ವಿಶ್ವಕಪ್ ತಂಡದ ಘೋಷಣೆಗೆ ಗಡುವು: ಟೀಮ್ ಇಂಡಿಯಾಗೆ ಹೊಸ ಚಿಂತೆ ಶುರು..!

| Updated By: ಝಾಹಿರ್ ಯೂಸುಫ್

Updated on: Aug 05, 2023 | 6:33 PM

ODI World Cup 2023: ಏಕದಿನ ವಿಶ್ವಕಪ್​ ಅಕ್ಟೋಬರ್ 5 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ.

ವಿಶ್ವಕಪ್ ತಂಡದ ಘೋಷಣೆಗೆ ಗಡುವು: ಟೀಮ್ ಇಂಡಿಯಾಗೆ ಹೊಸ ಚಿಂತೆ ಶುರು..!
Team India
Follow us on

ಅಕ್ಟೋಬರ್-ನವೆಂಬರ್​ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗಾಗಿ ತಂಡಗಳನ್ನು ಪ್ರಕಟಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಗಡುವು ವಿಧಿಸಿದೆ. ಅದರಂತೆ ಸೆಪ್ಟೆಂಬರ್ 5 ರೊಳಗೆ 10 ತಂಡಗಳು ತಮ್ಮ ಬಳಗವನ್ನು ಘೋಷಿಸಬೇಕೆಂದು ಐಸಿಸಿ ತಿಳಿಸಿದೆ. ಅಂದರೆ ಇನ್ನುಳಿದಿರುವುದು ಕೇವಲ 1 ತಿಂಗಳು ಮಾತ್ರ. ಇದರೊಳಗೆ ಬಲಿಷ್ಠ ತಂಡವನ್ನು ರೂಪಿಸಬೇಕಾದ ಅನಿವಾರ್ಯತೆ ಟೀಮ್ ಇಂಡಿಯಾ ಮುಂದಿದೆ. ಏಕೆಂದರೆ ಟೀಮ್ ಇಂಡಿಯಾದ ಕೆಲ ಸ್ಟಾರ್ ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಆಟಗಾರರು ಮುಂಬರುವ ಏಕದಿನ ವಿಶ್ವಕಪ್​ಗೆ ಫಿಟ್ ಆಗಿರಲಿದ್ದಾರಾ ಎಂಬುದು ಇನ್ನು ಕೂಡ ನಿರ್ಧಾರವಾಗಿಲ್ಲ.

ಕಳೆದ ಒಂದು ವರ್ಷದಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದ ಜಸ್​ಪ್ರೀತ್ ಬುಮ್ರಾ ಐರ್ಲೆಂಡ್ ವಿರುದ್ಧದ ಸರಣಿಯ ಮೂಲಕ ಕಂಬ್ಯಾಕ್ ಮಾಡಲಿದ್ದಾರೆ. ಆದರೆ ಮತ್ತೊಂದೆಡೆ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಇನ್ನೂ ಕೂಡ ಗಾಯಾಳುಗಳಾಗಿ ಉಳಿದಿದ್ದಾರೆ.

ಇದಾಗ್ಯೂ ಕೆಎಲ್ ರಾಹುಲ್ ಬ್ಯಾಟಿಂಗ್ ಅಭ್ಯಾಸ ಆರಂಭಿಸಿರುವ ಕಾರಣ ಏಷ್ಯಾಕಪ್ ಮೂಲಕ ತಂಡಕ್ಕೆ ಕಂಬ್ಯಾಕ್ ಮಾಡುವ ಸಾಧ್ಯತೆಯಿದೆ. ಆದರೆ ಏಷ್ಯಾಕಪ್​ನಲ್ಲಿ ಭಾರತದ ಮೊದಲ ಪಂದ್ಯವಿರುವುದು ಸೆಪ್ಟೆಂಬರ್ 2 ರಂದು. ಅಂದರೆ ಪಾಕಿಸ್ತಾನ್ ವಿರುದ್ಧದ ಪಂದ್ಯದ ಮೂಲಕ ಕೆಎಲ್ ರಾಹುಲ್ ಕಂಬ್ಯಾಕ್ ಮಾಡಬಹುದು. ಆದರೆ ಇದಾಗಿ ಎರಡು ದಿನಗಳಲ್ಲೇ ಟೀಮ್ ಇಂಡಿಯಾ ಏಕದಿನ ವಿಶ್ವಕಪ್ ತಂಡವನ್ನು ಪ್ರಕಟಿಸಬೇಕಾಗುತ್ತದೆ.

