Deepak Hooda: ಭರ್ಜರಿ ಶತಕ ಸಿಡಿಸಿ ಸಚಿನ್ ದಾಖಲೆ ಮುರಿದ ದೀಪಕ್ ಹೂಡಾ
Deepak Hooda: ಈ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಆಡಿದ ಹೂಡಾ 57 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 9 ಫೋರ್ನೊಂದಿಗೆ 104 ರನ್ ಬಾರಿಸಿ ಅಬ್ಬರಿಸಿದರು.
ಭಾರತ ಮತ್ತು ಐರ್ಲೆಂಡ್ (India vs Ireland) ನಡುವಿನ 2 ಪಂದ್ಯಗಳ T20 ಸರಣಿಯ ಎರಡನೇ ಮತ್ತು ಕೊನೆಯ ಪಂದ್ಯವು ಜೂನ್ 28 ರಂದು ಡಬ್ಲಿನ್‌ನಲ್ಲಿ ನಡೆಯಿತು. ಈ ಪಂದ್ಯವನ್ನು 4 ರನ್‌ಗಳಿಂದ ಗೆದ್ದ ಭಾರತ ತಂಡ 2-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಮಂಗಳವಾರ ನಡೆದ ಎರಡನೇ ಪಂದ್ಯದಲ್ಲಿ ಭಾರತ ತಂಡದ ಬ್ಯಾಟ್ಸ್ ಮನ್ ದೀಪಕ್ ಹೂಡಾ (Deepak Hooda) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಶತಕ ಬಾರಿಸಿದರು. ಈ ಶತಕದೊಂದಿಗೆ ದೀಪಕ್ ಹೂಡಾ ಸಚಿನ್ ತೆಂಡೂಲ್ಕರ್ ಅವರ ವಿಶೇಷ ದಾಖಲೆ ಹಿಂದಿಕ್ಕಿ ಹೊಸ ಇತಿಹಾಸ ಬರೆದಿದ್ದಾರೆ. ಈ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಆಡಿದ ಹೂಡಾ 57 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 9 ಫೋರ್ನೊಂದಿಗೆ 104 ರನ್ ಬಾರಿಸಿ ಅಬ್ಬರಿಸಿದರು. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರ ಶತಕ ಬಾರಿಸಿದ 4ನೇ ಬ್ಯಾಟ್ಸ್ಮನ್ ಎನಿಸಿಕೊಂಡರು.
ಅಷ್ಟೇ ಅಲ್ಲದೆ ಐರ್ಲೆಂಡ್ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಹೂಡಾ ಪಾತ್ರರಾಗಿದ್ದಾರೆ. ಹಾಗೆಯೇ ಐರ್ಲೆಂಡ್ ವಿರುದ್ದ ಅತ್ಯಧಿಕ ರನ್ಗಳಿಸಿದ ಟೀಮ್ ಇಂಡಿಯಾ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನೂ ಕೂಡ ಬರೆದಿದ್ದಾರೆ. ಇದಕ್ಕೂ ಮುನ್ನ 2007 ರಲ್ಲಿ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಐರ್ಲೆಂಡ್ ವಿರುದ್ದ 99 ರನ್ ಗಳಿಸಿದ್ದು, ಅತ್ಯಧಿಕ ರನ್ಗಳಿಕೆಯಾಗಿತ್ತು. ಇದೀಗ 104 ರನ್ ಬಾರಿಸುವ ಮೂಲಕ ದೀಪಕ್ ಹೂಡಾ ಸಚಿನ್ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಇನ್ನು ಈ ಶತಕದೊಂದಿಗೆ ಟೀಮ್ ಇಂಡಿಯಾ ಟಿ20 ಸೆಂಚುರಿ ವೀರರ ಪಟ್ಟಿಗೂ ದೀಪಕ್ ಹೂಡಾ ಸೇರ್ಪಡೆಯಾಗಿದ್ದಾರೆ. ಟೀಮ್ ಇಂಡಿಯಾ ಪರ ಇದುವರೆಗೆ ಕೇವಲ 3 ಮೂವರು ಬ್ಯಾಟ್ಸ್ಮನ್ ಮಾತ್ರ ಟಿ20 ಶತಕ ಬಾರಿಸಿದ್ದರು. ಈ ಪಟ್ಟಿಯಲ್ಲಿರುವ ಆಟಗಾರರೆಂದರೆ ರೋಹಿತ್ ಶರ್ಮಾ (4 ಶತಕ) ಕೆಎಲ್ ರಾಹುಲ್ (2 ಶತಕ) ಮತ್ತು ಸುರೇಶ್ ರೈನಾ (1 ಶತಕ). ಇದೀಗ ದೀಪಕ್ ಹೂಡಾ ನಾಲ್ಕನೇ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಭರ್ಜರಿ ಶತಕ ಬಾರಿಸುವ ಮೂಲಕ ಇದೀಗ ದೀಪಕ್ ಹೂಡಾ ಟೀಮ್ ಇಂಡಿಯಾ ಟಿ20 ವಿಶ್ವಕಪ್ ತಂಡದಲ್ಲಿ ಅವಕಾಶ ಪಡೆಯುವ ವಿಶ್ವಾಸದಲ್ಲಿದ್ದಾರೆ. ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ದದ ಟಿ20 ಸರಣಿಗೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ 225 ರನ್ಗಳ ಬೃಹತ್ ಗುರಿ ಬೆನ್ನತ್ತಿದ ಐರ್ಲೆಂಡ್ ತಂಡಕ್ಕೆ ಆರಂಭಿಕ ಆಟಗಾರ ಪಾಲ್ ಸ್ಟೀರ್ಲಿಂಗ್ ಸ್ಪೋಟಕ ಆರಂಭ ಒದಗಿಸಿದ್ದರು. ಕೇವಲ 18 ಎಸೆತಗಳಲ್ಲಿ 40 ರನ್ ಬಾರಿಸುವ ಮೂಲಕ ಟೀಮ್ ಇಂಡಿಯಾ ಬೌಲರ್ಗಳನ್ನು ನಡುಗಿಸಿದ್ದರು. ಇನ್ನೊಂದು ತುದಿಯಲ್ಲಿ ನಾಯಕ ಆಂಡ್ರ್ಯೂ ಬಾಲ್ಬಿರ್ನಿ 37 ಎಸೆತಗಳಲ್ಲಿ 60 ರನ್ ಬಾರಿಸಿ ಮಿಂಚಿದ್ದರು.
ಇನ್ನು ಹ್ಯಾರಿ ಟೆಕ್ಟರ್ 28 ಎಸೆತಗಳಲ್ಲಿ 39 ರನ್ ಬಾರಿಸಿದರೆ, ಜಾರ್ಜ್ ಡಾಕ್ರೆಲ್ 16 ಎಸೆತಗಳಲ್ಲಿ 34 ರನ್ ಸಿಡಿಸಿದ್ದರು. ಅಂತಿಮ ಹಂತದಲ್ಲಿ ಮಾರ್ಕ್ ಅಡೇರ್ 12 ಎಸೆತಗಳಲ್ಲಿ 23 ರನ್ ಬಾರಿಸಿದರು. ಇದಾಗ್ಯೂ ಗುರಿ ಮುಟ್ಟಲಾಗಲಿಲ್ಲ. ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 221 ರನ್ಗಳಿಸುವ ಕೇವಲ 4 ರನ್‌ಗಳಿಂದ ಐರ್ಲೆಂಡ್ ತಂಡವು ವಿರೋಚಿತವಾಗಿ ಸೋಲೊಪ್ಪಿಕೊಂಡಿತು.