Virat Kohli: ತಂಡಕ್ಕಾಗಿ ಸ್ಥಾನ ತ್ಯಾಗ ಮಾಡಲಿದ್ದಾರಾ ಕಿಂಗ್ ಕೊಹ್ಲಿ..?
Virat Kohli: ಮೂರನೇ ಕ್ರಮಾಂಕದ ಅತ್ಯಂತ ಯಶಸ್ವಿ ಬ್ಯಾಟರ್ ಎಂದರೆ ಅದು ವಿರಾಟ್ ಕೊಹ್ಲಿ. ಏಕೆಂದರೆ ಏಕದಿನ ಕ್ರಿಕೆಟ್ನಲ್ಲಿ ಕೊಹ್ಲಿ ಕಲೆಹಾಕಿರುವ 12898 ರನ್‌ಗಳಲ್ಲಿ 10777 ರನ್‌ಗಳು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಬಂದಿವೆ.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ (Team India) ಹಲವು ಪ್ರಯೋಗ ನಡೆಸಿತ್ತು. ಅದರಲ್ಲೂ ಬ್ಯಾಟಿಂಗ್ ಕ್ರಮಾಂಕದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿತ್ತು. ಹೀಗೊಂದು ಪ್ರಯೋಗಕ್ಕಾಗಿಯೇ ವಿರಾಟ್ ಕೊಹ್ಲಿ ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ಗೆ ಇಳಿದಿರಲಿಲ್ಲ. ಇನ್ನು 2ನೇ ಹಾಗೂ 3ನೇ ಏಕದಿನ ಪಂದ್ಯಗಳಿಂದಲೂ ಹೊರಗುಳಿದಿದ್ದರು. ಅಚ್ಚರಿಯ ವಿಷಯ ಎಂದರೆ ಇಲ್ಲಿ ವಿರಾಟ್ ಕೊಹ್ಲಿ ಸ್ಥಾನದಲ್ಲಿ ಮೂವರು ಆಟಗಾರರು ಬ್ಯಾಟ್ ಬೀಸಿದ್ದರು.
ಅಂದರೆ ಕಿಂಗ್ ಕೊಹ್ಲಿ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿಯುತ್ತಾರೆ. ಆದರೆ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ತಂಡದಲ್ಲಿದ್ದರೂ ಸೂರ್ಯಕುಮಾರ್ ಯಾದವ್ರನ್ನು ಆ ಕ್ರಮಾಂಕದಲ್ಲಿ ಕಣಕ್ಕಿಳಿಸಲಾಗಿತ್ತು. ಆದರೆ ಕೇವಲ 19 ರನ್ಗಳಿಸಿ ಸೂರ್ಯ ನಿರಾಸೆ ಮೂಡಿಸಿದ್ದರು.
ಇನ್ನು 2ನೇ ಏಕದಿನ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದು ಸಂಜು ಸ್ಯಾಮ್ಸನ್. ಆದರೆ ಸ್ಯಾಮ್ಸನ್ ಕಲೆಹಾಕಿದ್ದು 9 ರನ್‌ಗಳು ಮಾತ್ರ. ಹಾಗೆಯೇ 3ನೇ ಏಕದಿನ ಪಂದ್ಯದಲ್ಲಿ 3ನೇ ಕ್ರಮಾಂಕ ರುತುರಾಜ್ ಗಾಯಕ್ವಾಡ್ ಪಾಲಾಗಿತ್ತು. ಆದರೆ ರುತುರಾಜ್ 8 ರನ್ಗಳಿಸಲಷ್ಟೇ ಶಕ್ತರಾಗಿದ್ದರು.
ಇಲ್ಲಿ ಮೂರು ಪಂದ್ಯಗಳಲ್ಲೂ ಮೂವರು ಬ್ಯಾಟರ್ಗಳನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲಾಗಿದೆ. ಅಂದರೆ ಮೂರನೇ ಕ್ರಮಾಂಕಕ್ಕಾಗಿ ಟೀಮ್ ಇಂಡಿಯಾ ಹೊಸ ಬ್ಯಾಟರ್ನ ಹುಡುಕಾಟದಲ್ಲಿರುವುದು ಸ್ಪಷ್ಟ.
ಇತ್ತ ವಿರಾಟ್ ಕೊಹ್ಲಿಗೆ 3ನೇ ಕ್ರಮಾಂಕದ ಖಾಯಂ ಆಗಿದ್ದರೂ, ಮುಂಬರುವ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿರಿಸಿ ಮೂರನೇ ಕ್ರಮಾಂಕದ ಪ್ರಯೋಗಕ್ಕೆ ಟೀಮ್ ಇಂಡಿಯಾ ಯಾಕಾಗಿ ಮುಂದಾಗಿದೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಈ ಪ್ರಶ್ನೆಗಳಿಗೆ ಸಿಗುವ ಉತ್ತರ ಕಿಂಗ್ ಕೊಹ್ಲಿಯ ಸ್ಥಾನ ಪಲ್ಲಟ.
ಕ್ರಮಾಂಕ ತ್ಯಾಗಕ್ಕೆ ಕೊಹ್ಲಿ ಸಿದ್ಧ?
