ದ್ವಿಶತಕ ಬಾರಿಸಿದ ದೀಪಕ್ ಹೂಡಾ

Deepak Hooda: ದೀಪಕ್ ಹೂಡಾ ಈ ಹಿಂದೆ ಬರೋಡಾ ಪರ ರಣಜಿ ಪಂದ್ಯಗಳನ್ನಾಡುತ್ತಿದ್ದರು. ಇದೀಗ ರಾಜಸ್ಥಾನ್ ಪರ ಹೊಸ ಇನಿಂಗ್ಸ್ ಆರಂಭಿಸಿರುವ ಹೂಡಾ ಭರ್ಜರಿ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಈ ಡಬಲ್ ಸೆಂಚುರಿಯೊಂದಿಗೆ ಮುಂಬೈ ವಿರುದ್ಧ ರಾಜಸ್ಥಾನ್ ತಂಡವು ಮೊದಲ ಇನಿಂಗ್ಸ್​ನಲ್ಲಿ ಬರೋಬ್ಬರಿ 363 ರನ್​ಗಳ ಬೃಹತ್ ಮುನ್ನಡೆ ಪಡೆದುಕೊಂಡಿದೆ.

ದ್ವಿಶತಕ ಬಾರಿಸಿದ ದೀಪಕ್ ಹೂಡಾ
Deepak Hooda

Updated on: Nov 04, 2025 | 10:54 AM

ಜೈಪುರದ ಸವಾಯಿ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಗ್ರೂಪ್-ಡಿ ಪಂದ್ಯದಲ್ಲಿ ದೀಪಕ್ ಹೂಡಾ ಭರ್ಜರಿ ದ್ವಿಶತಕ ಬಾರಿಸಿದ್ದಾರೆ. ಮುಂಬೈ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ತಂಡದ ನಾಯಕ ಮಹಿಪಾಲ್ ಲೋಮ್ರರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡವು ಮೊದಲ ಇನಿಂಗ್ಸ್​ನಲ್ಲಿ 254 ರನ್​ಗಳಿಸಿ ಆಲೌಟ್ ಆಯಿತು.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ರಾಜಸ್ಥಾನ್ ತಂಡಕ್ಕೆ ಆರಂಭಿಕ ದಾಂಡಿಗ ಸಚಿನ್ ಯಾದವ್ (92) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಹಿಪಾಲ್ ಲೋಮ್ರರ್ 41 ರನ್​ಗಳ ಕೊಡುಗೆ ನೀಡಿದರು.

ಆ ಬಳಿಕ ಕಣಕ್ಕಿಳಿದ ದೀಪಕ್ ಹೂಡಾ ಆಕರ್ಷಕ ಬ್ಯಾಟಿಂಗ್​ನೊಂದಿಗೆ ಗಮನ ಸೆಳೆದರು. ಆರಂಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ್ದ ಹೂಡಾ ಕ್ರೀಸ್​ನಲ್ಲಿ ನೆಲೆಯೂರುತ್ತಿದ್ದಂತೆ ಬಿರುಸಿನ ಬ್ಯಾಟಿಂಗ್​ಗೆ ಮುಂದಾದರು. ಈ ಮೂಲಕ ಶತಕ ಪೂರೈಸಿದರು.

ಸೆಂಚುರಿ ಬಳಿಕ ಕೂಡ ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರೆಸಿದ ದೀಪಕ್ ಹೂಡಾ 335 ಎಸೆತಗಳಲ್ಲಿ 22 ಫೋರ್​ ಹಾಗೂ 2 ಸಿಕ್ಸರ್​ಗಳೊಂದಿಗೆ 248 ರನ್ ಬಾರಿಸಿದರು. ದೀಪಕ್ ಹೂಡಾ ಅವರ ಈ ದ್ವಿಶತಕದ ನೆರವಿನೊಂದಿಗೆ ರಾಜಸ್ಥಾನ್ ತಂಡವು 6 ವಿಕೆಟ್ ಕಳೆದುಕೊಂಡು 617 ರನ್​ಗಳಿಸಿ ಡಿಕ್ಲೇರ್ ಘೋಷಿಸಿತು.

