ಟಿ20 ಇನಿಂಗ್ಸ್​​ನಲ್ಲಿ ಅತ್ಯಧಿಕ ಬೌಲರ್​ಗಳನ್ನು ಬಳಸಿದ ತಂಡ ಯಾವುದು ಗೊತ್ತಾ?

|

Updated on: Nov 30, 2024 | 7:20 AM

T20 Records: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತ್ಯಧಿಕ ಬೌಲರ್​​ಗಳನ್ನು ಬಳಸಿದ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್​​ ತಂಡಗಳ  ಹೆಸರಿನಲ್ಲಿದೆ.

ಟಿ20 ಇನಿಂಗ್ಸ್​​ನಲ್ಲಿ ಅತ್ಯಧಿಕ ಬೌಲರ್​ಗಳನ್ನು ಬಳಸಿದ ತಂಡ ಯಾವುದು ಗೊತ್ತಾ?
T20 Crickets
Follow us on

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ತಂಡವೊಂದರ 11 ಆಟಗಾರರು ಬೌಲಿಂಗ್ ಮಾಡಿ ದಾಖಲೆ ಬರೆದಿದ್ದಾರೆ. ಇಂತಹದೊಂದು ಅಪರೂಪದ ದಾಖಲೆ ಮೂಡಿಬಂದಿದ್ದು ಭಾರತದ ಅಂಗಳದಲ್ಲಿ ಎಂಬುದು ವಿಶೇಷ. ಇನ್ನು ಈ ದಾಖಲೆ ಬರೆದ ತಂಡ ದೆಹಲಿ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಈ ಪಂದ್ಯದಲ್ಲಿ ದೆಹಲಿ ಮತ್ತು ಮಣಿಪುರ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮಣಿಪುರ ವಿರುದ್ಧ ದೆಹಲಿ ತಂಡದ ನಾಯಕ ಆಯುಷ್ ಬದೋನಿ 11 ಅಸ್ತ್ರಗಳನ್ನು ಪ್ರಯೋಗಿಸಿದ್ದಾರೆ.

ಆಯುಷ್ ಸಿಂಗ್ ಕಡೆಯಿಂದ ಶುರುವಾದ ದೆಹಲಿ ಬೌಲಿಂಗ್ ಆರಂಭ ಆ ಬಳಿಕ ಅಖಿಲ್ ಚೌಧರಿ, ಹರ್ಷ್ ತ್ಯಾಗಿ, ದಿಗ್ವೇಷ್ ರಾಠಿ, ಮಯಾಂಕ್ ರಾವತ್ ಹಾದಿಯಾಗಿ ಮುಂದುವರೆಯಿತು.

ಇನ್ನು ವಿಕೆಟ್ ಕೀಪರ್ ಆಯುಷ್ ಬದೋನಿ ಕೂಡ 2 ಓವರ್ ಎಸೆದರು. ಇದಾದ ಬಳಿಕ ಆರ್ಯನ್ ರಾಣಾ, ಹಿಮ್ಮತ್ ಸಿಂಗ್, ಪ್ರಿಯಾಂಶ್ ಆರ್ಯ, ಯಶ್ ಧುಲ್ ಮತ್ತು ಅನೂಜ್ ರಾವತ್ ತಲಾ ಒಂದೊಂದು ಓವರ್ ಎಸೆದರು. ಈ ಮೂಲಕ ದೆಹಲಿ ತಂಡದ ನಾಯಕ ಆಯುಷ್ ತನ್ನೆಲ್ಲಾ ಆಟಗಾರರಿಂದ ಬೌಲಿಂಗ್ ಮಾಡಿಸಿ ಟಿ20 ಕ್ರಿಕೆಟ್ ನಲ್ಲಿ ಅಪರೂಪದ ದಾಖಲೆ ಬರೆದರು.

ಇನ್ನು ಹನ್ನೊಂದು ಮಂದಿ ಬೌಲಿಂಗ್ ಮಾಡಿದರೂ ಮಣಿಪುರ ತಂಡ ಆಲೌಟ್ ಆಗಿಲ್ಲ ಎಂಬುದು ಮತ್ತೊಂದು ವಿಶೇಷ. ಈ ಪಂದ್ಯದಲ್ಲಿ 20 ಓವರ್‌ಗಳನ್ನು ಎದುರಿಸಿದ ಮಣಿಪುರ ತಂಡ 8 ವಿಕೆಟ್ ಕಳೆದುಕೊಂಡು 120 ರನ್ ಕಲೆಹಾಕಿತು.

