Deepak Hooda-Sanju Samson: ರೋಹಿತ್-ರಾಹುಲ್ ದಾಖಲೆ ಮುರಿದ ಹೂಡಾ-ಸ್ಯಾಮ್ಸನ್
IND vs IRE: ಟೀಮ್ ಇಂಡಿಯಾ ನೀಡಿದ 225 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಐರ್ಲೆಂಡ್ ತಂಡಕ್ಕೆ ಆರಂಭಿಕ ಆಟಗಾರ ಪಾಲ್ ಸ್ಟೀರ್ಲಿಂಗ್ ಸ್ಪೋಟಕ ಆರಂಭ ಒದಗಿಸಿದ್ದರು.
ಐರ್ಲೆಂಡ್ ವಿರುದ್ಧದ ಟಿ20 ಸರಣಿಯ 2 ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ (Team India) ಸರಣಿಯನ್ನು ವಶಪಡಿಸಿಕೊಂಡಿದೆ. ವಿಶೇಷ ಎಂದರೆ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ 4 ರನ್‌ಗಳ ರೋಚಕ ಜಯ ಸಾಧಿಸಿತ್ತು. ಡಬ್ಲಿನ್ನ ದಿ ವಿಲೇಜ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿತ್ತು. ಯುವ ಓಪನರ್ ಇಶಾನ್ ಕಿಶನ್ (3) ಬೇಗನೆ ಔಟಾದರೂ, ಆರಂಭಿಕನಾಗಿ ಕಾಣಿಸಿಕೊಂಡ ಸಂಜು ಸ್ಯಾಮ್ಸನ್ ಸ್ಪೋಟಕ ಆರಂಭ ಒದಗಿಸಿದ್ದರು. ಅಲ್ಲದೆ ಈ ಬಾರಿ ಮೂರನೇ ಕ್ರಮಾಂಕದಲ್ಲಿ ಆಡಿದ ದೀಪಕ್ ಹೂಡಾ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು.
ಪರಿಣಾಮ 2ನೇ ವಿಕೆಟ್ಗೆ 176 ರನ್‌ಗಳ ಜೊತೆಯಾಟ ಮೂಡಿಬಂತು. ಒಂದೆಡೆ ಸಂಜು ಸ್ಯಾಮ್ಸನ್ 42 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 77 ರನ್ ಬಾರಿಸಿದರೆ, ದೀಪಕ್ ಹೂಡಾ ಭರ್ಜರಿ ಶತಕ ಸಿಡಿಸಿದ್ದರು. ಸ್ಪೋಟಕ ಇನಿಂಗ್ಸ್ ಆಡಿದ ಹೂಡಾ 57 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 9 ಫೋರ್ನೊಂದಿಗೆ 104 ರನ್ ಬಾರಿಸಿ ಅಬ್ಬರಿಸಿದರು. ಈ ಭರ್ಜರಿ ಶತಕದ ನೆರವಿನಿಂದ ಟೀಮ್ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 225 ರನ್ ಕಲೆಹಾಕಿತು.
ಇನ್ನು ಈ ಪಂದ್ಯದಲ್ಲಿ ಭರ್ಜರಿ ಜೊತೆಯಾಟ ಪ್ರದರ್ಶಿಸಿದ ದೀಪಕ್ ಹೂಡಾ ಹಾಗೂ ಸಂಜು ಸ್ಯಾಮ್ಸನ್ ಹೊಸ ದಾಖಲೆ ಬರೆದಿದ್ದು ವಿಶೇಷ. 2ನೇ ವಿಕೆಟ್ಗೆ 176 ರನ್‌ಗಳ ಜೊತೆಯಾಟವಾಡುವ ಮೂಲಕ ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಜೊತೆಯಾಟವಾಡಿದ ಜೋಡಿ ಎನಿಸಿಕೊಂಡಿದ್ದಾರೆ. ಈ ಹಿಂದೆ ಈ ದಾಖಲೆ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಹೆಸರಿನಲ್ಲಿತ್ತು.
2017 ರಲ್ಲಿ ಶ್ರೀಲಂಕಾ ವಿರುದ್ಧ ರಾಹುಲ್ ಮತ್ತು ರೋಹಿತ್ 165 ರನ್‌ಗಳ ಜೊತೆಯಾಟವಾಡಿದ್ದರು. ಇದೀಗ ಹೂಡಾ ಮತ್ತು ಸ್ಯಾಮ್ಸನ್ 176 ರನ್ ಬಾರಿಸುವ ಮೂಲಕ ಟೀಮ್ ಇಂಡಿಯಾ ಪರ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೆ ಇದು ಟಿ20 ಕ್ರಿಕೆಟ್‌ನಲ್ಲಿ 9ನೇ ಅತಿದೊಡ್ಡ ಪಾಲುದಾರಿಕೆಯಾಗಿದೆ.
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ 225 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಐರ್ಲೆಂಡ್ ತಂಡಕ್ಕೆ ಆರಂಭಿಕ ಆಟಗಾರ ಪಾಲ್ ಸ್ಟೀರ್ಲಿಂಗ್ ಸ್ಪೋಟಕ ಆರಂಭ ಒದಗಿಸಿದ್ದರು. ಕೇವಲ 18 ಎಸೆತಗಳಲ್ಲಿ 40 ರನ್ ಬಾರಿಸುವ ಮೂಲಕ ಟೀಮ್ ಇಂಡಿಯಾ ಬೌಲರ್ಗಳನ್ನು ನಡುಗಿಸಿದ್ದರು. ಇನ್ನೊಂದು ತುದಿಯಲ್ಲಿ ನಾಯಕ ಆಂಡ್ರ್ಯೂ ಬಾಲ್ಬಿರ್ನಿ 37 ಎಸೆತಗಳಲ್ಲಿ 60 ರನ್ ಬಾರಿಸಿ ಮಿಂಚಿದ್ದರು.
ಇನ್ನು ಹ್ಯಾರಿ ಟೆಕ್ಟರ್ 28 ಎಸೆತಗಳಲ್ಲಿ 39 ರನ್ ಬಾರಿಸಿದರೆ, ಜಾರ್ಜ್ ಡಾಕ್ರೆಲ್ 16 ಎಸೆತಗಳಲ್ಲಿ 34 ರನ್ ಸಿಡಿಸಿದ್ದರು. ಅಂತಿಮ ಹಂತದಲ್ಲಿ ಮಾರ್ಕ್ ಅಡೇರ್ 12 ಎಸೆತಗಳಲ್ಲಿ 23 ರನ್ ಬಾರಿಸಿದರು. ಇದಾಗ್ಯೂ ಗುರಿ ಮುಟ್ಟಲಾಗಲಿಲ್ಲ. ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 221 ರನ್ಗಳಿಸುವ ಕೇವಲ 4 ರನ್ಗಳಿಂದ ಐರ್ಲೆಂಡ್ ತಂಡವು ವಿರೋಚಿತವಾಗಿ ಸೋಲೊಪ್ಪಿಕೊಂಡಿತು.