‘ಡಿಯರ್ ಕ್ರಿಕೆಟ್, ಇನ್ನೊಂದು ಅವಕಾಶ ಕೊಡು’; ತನ್ನ ಅಳಲು ತೊಡಿಕೊಂಡ ಕನ್ನಡಿಗ ಕರುಣ್ ನಾಯರ್
Karun Nair: ಈ ತ್ರಿಶತಕದ ನಂತರ ಟೀಂ ಇಂಡಿಯಾದ ಟೆಸ್ಟ್ ತಂಡದಲ್ಲಿ ಖಾಯಂ ಸದಸ್ಯರಾಗುವ ಸೂಚನೆ ನೀಡಿದ್ದ ಕರುಣ್ ನಂತರ ಅಂದರೆ, ಮಾರ್ಚ್ 2017 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಸತತ ವೈಫಲ್ಯಗಳಿಂದ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದರು.
ಟೀಂ ಇಂಡಿಯಾದ (Team India) ಮಾಜಿ ಆಟಗಾರ ಹಾಗೂ ಕನ್ನಡಿಗ ಕರುಣ್ ನಾಯರ್ (Karun Nair) ತಂಡದ ಪರ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ ಹಲವು ವರ್ಷಗಳೇ ಕಳೆದಿವೆ. ಸದ್ಯ 31 ವರ್ಷ ವಯಸ್ಸಾಗಿರುವ ಕರುಣ್ಗೆ ಮತ್ತೆ ಟೀಂ ಇಂಡಿಯಾದ ಕದ ತೆರೆಯವುದು ಅಸಾಧ್ಯದ ಮಾತಾಗಿದೆ. ಆದರೆ ಕರುಣ್ ತಮ್ಮ ವೃತ್ತಿ ಬದುಕನ್ನು ಆರಂಭಿಸಿದಾಗ ಅವರ ಮೇಲಿದ್ದ ನಿರೀಕ್ಷೆಗಳೇ ಬೆರೆಯದ್ದಾಗಿದ್ದವು. ಅದರಲ್ಲೂ ತಾನು ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟ ಎರಡನೇ ಟೆಸ್ಟ್ ಪಂದ್ಯದಲ್ಲಿ ದಾಖಲೆಯ ತ್ರಿಶತಕ ಸಿಡಿಸಿದ್ದ ಕರುಣ್ ಮೇಲೆ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿದ್ದವು. ಆದರೆ ಕೇವಲ 4 ಟೆಸ್ಟ್ ಪಂದ್ಯಗಳಿಗೆ ಟೀಂ ಇಂಡಿಯಾದಿಂದ ಗೇಟ್ಪಾಸ್ ಪಡೆದುಕೊಂಡ ಕರುಣ್ ಆನಂತರ ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ದೇಶೀ ಟೂರ್ನಿಗಳಲ್ಲಿ ಕರ್ನಾಟಕ ಪರ ಆಡುತ್ತಿದ್ದ ಕರುಣ್ಗೆ ಈಗ ರಾಜ್ಯ ರಣಜಿ ತಂಡದಿಂದಲೂ ಕೋಕ್ ನೀಡಲಾಗಿದೆ. ಈ ಬಗ್ಗೆ ಅಸಮಾಧಾನಗೊಂಡಿರುವ ಕರುಣ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಡಿರುವ ಪೋಸ್ಟ್ ಒಂದು ಈಗ ಸಖತ್ ವೈರಲ್ ಆಗುತ್ತಿದೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ತ್ರಿಶತಕ
ವಾಸ್ತವವಾಗಿ 2016ರಂದು ಇಂಗ್ಲೆಂಡ್ ವಿರುದ್ಧ ಮೊಹಾಲಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದ ಕರುಣ್, ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅದೇ ಇಂಗ್ಲೆಂಡ್ ತಂಡದ ವಿರುದ್ಧ ಭರ್ಜರಿ ತ್ರಿಶತಕ ಸಿಡಿಸಿ ಮಿಂಚಿದರು. ಕರುಣ್ ಅದ್ಭುತ ಆಟದಿಂದಾಗಿ ಟೀಂ ಇಂಡಿಯಾ ಈ ಟೆಸ್ಟ್ ಸರಣಿಯ ಐದನೇ ಪಂದ್ಯವನ್ನು ಇನ್ನಿಂಗ್ಸ್ ಮತ್ತು 75 ರನ್‌ಗಳಿಂದ ಗೆದ್ದುಕೊಂಡಿತ್ತು. ಈ ಪಂದ್ಯದಲ್ಲಿ ರನ್ಗಳ ಶಿಖರ ನಿರ್ಮಿಸಿದ್ದ ಕರುಣ್ ತಮ್ಮ ಇನ್ನಿಂಗ್ಸ್ನಲ್ಲಿ 32 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ 303 ರನ್ ಚಚ್ಚಿದ್ದರು. ಈ ತ್ರಿಶತಕದೊಂದಿಗೆ ವೀರೇಂದ್ರ ಸೆಹ್ವಾಗ್ ನಂತರ ಈ ಸಾಧನೆ ಮಾಡಿದ ಭಾರತದ ಎರಡನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.