121 ರನ್ ಗಳ ಸುಲಭ ಗುರಿ ಬೆನ್ನತ್ತಿದ ದೆಹಲಿ ಪರ ಆರಂಭಿಕ ದಾಂಡಿಗ ಯಶ್ ಧುಲ್ (59) ಅರ್ಧಶತಕ ಬಾರಿಸಿದರು. ಈ ಹಾಫ್ ಸೆಂಚುರಿ ನೆರವಿನಿಂದ ದೆಹಲಿ ತಂಡವು 18.3 ಓವರುಗಳಲ್ಲಿ 6 ವಿಕೆಟ್ ಕಳೆದುಕೊಂಡು 124 ರನ್ ಬಾರಿಸಿ 4 ವಿಕೆಟ್‌ಗಳ ಜಯ ಸಾಧಿಸಿತು.

ದೆಹಲಿ ಪರ ಬೌಲಿಂಗ್ ಮಾಡಿದ 11 ಆಟಗಾರರ ಪಟ್ಟಿ:

ಬೌಲರ್ ಓವರ್​​ ಮೇಡನ್ ರನ್ ವಿಕೆಟ್‌
ಆಯುಷ್ ಸಿಂಗ್ 2 0 7 1
ಅಖಿಲ್ ಚೌಧರಿ 2 0 10 0
ಹರ್ಷ್ ತ್ಯಾಗಿ 3 0 11 2
ದಿಗ್ವೇಶ್ ರಾಠಿ 3.1 0 8 2
ಮಯಾಂಕ್ ರಾವತ್ 3 0 31 0
ಆಯುಷ್ ಬದೋನಿ (ವಿಕೆಟ್ ಕೀಪರ್) 2 1 8 1
ಆರ್ಯನ್ ರಾಣಾ 1 0 11 0
ಹಿಮ್ಮತ್ ಸಿಂಗ್ 1 0 10 0
ಪ್ರಿಯಾಂಶ್ ಆರ್ಯ 1 0 2 1
ಯಶ್ ಧುಲ್ 1 0 5 0
ಅನೂಜ್ ರಾವತ್ 1 0 14 0

ವಿಶ್ವ ದಾಖಲೆ:

ಟಿ20 ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ತಂಡ ಪ್ಲೇಯಿಂಗ್ ಇಲೆವೆನ್ ನ 11 ಆಟಗಾರರಿಂದ ಬೌಲಿಂಗ್ ಮಾಡಿಸಿರಲಿಲ್ಲ. ಇದೀಗ ಅಂತಹದೊಂದು ಪ್ರಯೋಗ ನಡೆಸಿ ದೆಹಲಿ ತಂಡ ಹೊಸ ದಾಖಲೆ ಬರೆದಿದೆ. ಆಸ್ಟ್ರಿಯಾ ವಿರುದ್ಧ ಜೆಕ್ ರಿಪಬ್ಲಿಕ್ ಹಾಗೂ ಮಾಲ್ಟಾ ವಿರುದ್ಧ ಇಟಲಿ ತಂಡ 10 ಬೌಲರ್‌ಗಳನ್ನು ಬಳಸಿದ್ದು ಇದುವರೆಗಿನ ದಾಖಲೆಯಾಗಿತ್ತು.

ಇದೀಗ ವಿಕೆಟ್ ಕೀಪರ್ ಕೂಡ ಬೌಲಿಂಗ್ ಮಾಡುವ ಮೂಲಕ ಇಟಲಿ ಮತ್ತು ಜೆಕ್​ ರಿಪಬ್ಲಿಕ್ ತಂಡಗಳ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ದೆಹಲಿ ತಂಡ ಮುರಿದಿದೆ. ಈ ಮೂಲಕ ಟಿ20 ಇನಿಂಗ್ಸ್ ನಲ್ಲಿ 11 ಬೌಲರ್‌ಗಳಿಂದ ಬೌಲಿಂಗ್ ಮಾಡಿಸಿದ ವಿಶ್ವದ ಮೊದಲ ಮತ್ತು ಏಕೈಕ ತಂಡ ಎನಿಸಿಕೊಂಡಿದೆ.

