Deepak Chahar: ಏಷ್ಯಾಕಪ್ಗೆ ಟೀಮ್ ಇಂಡಿಯಾದಲ್ಲಿ ದಿಢೀರ್ ಬದಲಾವಣೆ: ತಂಡ ಸೇರಿದ ಹೊಸ ಆಟಗಾರ
Kuldeep Sen: ಐಪಿಎಲ್ 2022 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಕಾಣಿಸಿಕೊಂಡಿದ್ದ ಕುಲ್ದೀಪ್ ಸೇನ್ (Kuldeep Sen) ಇದೀಗ ಏಷ್ಯಾಕಪ್ ಭಾರತ ಸ್ಕ್ಯಾಡ್ ಸೇರಿಕೊಂಡಿದ್ದಾರೆ. ಆದರೆ, ಇವರು ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದಿಲ್ಲ.
ಏಷ್ಯಾಕಪ್ 2022 (Asia Cup 2022) ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಆಗಸ್ಟ್ 27 ರಂದು ಟೂರ್ನಿಗೆ ಚಾಲನೆ ಸಿಗಲಿದ್ದು ಮೊದಲ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ತಂಡ ಮುಖಾಮುಖಿ ಆಗಲಿದೆ. ಆ. 28ಕ್ಕೆ ಭಾರತ ತಂಡ ಬದ್ದವೈರಿ ಪಾಕಿಸ್ತಾನ (India vs Pakistan) ವಿರುದ್ಧ ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾಕ್ಕೆ ಹೊಸ ಆಟಗಾರ ಆಯ್ಕೆಯಾಗಿದ್ದಾರೆ. ಐಪಿಎಲ್ 2022 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಕಾಣಿಸಿಕೊಂಡಿದ್ದ ಕುಲ್ದೀಪ್ ಸೇನ್ (Kuldeep Sen) ಇದೀಗ ಏಷ್ಯಾಕಪ್ ಭಾರತ ಸ್ಕ್ಯಾಡ್ ಸೇರಿಕೊಂಡಿದ್ದಾರೆ. ಆದರೆ, ಇವರು ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ನೆಟ್ ಬೌಲರ್ ಆಗಿ ಮಾತ್ರ ಇವರು ಸೇವೆ ಸಲ್ಲಿಸುತ್ತಾರೆ. ಈ ಬಗ್ಗೆ ಬಿಸಿಸಿಐ ಮಾಹಿತಿ ನೀಡಿದೆ.
ಎಲ್ಲದಕ್ಕೂ ಸ್ಪಷ್ಟನೆ ನೀಡಿದ ಬಿಸಿಸಿಐ:
ಗುರುವಾರ ರಾತ್ರಿ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿಯೊಂದು ಹೊರಬಿತ್ತು. ಸುಮಾರು ಆರು ತಿಂಗಳ ಬಳಿಕ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡಿದ ದೀಪಕ್ ಚಹರ್ ಮತ್ತೆ ಗಾಯಗೊಂಡು ಏಷ್ಯಾಕಪ್ನಿಂದ ಹೊರಬಿದ್ದಿದ್ದಾರೆ ಎಂಬ ಸುದ್ದಿ ಸಾಕಷ್ಟು ವೈರಲ್ ಆಯಿತು. ಇದಕ್ಕೆ ಪುಷ್ಠಿ ಎಂಬಂತೆ ರಾಜಸ್ಥಾನ್ ರಾಯಲ್ಸ್ ಯುವ ವೇಗಿ ಕುಲ್ದೀಪ್ ಸೇನ್ಗೆ ಬುಲಾವ್ ನೀಡಲಾಗಿದೆ ಎಂದು ವರದಿಯಾಗಿತ್ತು. ಆದರೀಗ ಈ ಎಲ್ಲ ಗೊಂದಲಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸ್ಪಷ್ಟನೆ ನೀಡಿ ತೆರೆ ಎಳೆದಿದೆ.
“ಏಷ್ಯಾಕಪ್ನ ಭಾರತ ತಂಡದಲ್ಲಿ ದೀಪಕ್ ಚಹರ್ ಗಾಯಗೊಂಡ ಪರಿಣಾಮ ಇವರ ಬದಲು ಕುಲ್ದೀಪ್ ಸೇನ್ಗೆ ಅವಕಾಶ ನೀಡಲಾಗಿದೆ ಎಂಬುದು ಸಂಪೂರ್ಣವಾಗಿ ಅವಿವೇಕದ ಸುದ್ದಿ. ಅವರು ಇನ್ನೂ ದುಬೈನಲ್ಲಿ ತಂಡದೊಂದಿಗೆ ಇದ್ದಾರೆ. ತಂಡದ ಆಟಗಾರರ ಜೊತೆ ಅಭ್ಯಾಸ ನಡೆಸುತ್ತಿದ್ದಾರೆ. ಅವರು ಸಂಪೂರ್ಣವಾಗಿ ಚೆನ್ನಾಗಿದ್ದಾರೆ. ಕುಲ್ದೀಪ್ ಸೇನ್ ಆಯ್ಕೆ ಆಗಿರುವುದು ನಿಜ. ಆದರೆ, ಅದು ನೆಟ್ ಬೌಲರ್ ಆಗಿ ಅಷ್ಟೆ,” ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಇನ್ಸೈಡ್ ಸ್ಪೋರ್ಟ್‌ಗೆ ಹೇಳಿದ್ದಾರೆ.
ಚಹರ್ ಕಣಕ್ಕಿಳಿಯುವ ಸಾಧ್ಯತೆ:
ಗಾಯಗೊಂಡಿದ್ದ ದೀಪಕ್ ಚಹರ್ ಸುದೀರ್ಘ ವಿಶ್ರಾಂತಿ ಬಳಿಕ ಕಳೆದ ಜಿಂಬಾಬ್ವೆ ಪ್ರವಾಸದ ವೇಳೆ ಭಾರತ ತಂಡಕ್ಕೆ ಮರಳಿದ್ದರು. ಈ ಸರಣಿಯ ವೇಳೆ ಚಹರ್ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದರು. ಸದ್ಯ ಏಷ್ಯಾಕಪ್ನಲ್ಲಿ ಸ್ಟ್ಯಾಂಡ್ ಬೈ ಆಟಗಾರನಾಗಿರುವ ಇವರು ಆಡುವ ಸಾಧ್ಯತೆ ಇದೆ ಎನ್ನಲಾಗಿದೆ. ಭಾರತ ಜಸ್‌ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಸೇವೆಯಿಂದ ವಂಚಿತವಾಗಿದೆ. ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಆರ್ಷದೀಪ್ ಸಿಂಗ್ ಟೀಮ್ ಇಂಡಿಯಾದ ಮುಖ್ಯ ವೇಗಿಗಳಾಗಿದ್ದಾರೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಲೋಕೇಶ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಅವೇಶ್ ಖಾನ್.
ಸ್ಟ್ಯಾಂಡ್ ಬೈ ಆಟಗಾರರು: ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ದೀಪಕ್ ಚಹಾರ್, ಕುಲ್ದೀಪ್ ಸೇನ್.
Published On - 8:06 am, Fri, 26 August 22