IPL 2024: ಆ್ಯಂಡಿಯ ಯಶಸ್ಸಿನ ಯಶೋಗಾಥೆ: ಈ ಸಲ ಕಪ್..?
RCB's Coach Andy Flower: ಆ್ಯಂಡಿ ಫ್ಲವರ್ ತರಬೇತಿ ನೀಡಿದ ಬಹುತೇಕ ತಂಡಗಳೆಲ್ಲವೂ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದೀಗ ಫ್ಲವರ್ ಆರ್ಸಿಬಿಯೊಂದಿಗೆ ಅರಳಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನೂತನ ಕೋಚ್ ಆಗಿ ಝಿಂಬಾಬ್ವೆಯ ಆ್ಯಂಡಿ ಫ್ಲವರ್ (Andy Flower) ಆಯ್ಕೆಯಾಗಿದ್ದಾರೆ. ಇದರೊಂದಿಗೆ ಮುಂದಿನ ಸೀಸನ್ ಐಪಿಎಲ್ನಲ್ಲಿ ಆರ್ಸಿಬಿ (RCB) ಹೊಸ ತಂತ್ರಗಳೊಂದಿಗೆ ಕಣಕ್ಕಿಳಿಯಲಿದೆ. ಅದು ಕೂಡ ಎದುರಾಳಿಗಳ ತಂತ್ರಗಳಿಗೆ ಅತ್ಯುತ್ತಮ ಪ್ರತಿತಂತ್ರ ರೂಪಿಸಿಕೊಳ್ಳುವ ಮೂಲಕ ಎಂಬುದು ಇಲ್ಲಿ ಉಲ್ಲೇಖಾರ್ಯ. ಏಕೆಂದರೆ ಆರ್ಸಿಬಿ ತಂಡ ಕೋಚ್ ಆ್ಯಂಡಿ ಫ್ಲವರ್ ಇಂತಹದೊಂದು ತಂತ್ರಗಾರಿಕೆಯಲ್ಲಿ ನಿಪುಣರು. ಇದಕ್ಕೆ ಸಾಕ್ಷಿಯೇ ಇದುವರೆಗಿನ ಅವರ ಕೋಚಿಂಗ್ ಅಂಕಿ ಅಂಶಗಳು.
- ಝಿಂಬಾಬ್ವೆ ತಂಡ ಮಾಜಿ ಆಟಗಾರ ಮೊದಲ ಬಾರಿಗೆ ಕೋಚಿಂಗ್ ಸ್ಥಾನ ಅಲಂಕರಿಸಿದ್ದು ಇಂಗ್ಲೆಂಡ್ ತಂಡಕ್ಕೆ ಎಂಬುದು ವಿಶೇಷ. 2007 ರಲ್ಲಿ ಇಂಗ್ಲೆಂಡ್ ತಂಡದ ಸಹಾಯಕ ಕೋಚ್ ಆಗಿ ಆ್ಯಂಡಿ ಫ್ಲವರ್ ಹೊಸ ಇನಿಂಗ್ಸ್ ಆರಂಭಿಸಿದ್ದರು. ಈ ಇನಿಂಗ್ಸ್ ಆರಂಭದೊಂದಿಗೆ ಇಂಗ್ಲೆಂಡ್ ಪಾಲಿಗೆ ಮರೀಚಿಕೆಯಾಗಿದ್ದ ವಿಶ್ವಕಪ್ ಅನ್ನು ತಂದುಕೊಟ್ಟಿದ್ದರು.
- 2010 ರಲ್ಲಿ ಇಂಗ್ಲೆಂಡ್ ತಂಡವು ತನ್ನ ಮೊದಲ ಐಸಿಸಿ ವಿಶ್ವಕಪ್ ಗೆದ್ದಿತ್ತು. ಈ ವಿಶ್ವಕಪ್ ಗೆಲುವಿನ ಹಿಂದಿದ್ದ ಮಾಸ್ಟರ್ ಮೈಂಡ್ ಆ್ಯಂಡಿ ಫ್ಲವರ್. ಇನ್ನು ಆ್ಯಂಡಿ ಫ್ಲವರ್ ಅವರ ಮಾರ್ಗದರ್ಶನದಲ್ಲೇ ಇಂಗ್ಲೆಂಡ್ ತಂಡವು ಟೆಸ್ಟ್ ಕ್ರಿಕೆಟ್ನಲ್ಲಿ ನಂಬರ್ 1 ಸ್ಥಾನ ಅಲಂಕರಿಸಿತ್ತು.