ಇದನ್ನೂ ಓದಿ: ಟೀಮ್ ಇಂಡಿಯಾ ಜಯಭೇರಿ… ಹಲವು ದಾಖಲೆಗಳು ನಿರ್ಮಾಣ

ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತ್ಯಧಿಕ ಬೌಲರ್​​ಗಳನ್ನು ಬಳಸಿದ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್​​ ತಂಡಗಳ  ಹೆಸರಿನಲ್ಲಿದೆ. 2016 ರಲ್ಲಿ ಗುಜರಾತ್ ಲಯನ್ಸ್ ವಿರುದ್ಧದದ ಪಂದ್ಯದಲ್ಲಿ ಆರ್​ಸಿಬಿ 9 ಬೌಲರ್​​ಗಳನ್ನು ಬಳಸಿಕೊಂಡಿತ್ತು. 2023ರ ಐಪಿಎಲ್​​ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಕೂಡ 9 ಬೌಲರ್​ಗಳಿಂದ ಬೌಲಿಂಗ್ ಮಾಡಿಸಿ ಈ ದಾಖಲೆ ಸರಿಗಟ್ಟಿದ್ದರು.

ಹಾಗೆಯೇ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಟಿ20 ಇನಿಂಗ್ಸ್​ನಲ್ಲಿ ಅತ್ಯಧಿಕ ಬೌಲರ್​​ಗಳನ್ನು ಬಳಸಿದ ವಿಶ್ವ ದಾಖಲೆ ಜೆಕ್ ರಿಪಬ್ಲಿಕ್ ಹಾಗೂ ಇಟಲಿ ತಂಡಗಳ ಹೆಸರಿನಲ್ಲಿದೆ. ಈ ತಂಡಗಳು 10 ಬೌಲರ್​​ಗಳನ್ನು ಬಳಸಿ ಈ ದಾಖಲೆ ನಿರ್ಮಿಸಿದ್ದಾರೆ. ಇನ್ನು ಟೀಮ್ ಇಂಡಿಯಾ 2009 ರಲ್ಲಿ ಸೌತ್ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ 8 ಬೌಲರ್​​ಗಳನ್ನು ಪ್ರಯೋಗಿಸಿದ್ದರು.

ಟಿ20 ಇನಿಂಗ್ಸ್​​ನಲ್ಲಿ ಅತ್ಯಧಿಕ ಬೌಲರ್​​ಗಳನ್ನು ಬಳಸಿದ ತಂಡಗಳು:

ಬೌಲರ್‌ಗಳ ಸಂಖ್ಯೆ ತಂಡ ವಿರೋಧ ಸ್ಥಳ ದಿನಾಂಕ
11 ದೆಹಲಿ ಮಣಿಪುರ ಮುಂಬೈ 29 ನವೆಂಬರ್, 2024
10 ಜೆಕ್ ರಿಪಬ್ಲಿಕ್ ಆಸ್ಟ್ರಿಯಾ  ಲೋವರ್​ ಆಸ್ಟ್ರಿಯಾ 8 ಜೂನ್, 2024
10 ಇಟಲಿ ಮಾಲ್ಟಾ ಸ್ಪಿನಾಸೆಟೊ 26 ಸೆಪ್ಟೆಂಬರ್, 2024
9 ಕೇರಳ ಗೋವಾ ವಿಶಾಖಪಟ್ಟಣಂ 2 ಏಪ್ರಿಲ್, 2014
9 ಬಂಗಾಳ ತ್ರಿಪುರಾ ಕೋಲ್ಕತ್ತಾ 4 ಏಪ್ರಿಲ್, 20214
9 ಮೇಘಾಲಯ ಅರುಣಾಚಲ ಪ್ರದೇಶ ಮಂಗಳಗಿರಿ 9 ನವೆಂಬರ್, 2021
9 ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಲಯನ್ಸ್ ಬೆಂಗಳೂರು 14 ಮೇ, 2016
9 ಲಕ್ನೋ ಸೂಪರ್ ಜೈಂಟ್ಸ್ ಪಂಜಾಬ್ ಕಿಂಗ್ಸ್ ಮೊಹಾಲಿ 28 ಏಪ್ರಿಲ್, 2023