Deandra Dottin: ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಶತಕ ಸಿಡಿಸಿದ ಡಾಟಿನ್ ದಿಢೀರ್ ನಿವೃತ್ತಿ..!

| Updated By: ಝಾಹಿರ್ ಯೂಸುಫ್

Updated on: Aug 01, 2022 | 12:54 PM

Deandra Dottin: ವೆಸ್ಟ್ ಇಂಡೀಸ್ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಮಹಿಳಾ ಅಟಗಾರ್ತಿ ಎಂಬ ದಾಖಲೆ ಡಾಟಿನ್ ಹೆಸರಿನಲ್ಲಿದೆ. ಜೂನ್ 2008 ರಲ್ಲಿ ತಮ್ಮ ಚೊಚ್ಚಲ ಪಂದ್ಯವಾಡಿದ ಡಾಟಿನ್, ಅಂದಿನಿಂದ ಇಲ್ಲಿಯವರೆಗೆ 124 ಟಿ20 ಹಾಗೂ 143 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ.

Deandra Dottin: ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಶತಕ ಸಿಡಿಸಿದ ಡಾಟಿನ್ ದಿಢೀರ್ ನಿವೃತ್ತಿ..!
Deandra Dottin
Follow us on

ಮಹಿಳಾ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತಿ ವೇಗದ ಶತಕ ಸಿಡಿಸಿದ ಡಿಯಾಂಡ್ರಾ ಡಾಟಿನ್ (Deandra Dottin) ವೆಸ್ಟ್ ಇಂಡೀಸ್ ತಂಡಕ್ಕೆ ನಿವೃತ್ತಿ ಘೋಷಿಸಿದ್ದಾರೆ. ತಂಡದ ವಾತಾವರಣವೇ ತನ್ನ ಈ ನಿರ್ಧಾರಕ್ಕೆ ಕಾರಣ ಎಂದು ಆಲ್​ರೌಂಡರ್ ತಿಳಿಸಿದ್ದಾರೆ. ಡಾಟಿನ್ ಪ್ರಸ್ತುತ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಿರುವ ಬಾರ್ಬಡೋಸ್ ತಂಡದ ಪರ ಆಡುತ್ತಿದ್ದಾರೆ. ಇದರ ನಡುವೆ ವೆಸ್ಟ್ ಇಂಡೀಸ್ ತಂಡಕ್ಕೆ ನಿವೃತ್ತಿ ಘೋಷಿಸಿದ್ದು, ಇದಾಗ್ಯೂ ದೇಶೀಯ ಹಾಗೂ ಲೀಗ್ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಡಾಟಿನ್ ಅವರು ಆಗಸ್ಟ್ 30 ರಿಂದ ಪ್ರಾರಂಭವಾಗುವ ಮಹಿಳಾ ಸಿಪಿಎಲ್‌ನಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ನಾಯಕತ್ವ ವಹಿಸಲಿದ್ದಾರೆ. ಹಾಗೆಯೇ ಇಂಗ್ಲೆಂಡ್​ನಲ್ಲಿ ನಡೆಯಲಿರುವ ದ ಹಂಡ್ರೆಡ್ (100-ಬಾಲ್ ಪಂದ್ಯ) ಲೀಗ್​ನ 2ನೇ ಸೀಸನ್​ನಲ್ಲಿ ಮ್ಯಾಂಚೆಸ್ಟರ್ ತಂಡದ ಪರ ಆಡುವುದಾಗಿ ಹೇಳಿದ್ದಾರೆ.