ಇಲ್ಲಿ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಅವರು ಏಷ್ಯಾಕಪ್ ಮೂಲಕ ಕಂಬ್ಯಾಕ್ ಮಾಡಿದರೂ ಅವರ ಫಾರ್ಮ್​ ಅನ್ನು ನಿರ್ಧರಿಸಲು ಸಾಧ್ಯವಾಗುವುದಿಲ್ಲ. ಇದುವೇ ಈಗ ಆಯ್ಕೆ ಸಮಿತಿಯ ಚಿಂತೆಯನ್ನು ಹೆಚ್ಚಿಸಿದೆ.

ಮತ್ತೊಂದೆಡೆ ರಿಷಭ್ ಪಂತ್ ಕೂಡ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಆದರೆ ವಿಶ್ವಕಪ್​ ವೇಳೆಗೆ ಅವರು ಸಂಪೂರ್ಣ ಫಿಟ್​ನೆಸ್ ಸಾಧಿಸುವುದು ಅನುಮಾನ. ಹೀಗಾಗಿ ಅವರನ್ನು ತಂಡದಿಂದ ಹೊರಗಿಡಬೇಕಾದ ಅನಿವಾರ್ಯತೆ ಟೀಮ್ ಇಂಡಿಯಾ ಮುಂದಿದೆ.

ಬದಲಾವಣೆಗೆ ಅವಕಾಶ:

ಏಕದಿನ ವಿಶ್ವಕಪ್​ಗೆ ತಂಡವನ್ನು ಪ್ರಕಟಿಸಿದರೂ ಆ ಬಳಿಕ ಟೀಮ್ ಅನ್ನು ಬದಲಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಆದರೆ ಇದು ಏಕದಿನ ವಿಶ್ವಕಪ್ ಆರಂಭಕ್ಕೂ ಒಂದು ವಾರಗಳ ಮುಂಚಿತವಾಗಿರಬೇಕು ಎಂದು ತಿಳಿಸಲಾಗಿದೆ.

ಅಂದರೆ ಸೆಪ್ಟೆಂಬರ್ 28 ರ ಬಳಿಕ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವಂತಿಲ್ಲ. ಒಂದು ವೇಳೆ ಗಾಯದ ಸಮಸ್ಯೆ ಅಥವಾ ಇನ್ನಿತರ ಮುಖ್ಯ ಕಾರಣಗಳಿಗಾಗಿ ತಂಡದಲ್ಲಿ ಬದಲಾವಣೆ ತರಬಹುದು. ಅದಕ್ಕೆ ಐಸಿಸಿಯ ಟೆಕ್ನಿಕಲ್ ಕಮಿಟಿಯ ಅನುಮತಿ ಪಡೆಯಬೇಕಾಗುತ್ತದೆ. ಹೀಗಾಗಿ ಮುಂದಿನ ಒಂದು ತಿಂಗಳಲ್ಲಿ ಬಲಿಷ್ಠ ಟೀಮ್ ಇಂಡಿಯಾವನ್ನು ರೂಪಿಸಬೇಕಾದ ಅನಿವಾರ್ಯತೆ ಬಿಸಿಸಿಐ ಆಯ್ಕೆ ಸಮಿತಿ ಮುಂದಿದೆ.

ಏಕದಿನ ವಿಶ್ವಕಪ್ ವೇಳಾಪಟ್ಟಿ:

ಏಕದಿನ ವಿಶ್ವಕಪ್​ ಅಕ್ಟೋಬರ್ 5 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಭಾರತ ತಂಡವು ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.