- ಅಷ್ಟೇ ಅಲ್ಲದೆ 2009, 2011, 2013 ರಲ್ಲಿ ಇಂಗ್ಲೆಂಡ್ ಆ್ಯಶಸ್ನಲ್ಲಿ ಇಂಗ್ಲೆಂಡ್ ತಂಡವು ಹ್ಯಾಟ್ರಿಕ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಅಂದು ಇಂಗ್ಲೆಂಡ್ ತಂಡ ಕೋಚ್ ಆಗಿದ್ದವರು ಆ್ಯಂಡಿ ಫ್ಲವರ್. ಆ ಬಳಿಕ ಇಂಗ್ಲೆಂಡ್ ತಂಡ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಇದರ ನಡುವೆ BBC ಯ ವರ್ಷದ ಕೋಚ್ ಪ್ರಶಸ್ತಿಯನ್ನು ಸಹ ಪಡೆದಿದ್ದರು.
- 2020 ರಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ (ಹಿಂದೆ ಸೇಂಟ್ ಲೂಸಿಯಾ ಝೌಕ್ಸ್) ತಂಡ ಮುಖ್ಯ ತರಬೇತುದಾರರಾಗಿ ನೇಮಕಗೊಂಡರು. ಇವರ ಮಾರ್ಗದರ್ಶನದಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ಎರಡು ಬಾರಿ ಫೈನಲ್ ಆಡಿತ್ತು.
- 2021 ರಲ್ಲಿ PSL (ಪಾಕಿಸ್ತಾನ್ ಸೂಪರ್ ಲೀಗ್) ನಲ್ಲಿ ಮುಲ್ತಾನ್ ಸುಲ್ತಾನ್‌ಗೆ ಮುಖ್ಯ ತರಬೇತುದಾರರಾಗಿ ಕಾಣಿಸಿಕೊಂಡಿದ್ದರು. ಅದೇ ವರ್ಷ ಮುಲ್ತಾನ್ ಸುಲ್ತಾನ್ ತಂಡವು ಚಾಂಪಿಯನ್ ಪಟ್ಟಕ್ಕೇರಿತ್ತು.
- ಇನ್ನು 2022 ರಲ್ಲಿ ದಿ ಹ್ರಂಡೆಡ್ ಲೀಗ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಟ್ರೆಂಟ್ ರಾಕೆಟ್ಸ್ ತಂಡದ ಕೋಚ್ ಕೂಡ ಆ್ಯಂಡಿ ಫ್ಲವರ್.
- ಹಾಗೆಯೇ 2023 ರಲ್ಲಿ ಇಂಟರ್ನ್ಯಾಷನಲ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಗಲ್ಫ್ ಜೈಂಟ್ಸ್ ಟೀಮ್ಗೆ ಯಶಸ್ವಿ ಮಾರ್ಗದರ್ಶನ ನೀಡಿದ್ದ ಆ್ಯಂಡಿ ಫ್ಲವರ್, ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು.
- 2023 ರಲ್ಲಿ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಮುಲ್ತಾನ್ ಸುಲ್ತಾನ್ ತಂಡ ಕೋಚ್ ಕೂಡ ಆ್ಯಂಡಿ ಫ್ಲವರ್ ಎಂಬುದು ವಿಶೇಷ.
- ಹಾಗೆಯೇ ಐಪಿಎಲ್ 2022 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದ ಆ್ಯಂಡಿ ಫ್ಲವರ್ ಸತತ 2 ಸೀಸನ್ಗಳಲ್ಲೂ ಹೊಸ ತಂಡವನ್ನು ಪ್ಲೇಆಫ್ಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇದನ್ನೂ ಓದಿ: IPL 2024: ಮತ್ತೆ ಬದಲಾಗಲಿದೆಯಾ RCB ತಂಡದ ನಾಯಕತ್ವ..?
ಅಂದರೆ ಆ್ಯಂಡಿ ಫ್ಲವರ್ ತರಬೇತಿ ನೀಡಿದ ಬಹುತೇಕ ತಂಡಗಳೆಲ್ಲವೂ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದೀಗ ಫ್ಲವರ್ ಆರ್ಸಿಬಿಯೊಂದಿಗೆ ಅರಳಿದೆ. ಅದರಂತೆ ಈ ಸಲ ಕಪ್ ಯಾರದ್ದು ಎಂಬುದು ನಿಮ್ಮ ಊಹೆಗೆ ಬಿಟ್ಟಿದ್ದು.