ಇನ್ನು ನಿವೃತ್ತಿ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್​ ಹಾಕಿರುವ ಡಾಟಿನ್, ನನ್ನ ಕ್ರಿಕೆಟ್ ಜೀವನದಲ್ಲಿ ನಾನು ಅನೇಕ ಅಡೆತಡೆಗಳನ್ನು ಎದುರಿಸಿದ್ದೇನೆ ಮತ್ತು ಅದರಲ್ಲಿ ಜಯಿಸಿದ್ದೇನೆ. ಆದಾಗ್ಯೂ, ತಂಡದ ಪ್ರಸ್ತುತ ವಾತಾವರಣವು ಆಟದ ಬಗ್ಗೆ ನನ್ನ ಉತ್ಸಾಹವನ್ನು ಪುನರುಜ್ಜೀವನಗೊಳಿಸುವಂತಹದ್ದಲ್ಲ. ತುಂಬಾ ದುಃಖದಿಂದ ಆದರೆ ವಿಷಾದವಿಲ್ಲದೆ ಹೇಳುತ್ತಿದ್ದೇನೆ. ನಾನು ಇನ್ನು ಮುಂದೆ ತಂಡಕ್ಕೆ ಹೊಂದಿಕ್ಕೊಳ್ಳಲು ಸಾಧ್ಯವಿಲ್ಲ ಎಂದು ನಾನು ಅರಿತುಕೊಂಡೆ. ಏಕೆಂದರೆ ಅದು ನನ್ನ ಸಾಮರ್ಥ್ಯವನ್ನು ಕಡಿಮೆ ಮಾಡಿದೆ. ವೆಸ್ಟ್ ಇಂಡೀಸ್ ಪರ ಆಡಲು ನನಗೆ ಸಿಕ್ಕ ಅವಕಾಶಕ್ಕಾಗಿ ನಾನು ಎಲ್ಲರಿಗೂ ಕೃತಜ್ಞನಾಗಿದ್ದೇನೆ. ನನ್ನ 14 ವರ್ಷಗಳ ವೃತ್ತಿಜೀವನದಲ್ಲಿ, ನಾನು ಮೈದಾನದಲ್ಲಿ ಶೇಕಡಾ 100 ರಷ್ಟು ನೀಡಲು ಪ್ರಯತ್ನಿಸಿದೆ. ಇದೀಗ ನಿವೃತ್ತಿ ನೀಡಲು ನಿರ್ಧರಿಸಿದ್ದೇನೆ. ನನ್ನನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಡಾಟಿನ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಡಾಟಿನ್ ದಾಖಲೆಗಳು:
ವೆಸ್ಟ್ ಇಂಡೀಸ್ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಮಹಿಳಾ ಅಟಗಾರ್ತಿ ಎಂಬ ದಾಖಲೆ ಡಾಟಿನ್ ಹೆಸರಿನಲ್ಲಿದೆ. ಜೂನ್ 2008 ರಲ್ಲಿ ತಮ್ಮ ಚೊಚ್ಚಲ ಪಂದ್ಯವಾಡಿದ ಡಾಟಿನ್, ಅಂದಿನಿಂದ ಇಲ್ಲಿಯವರೆಗೆ 124 ಟಿ20 ಹಾಗೂ 143 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ವೇಳೆ ಏಕದಿನದಲ್ಲಿ 30.54 ಸರಾಸರಿಯಲ್ಲಿ 3727 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಶತಕಗಳು ಸೇರಿವೆ. ಹಾಗೆಯೇ ಟಿ20ಯಲ್ಲಿ 2 ಶತಕಗಳೊಂದಿಗೆ 2697 ರನ್ ಗಳಿಸಿದ್ದಾರೆ. ಹಾಗೆಯೇ ಏಕದಿನದಲ್ಲಿ 72 ಮತ್ತು ಟಿ20ಯಲ್ಲಿ 62 ವಿಕೆಟ್‌ಗಳನ್ನು ಪಡೆದಿದ್ದಾರೆ.

ವೇಗದ ಸೆಂಚುರಿ:
ಮಹಿಳಾ ಟಿ20 ಇಂಟರ್‌ನ್ಯಾಶನಲ್‌ನಲ್ಲಿ ಅತಿವೇಗದ ಶತಕವನ್ನು ಸಿಡಿಸಿದ ಆಟಗಾರ್ತಿ ಎಂಬ ವಿಶ್ವ ದಾಖಲೆ ಡಿಯಾಂಡ್ರಾ ಡಾಟಿನ್ ಹೆಸರಿನಲ್ಲಿದೆ. 2010 ರ T20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 45 ಎಸೆತಗಳಲ್ಲಿ 112 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಅವರು ಕೇವಲ 38 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಇದು ಮಹಿಳಾ ಟಿ20 ಕ್ರಿಕೆಟ್​ನ ಅತೀ ವೇಗದ ಶತಕದ ದಾಖಲೆಯನ್ನು ಹೊಂದಿದೆ. ವಿಶೇಷ ಎಂದರೆ 2017 ರಲ್ಲಿ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಬಾಂಗ್ಲಾದೇಶದ ವಿರುದ್ಧ 35 ಎಸೆತಗಳಲ್ಲಿ ಶತಕ ಬಾರಿಸುವವರೆಗೂ ಮಹಿಳಾ ಮತ್ತು ಪುರುಷರ T20 ಕ್ರಿಕೆಟ್​ನ ಅತೀ ವೇಗದ ಶತಕದ ದಾಖಲೆ ಡಿಯಾಂಡ್ರಾ ಡಾಟಿನ್ ಹೆಸರಿನಲ್ಲಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.