Unmukt Chand: ಟೀಮ್ ಇಂಡಿಯಾಗೆ ಗುಡ್ ಬೈ ಹೇಳಿ ಅಮೆರಿಕದಲ್ಲಿ ಅಬ್ಬರಿಸುತ್ತಿರುವ ಮಾಜಿ ನಾಯಕ..!
Unmukt Chand: ಕೇವಲ 34 ಎಸೆತಗಳಲ್ಲಿ 53 ರನ್ ಬಾರಿಸುವ ಮೂಲಕ ಸಿಲಿಕಾನ್ ವ್ಯಾಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದರಂತೆ ಆ ಪಂದ್ಯದಲ್ಲೂ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
2012 ರ ಅಂಡರ್ 19 ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಉನ್ಮುಕ್ತ್ ಚಂದ್ (Unmukt Chand) ವರ್ಷಗಳ ಹಿಂದೆಯಷ್ಟೇ ಭಾರತೀಯ ಕ್ರಿಕೆಟ್ ಅನ್ನು ತೊರೆದಿದ್ದರು. ಅಲ್ಲದೆ ಉನ್ಮುಕ್ತ್ ಅಮೆರಿಕದಲ್ಲಿ ತಮ್ಮ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದರು. ಅದರಂತೆ ಇದೀಗ ಉನ್ತುಕ್ತ್ ಚಂದ್ ಅಮೆರಿಕ ಮೈನರ್ ಕ್ರಿಕೆಟ್ ಲೀಗ್ ಆಡುತ್ತಿದ್ದಾರೆ. ಸಿಲಿಕಾನ್ ವ್ಯಾಲಿ ಸ್ಟ್ರೈಕರ್ಸ್ ತಂಡ ಪರ ಆಡುತ್ತಿರುವ 29 ವರ್ಷದ ಉನ್ತುಕ್ ಇದೀಗ ಬ್ಯಾಕ್ ಟು ಬ್ಯಾಕ್ ಎರಡು ಅರ್ಧಶತಕಗಳನ್ನು ಬಾರಿಸುವ ಮೂಲಕ ಅಬ್ಬರಿಸಿದ್ದಾರೆ. ಹಾಲಿವುಡ್ ಮಾಸ್ಟರ್ ಬ್ಲಾಸ್ಟರ್ಸ್ ವಿರುದ್ದ ನಡೆದ 2ನೇ ಪಂದ್ಯದಲ್ಲಿ ಟಾಸ್ ಸೋತರೂ ಸಿಲಿಕಾನ್ ವ್ಯಾಲಿ ಮೊದಲು ಬ್ಯಾಟಿಂಗ್ ಮಾಡಿತು.
ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ಉನ್ಮುಕ್ತ್ ಚಂದ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಶ್ರೀಲಂಕಾದ ಶೆಹನ್ ಜಯಸೂರ್ಯ ಜೊತೆಗೂಡಿ 72 ರನ್‌ಗಳ ಜೊತೆಯಾಟವಾಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಅಲ್ಲದೆ ಅರ್ಧಶತಕ ಪೂರೈಸುವ ಮೂಲಕ ಬ್ಯಾಟ್ ಮೇಲೆಕ್ಕೆತ್ತಿದರು. ಅರ್ಧಶತಕದ ಬಳಿಕ ರನ್ಗಳಿಕೆಯ ವೇಗ ಹೆಚ್ಚಿಸಿಕೊಂಡ ಉನ್ಮುಕ್ತ್ ಅಂತಿಮವಾಗಿ 65 ಎಸೆತಗಳನ್ನು ಎದುರಿಸಿ 7 ಫೋರ್ ಹಾಗೂ 5 ಸಿಕ್ಸರ್ಗಳ ನೆರವಿನಿಂದ ಅಜೇಯ 94 ರನ್ ಗಳಿಸಿದ್ದರು.
ಉನ್ಮುಕ್ತ್ ಚಂದ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಸಿಲಿಕಾನ್ ವ್ಯಾಲಿ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 180 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಮೊತ್ತವನ್ನು ಚೇಸ್ ಮಾಡಿದ ಹಾಲಿವುಡ್ ಸ್ಟಾರ್ಸ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗೆ 117 ರನ್ ಗಳಿಸಲಷ್ಟೇ ಶಕ್ತವಾಯಿತು. ಸಿಲಿಕಾನ್ ವ್ಯಾಲಿ ಪರ ಎಡಗೈ ವೇಗದ ಬೌಲರ್ ಸೌರಭ್ ನೇತ್ರವಲ್ಕರ್ ಅದ್ಭುತ ಬೌಲಿಂಗ್ ಮಾಡಿದ್ದರು. 4 ಓವರ್‌ಗಳಲ್ಲಿ ಕೇವಲ 17 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದ್ದರು. ಇದಾಗ್ಯೂ ಅಜೇಯ 94 ರನ್ ಬಾರಿಸಿದ ಉನ್ಮುಕ್ತ್ ಪಂದ್ಯ ಶ್ರೇಷ್ಠರಾದರು.
View this post on Instagram
ಇದಕ್ಕೂ ಮುನ್ನ ಸೋಕಲ್ ವಿರುದ್ದದದ ಪಂದ್ಯದಲ್ಲೂ ಉನ್ತುಕ್ತ್ ಚಂದ್ ಅರ್ಧಶತಕ ಬಾರಿಸಿ ಮಿಂಚಿದ್ದರು. ಕೇವಲ 34 ಎಸೆತಗಳಲ್ಲಿ 53 ರನ್ ಬಾರಿಸುವ ಮೂಲಕ ಸಿಲಿಕಾನ್ ವ್ಯಾಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದರಂತೆ ಆ ಪಂದ್ಯದಲ್ಲೂ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇದೀಗ ಬ್ಯಾಕ್ ಟು ಬ್ಯಾಕ್ ಅರ್ಧಶತಕಗಳನ್ನು ಬಾರಿಸುವ ಮೂಲಕ ಉನ್ತುಕ್ತ್ ಚಂದ್ ತಮ್ಮ ಫಾರ್ಮ್ಗೆ ಮರಳಿದ್ದಾರೆ.