363 ರನ್​ಗಳ ಹಿನ್ನಡೆ:

ಮೊದಲ ಇನಿಂಗ್ಸ್​ನಲ್ಲಿನ 363 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಮುಂಬೈ ತಂಡಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ಮುಶೀರ್ ಖಾನ್ ಭರ್ಜರಿ ಆರಂಭ ಒದಗಿಸಿದ್ದಾರೆ. 56 ಎಸೆತಗಳನ್ನು ಎದುರಿಸಿರುವ ಯಶಸ್ವಿ ಜೈಸ್ವಾಲ್ 8 ಫೋರ್​ಗಳೊಂದಿಗೆ 56 ರನ್ ಬಾರಿಸಿದರೆ, ಮುಶೀರ್ 32 ರನ್​ಗಳಿಸಿ ಉತ್ತಮ ಸಾಥ್ ನೀಡಿದ್ದಾರೆ. ಈ ಮೂಲಕ ಮುಂಬೈ ತಂಡವು 3ನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 89 ರನ್ ಕಲೆಹಾಕಿದೆ.

ಸದ್ಯ ಮುಂಬೈ ತಂಡವು 274 ರನ್​ಗಳ ಹಿನ್ನಡೆ ಹೊಂದಿದ್ದು, ನಾಲ್ಕನೇ ದಿನದಾಟದಲ್ಲಿ ಆಲೌಟ್ ಆಗದೇ ಪಂದ್ಯವನ್ನು ಡ್ರಾನತ್ತ ಕೊಂಡೊಯ್ಯುವ ಇರಾದೆಯಲ್ಲಿದ್ದಾರೆ. ಅತ್ತ ಕೊನೆಯ ದಿನದಾಟದೊಳಗೆ ಮುಂಬೈ ತಂಡವನ್ನು ಆಲೌಟ್ ಮಾಡಿದರೆ ಮಾತ್ರ ರಾಜಸ್ಥಾನ್ ತಂಡಕ್ಕೆ ಈ ಪಂದ್ಯದಲ್ಲಿ ವಿಜಯ ಸಾಧಿಸಬಹುದು. ಹೀಗಾಗಿ ಅಂತಿಮ ದಿನದಾಟದಂದು ಸವಾಯಿ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ರಾಜಸ್ಥಾನ್ ಪ್ಲೇಯಿಂಗ್ XI: ಅಭಿಜಿತ್ ತೋಮರ್, ದೀಪಕ್ ಹೂಡಾ, ಕಾರ್ತಿಕ್ ಶರ್ಮಾ, ಕುನಾಲ್ ಸಿಂಗ್ ರಾಥೋರ್ (ವಿಕೆಟ್ ಕೀಪರ್), ಮಹಿಪಾಲ್ ಲೊಮ್ರರ್ (ನಾಯಕ), ರಾಹುಲ್ ಚಹರ್, ಸಚಿನ್ ಯಾದವ್, ಅಶೋಕ್ ಶರ್ಮಾ, ಅಂಕಿತ್ ಚೌಧರಿ, ಆಕಾಶ್ ಮಹಾರಾಜ್ ಸಿಂಗ್, ಕುಕ್ನಾ ಅಜಯ್ ಸಿಂಗ್.

ಇದನ್ನೂ ಓದಿ: AUS vs IND: ಆಸ್ಟ್ರೇಲಿಯಾ ತಂಡದಿಂದ ಮೂವರು ರಿಲೀಸ್..!

ಮುಂಬೈ ಪ್ಲೇಯಿಂಗ್ XI: ಯಶಸ್ವಿ ಜೈಸ್ವಾಲ್, ಮುಶೀರ್ ಖಾನ್, ಅಜಿಂಕ್ಯ ರಹಾನೆ, ಹಿಮಾಂಶು ಸಿಂಗ್, ಸಿದ್ಧೇಶ್ ಲಾಡ್, ಸರ್ಫರಾಝ್ ಖಾನ್, ಶಮ್ಸ್ ಮುಲಾನಿ, ಆಕಾಶ್ ಆನಂದ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್ (ನಾಯಕ), ಇರ್ಫಾನ್ ಉಮೈರ್, ತುಷಾರ್ ದೇಶಪಾಂಡೆ.