ಟೀಮ್ ಇಂಡಿಯಾದ ಅತೀ ದೊಡ್ಡ ಸಮಸ್ಯೆ 4ನೇ ಕ್ರಮಾಂಕ. ಈ ಕ್ರಮಾಂಕದಲ್ಲಿ ಹಲವು ಬ್ಯಾಟರ್ಗಳು ವಿಫಲರಾಗಿದ್ದಾರೆ. ಅದರಲ್ಲೂ 2019 ರ ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿಗೆ ಮುಖ್ಯ ಕಾರಣ 4ನೇ ಕ್ರಮಾಂಕದ ಬ್ಯಾಟರ್ನ ವೈಫಲ್ಯತೆ. ಇದೇ ಕಾರಣದಿಂದಾಗಿ ಟೀಮ್ ಇಂಡಿಯಾ 3ನೇ ಹಾಗೂ 4ನೇ ಕ್ರಮಾಂಕದ ಬ್ಯಾಟರ್ಗಳ ಬದಲಾವಣೆಗೆ ಚಿಂತನೆ ನಡೆಸಿದೆ.
ಅದರ ಮೊದಲ ಮೊದಲ ಭಾಗ ಈ ಪ್ರಯೋಗ. ಅಂದರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಯಾವುದಾದರೂ ಬ್ಯಾಟರ್ ಯಶಸ್ಸು ಸಾಧಿಸಿದರೆ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದ ಜವಾಬ್ದಾರಿವಹಿಸಿಕೊಳ್ಳಲಿದ್ದಾರೆ.
ಇತ್ತ ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಈ ಹಿಂದೆ ಖಾಯಂ ಆಗಿದ್ದರು. ಆದರೆ ಇದೀಗ ಗಾಯದ ಕಾರಣ ಅವರು ತಂಡದಿಂದ ಹೊರಗುಳಿದಿದ್ದಾರೆ. ಅಲ್ಲದೆ ಅಯ್ಯರ್ ಏಷ್ಯಾಕಪ್ನಲ್ಲಿ ಕಾಣಿಸಿಕೊಳ್ಳುವುದು ಕೂಡ ಅನುಮಾನ.
ಇದೇ ಕಾರಣದಿಂದಾಗಿ ಇದೀಗ 3ನೇ ಕ್ರಮಾಂಕದಲ್ಲಿ ಹೊಸ ದಾಂಡಿಗನ್ನು ಕಣಕ್ಕಿಳಿಸಲು ಟೀಮ್ ಇಂಡಿಯಾ ಪ್ಲ್ಯಾನ್ ರೂಪಿಸುತ್ತಿದೆ. ಇಲ್ಲಿ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಆರಂಭಿಕರಾದರೆ, ಶುಭ್ಮನ್ ಗಿಲ್ ಮೂರನೇ ಕ್ರಮಾಂಕದಲ್ಲಿ ಆಡಬಹುದು.
ಇತ್ತ ಗಿಲ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದರೆ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಸಾಧ್ಯತೆ ಹೆಚ್ಚು. ಇದೇ ಕಾರಣದಿಂದಾಗಿ ವೆಸ್ಟ್ ಇಂಡೀಸ್ ವಿರುದ್ಧ 3ನೇ ಕ್ರಮಾಂಕದ ಪ್ರಯೋಗ ನಡೆಸಲಾಗಿದೆ. ಆದರೆ ಈ ಪ್ರಯೋಗ ಫಲ ನೀಡಿಲ್ಲ.
ಇದನ್ನೂ ಓದಿ: Tilak Varma: ದಾಖಲೆಯೊಂದಿಗೆ ಹೊಸ ಇನಿಂಗ್ಸ್ ಆರಂಭಿಸಿದ ತಿಲಕ್ ವರ್ಮಾ
ಇದಾಗ್ಯೂ ತಂಡದಲ್ಲಿ ಯುವ ದಾಂಡಿಗ ಶುಭ್ಮನ್ ಗಿಲ್ ಇದ್ದು, ಏಷ್ಯಾಕಪ್ನಲ್ಲಿ ಪಂಜಾಬಿ ಬ್ಯಾಟರ್ನನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿ 4ನೇ ಕ್ರಮಾಂಕದ ಜವಾಬ್ದಾರಿಯನ್ನು ವಿರಾಟ್ ಕೊಹ್ಲಿಗೆ ವಹಿಸುವ ಸಾಧ್ಯತೆ ಇದೆ.
3ನೇ ಕ್ರಮಾಂಕದಲ್ಲಿ ಕೊಹ್ಲಿಯೇ ಕಿಂಗ್:
ಇಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಎಂದರೆ ಮೂರನೇ ಕ್ರಮಾಂಕದ ಅತ್ಯಂತ ಯಶಸ್ವಿ ಬ್ಯಾಟರ್ ಎಂದರೆ ಅದು ವಿರಾಟ್ ಕೊಹ್ಲಿ. ಏಕೆಂದರೆ ಏಕದಿನ ಕ್ರಿಕೆಟ್ನಲ್ಲಿ ಕೊಹ್ಲಿ ಕಲೆಹಾಕಿರುವ 12898 ರನ್‌ಗಳಲ್ಲಿ 10777 ರನ್‌ಗಳು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಬಂದಿವೆ. ಅಲ್ಲದೆ ಒನ್ಡೌನ್ ವೇಳೆ ಕಣಕ್ಕಿಳಿದು ಕೊಹ್ಲಿ 39 ಶತಕಗಳನ್ನು ಕೂಡ ಬಾರಿಸಿದ್ದಾರೆ. ಹೀಗಾಗಿ ಕೊಹ್ಲಿಯ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ತಂದರೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯನ್ನೂ ಕೂಡ ತಳ್ಳಿಹಾಕುವಂತಿಲ್ಲ.