ್ನು ರದ್ದುಗೊಳಿಸಿದ್ದ ಬಿಸಿಸಿಐ, ಇದೀಗ ಈ ಕಾರ್ಯಕ್ರಮವನ್ನು ಪುನರಾರಂಭಿಸುತ್ತಿದೆ.

ಈ ಬಗ್ಗೆ ಪಿಟಿಐ ವರದಿ ಮಾಡಿದ್ದು, ರವಿಶಾಸ್ತ್ರಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ. ಹೈದರಾಬಾದ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಎರಡು ದಿನಗಳ ಮೊದಲು ಈ ಪ್ರಶಸ್ತಿ ಸಮಾರಂಭ ನಡೆಯಲಿದೆ.

ಈ ಪ್ರಶಸ್ತಿ ಸಮಾರಂಭದಲ್ಲಿ ಹಲವು ವಿಭಾಗಗಳಲ್ಲಿ ಹಲವು ಆಟಗಾರರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಆದರೆ ರವಿಶಾಸ್ತ್ರಿ ಹೊರತುಪಡಿಸಿ ಇತರ ಪ್ರಶಸ್ತಿಗಳ ಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಲಾಗಿಲ್ಲ. ಹೀಗಾಗಿ ಯಾವ ಆಟಗಾರರಿಗೆ ಈ ಗೌರವ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನು ಈ ಪ್ರಶಸ್ತಿ ಸಮಾರಂಭದಲ್ಲಿ ಭಾರತ ಮತ್ತು ಇಂಗ್ಲೆಂಡ್ ಎರಡೂ ತಂಡಗಳ ಆಟಗಾರರು ಉಪಸ್ಥಿತರಿರಲಿದ್ದಾರೆ ಎಂದು ವರದಿಯಾಗಿದೆ. ಹಾಗೆಯೇ ಮೂಲಗಳ ಪ್ರಕಾರ ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಅವರಿಗೆ ವರ್ಷದ ಕ್ರಿಕೆಟಿಗ ಪ್ರಶಸ್ತಿ ನೀಡಿ ಗೌರವಿಸಬಹುದು ಎಂದು ವರದಿಯಾಗಿದೆ.

ರವಿಶಾಸ್ತ್ರಿ ಅವರ ಅವಧಿಯಲ್ಲಿ ಟೀಂ ಇಂಡಿಯಾ ಪ್ರಮುಖ ಪ್ರಶಸ್ತಿಯನ್ನು ಗೆಲ್ಲದಿದ್ದರೂ, ತಂಡವು ಅನೇಕ ಐತಿಹಾಸಿಕ ಗೆಲುವು ದಾಖಲಿಸಿದೆ. ಇದರಲ್ಲಿ ದೊಡ್ಡ ಸಾಧನೆಯೆಂದರೆ ಟೀಂ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ ಅದರಲ್ಲೂ ಗಬಾ ಟೆಸ್ಟ್ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದು ಸೇರಿದೆ.

ಇದಲ್ಲದೇ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ 36 ರನ್‌ಗಳಿಗೆ ಆಲೌಟ್ ಆಗಿ ಮುಜುಗರದ ಸೋಲಿಗೆ ತುತ್ತಾಗಿದ್ದ ಟೀಂ ಇಂಡಿಯಾ, ಆ ನಂತರ ಪುನರಾಗಮನ ಮಾಡಿ ಟೆಸ್ಟ್ ಸರಣಿಯನ್ನು ಸಹ ಗೆದ್ದುಕೊಂಡಿತು. ಇದು ರವಿಶಾಸ್ತ್ರಿ ಅವರ ಅಧಿಕಾರಾವಧಿಯ ದೊಡ್ಡ ಸಾಧನೆಯಾಗಿದೆ. ಅಲ್ಲದೆ ಅವರ ಕೋಚಿಂಗ್ ಅವಧಿಯಲ್ಲಿ ಟೀಂ ಇಂಡಿಯಾ ನಂಬರ್ 1 ಸ್ಥಾನವನ್ನು ಆಕ್ರಮಿಸಿಕೊಂಡಿತ್ತು.