ಈ ತ್ರಿಶತಕದ ನಂತರ ಟೀಂ ಇಂಡಿಯಾದ ಟೆಸ್ಟ್ ತಂಡದಲ್ಲಿ ಖಾಯಂ ಸದಸ್ಯರಾಗುವ ಸೂಚನೆ ನೀಡಿದ್ದ ಕರುಣ್ ನಂತರ ಅಂದರೆ, ಮಾರ್ಚ್ 2017 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಸತತ ವೈಫಲ್ಯಗಳಿಂದ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದರು. ಟೆಸ್ಟ್ನಲ್ಲಿ ಮಾತ್ರವಲ್ಲದೆ 2016 ರಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಕೇವಲ ಎರಡು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದ ಕರುಣ್, ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಾಗದೆ, ಏಕದಿನ ತಂಡದಿಂದಲೂ ಹೊರನಡೆದಿದ್ದರು.
WTC Points Table: ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಕಾಂಗರೂಗಳಿಗೆ ನಂ.1 ಪಟ್ಟ; ಪಾಕ್ ಸೋತರಷ್ಟೇ ಭಾರತಕ್ಕೆ ಉಳಿಗಾಲ
ಡಿಯರ್ ಕ್ರಿಕೆಟ್, ನನಗೆ ಇನ್ನೊಂದು ಅವಕಾಶ ಕೊಡು
ಹೀಗೆ ಕೆಲವೇ ಕೆಲವು ಅವಕಾಶಗಳನ್ನು ಪಡೆದು, ಯಶಸ್ವಿಯಾಗದೆ ತಂಡದಿಂದ ಹೊರಗುಳಿದ ಕರುಣ್ಗೆ ರಾಜ್ಯ ತಂಡದಲ್ಲೂ ಖಾಯಂ ಸ್ಥಾನ ಸಿಗಲಿಲ್ಲ. ಆಗಾಗ ದೇಶೀ ಟೂರ್ನಿಗಳನ್ನು ಆಡಿರುವ ಕರುಣ್ರನ್ನು ಈಗ ರಣಜಿ ತಂಡದಿಂದಲೂ ಕೈಬಿಡಲಾಗಿದೆ. ಈಗ ತನಗಾಗಿರುವ ಅನ್ಯಾಯದ ಬಗ್ಗೆ ಮೌನ ಮುರಿದಿರುವ ಕರುಣ್, ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಾಕಿದ್ದು ಇದರಲ್ಲಿ, ‘ಡಿಯರ್ ಕ್ರಿಕೆಟ್, ನನಗೆ ಇನ್ನೊಂದು ಅವಕಾಶ ಕೊಡು’ ಎಂದು ಬರೆದುಕೊಂಡಿದ್ದಾರೆ. ಕರುಣ್ ಅವರ ಈ ಪೋಸ್ಟ್ ನೋಡಿದ ಅನೇಕ ಮಾಜಿ ಕ್ರಿಕೆಟಿಗರು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಮತ್ತೊಬ್ಬ ಕರ್ನಾಟಕದ ಆಟಗಾರ ದೊಡ್ಡ ಗಣೇಶ್ ಕರುಣ್ಗೆ ಧೈರ್ಯ ತುಂಬುವ ಸಲುವಾಗಿ ಅವರ ಟ್ವೀಟ್ಗೆ, ‘ಧೃಡವಾಗಿರುವ ಕರುಣ್, ನೀನು ಮತ್ತೆ ತಂಡಕ್ಕೆ ಹಿಂದಿರುಗುತ್ತೀಯ. ನೀನೊಬ್ಬ ಕ್ವಾಲಿಟಿ ಬ್ಯಾಟ್ಸ್ಮನ್’ ಎಂದು ರೀಟ್ವೀಟ್ ಮಾಡಿದ್ದಾರೆ.
Dear cricket, give me one more chance.??
— Karun Nair (@karun126) December 10, 2022
Stay strong, Karun. You will be back. You are still a quality batsman ?
— Dodda Ganesh | ದೊಡ್ಡ ಗಣೇಶ್ (@doddaganesha) December 10, 2022
ಟೀಂ ಇಂಡಿಯಾದ ಕದ ಮುಚ್ಚಿದ ಬಳಿಕ ಕರ್ನಾಟಕದ ಪರ ದೇಶೀ ಟೂರ್ನಿಗಳಲ್ಲಿ ಆಡುವುದನ್ನು ಮುಂದುವರೆಸಿದ ಕರುಣ್, ಇಲ್ಲೂ ಸಹ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಕರುಣ್ಗೆ ತಂಡದಲ್ಲಿ ಅವಕಾಶಗಳು ಕಡಿಮೆಯಾದವು. ಇದೀಗ ಆರಂಭವಾಗಲಿರುವ ರಣಜಿ ಟೂರ್ನಿಯ ಮೊದಲೆರಡು ಪಂದ್ಯಗಳಿಗೂ ಕರುಣ್ಗೆ ರಾಜ್ಯ ತಂಡದಲ್ಲಿ ಅವಕಾಶ ಸಿಕ್ಕಿಲ್ಲ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:32 pm, Sun, 11 December 22