- Kannada News Photo gallery Cricket photos Australia cricketer Glenn Maxwell hospitalize after late night party in Adelaide says Report
Glenn Maxwell: ತಡರಾತ್ರಿ ಪಾರ್ಟಿ; ಮತ್ತೆ ಆಸ್ಪತ್ರೆಗೆ ದಾಖಲಾದ ಗ್ಲೆನ್ ಮ್ಯಾಕ್ಸ್‌ವೆಲ್..!
Glenn Maxwell: ಆಸ್ಟ್ರೇಲಿಯಾ ತಂಡ ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಈ ಸರಣಿಯ ಬಳಿಕ ಉಭಯ ತಂಡಗಳ ನಡುವೆ ಏಕದಿನ ಹಾಗೂ ಟಿ20 ಪಂದ್ಯಗಳೂ ನಡೆಯಲಿವೆ. ಆದರೆ ಈ ನಡುವೆ ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
Updated on: Jan 22, 2024 | 5:38 PM

ಆಸ್ಟ್ರೇಲಿಯಾ ತಂಡ ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಈ ಸರಣಿಯ ಬಳಿಕ ಉಭಯ ತಂಡಗಳ ನಡುವೆ ಏಕದಿನ ಹಾಗೂ ಟಿ20 ಪಂದ್ಯಗಳೂ ನಡೆಯಲಿವೆ. ಆದರೆ ಈ ನಡುವೆ ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಆಸ್ಟ್ರೇಲಿಯಾದ ಮಾಧ್ಯಮಗಳ ಪ್ರಕಾರ, ನಗರದಲ್ಲಿ ತಡರಾತ್ರಿಯ ಪಾರ್ಟಿಯಲ್ಲಿ ಭಾಗವಹಿಸಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಶುಕ್ರವಾರ ಅಡಿಲೇಡ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದಾಗ್ಯೂ, ಮ್ಯಾಕ್ಸ್‌ವೆಲ್ ಕೆಲಸಮಯದ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ವರದಿಯಾಗಿದೆ.

ಅಷ್ಟಕ್ಕೂ ತಡರಾತ್ರಿ ಪಾರ್ಟಿಯಲ್ಲಿ ಭಾಗಿಯಾಗಿದ್ದ ಮ್ಯಾಕ್ಸ್ವೆಲ್ರನ್ನು ಏತಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂಬುದರ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಈ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ತನಿಖೆ ನಡೆಸಲು ಮುಂದಾಗಿದೆ ಎಂದು ವರದಿಯಾಗಿದೆ.

ಪ್ರಸ್ತುತ ಗ್ಲೆನ್ ಮ್ಯಾಕ್ಸ್‌ವೆಲ್ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯನ್ನಾಗಲಿ ಅಥವಾ ಏಕದಿನ ಸರಣಿಗಾಗಲಿ ತಂಡದಲ್ಲಿ ಆಯ್ಕೆಯಾಗಿಲ್ಲ. ಹೀಗಾಗಿ ಮ್ಯಾಕ್ಸ್‌ವೆಲ್ ಬಿಬಿಎಲ್ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡವನ್ನು ಮುನ್ನಡೆಸುತ್ತಿದ್ದರು.

ಆದರೆ ತಂಡ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿ ಲೀಗ್ ಹಂತದಲ್ಲೇ ಹೊರಬಿತ್ತು. ಹೀಗಾಗಿ ತಂಡದ ಕಳಪೆ ಪ್ರದರ್ಶನದಿಂದ ಬೇಸತ್ತ ಮ್ಯಾಕ್ಸ್‌ವೆಲ್ ತಂಡದ ನಾಯಕತ್ವವನ್ನು ತೊರೆಯವುದಾಗಿ ತಂಡದ ಆಟಗಾರರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಬಿಬಿಎಲ್ನಲ್ಲಿ ತಂಡದ ಅಭಿಯಾನ ಮುಕ್ತಾಯಗೊಂಡಿದ್ದರಿಂದ ತಂಡದ ಆಟಗಾರರು ತಡರಾತ್ರಿ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ತಂಡದೊಂದಿಗೆ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ಮ್ಯಾಕ್ಸ್ವೆಲ್ರನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ.

ಮೇಲೆ ಹೇಳಿದಂತೆ ಟೆಸ್ಟ್ ಹಾಗೂ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದಿರುವ ಮ್ಯಾಕ್ಸ್‌ವೆಲ್, ಫೆಬ್ರವರಿ 9 ರಿಂದ ಪ್ರಾರಂಭವಾಗುವ ಟಿ20 ಸರಣಿಯೊಂದಿಗೆ ಆಸ್ಟ್ರೇಲಿಯಾ ತಂಡಕ್ಕೆ ವಾಪಸ್ಸಾಗುವ ನಿರೀಕ್ಷೆಯಿದೆ. ಪ್ಯಾಟ್ ಕಮಿನ್ಸ್, ಮಿಚ್ ಮಾರ್ಷ್, ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹೇಜಲ್‌ವುಡ್ ಕೂಡ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ.

ಈ ಹಿಂದೆಯೂ ಮ್ಯಾಕ್ಸ್‌ವೆಲ್ ಗೆಳೆಯನ ಜನ್ಮದಿಂದು ತಡರಾತ್ರಿ ಪಾರ್ಟಿ ಮಾಡುವ ವೇಳೆ ಕಾಲು ಜಾರಿ ಬಿದ್ದು, ಕಾಲು ಮುರಿತಕ್ಕೊಳಗಾಗಿದ್ದರು. ಇದರಿಂದ ಮ್ಯಾಕ್ಸ್‌ವೆಲ್ ಕೆಲವು ತಿಂಗಳುಗಳ ಕಾಲ ರಾಷ್ಟ್ರೀಯ ತಂಡದಿಂದ ಹೊರಗುಳಿಯಬೇಕಾಯಿತು.




