Deodhar Trophy 2023: ಪುದುಚೇರಿಯ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ ದೇವಧರ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಮಯಾಂಕ್ ಅಗರ್ವಾಲ್ ನೇತೃತ್ವದ ದಕ್ಷಿಣ ವಲಯ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಪೂರ್ವ ವಲಯ ತಂಡದ ವಿರುದ್ಧ ನಡೆದ ಅಂತಿಮ ಹಣಾಹಣಿಯಲ್ಲಿ ಟಾಸ್ ಗೆದ್ದ ದಕ್ಷಿಣ ವಲಯ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ದಕ್ಷಿಣ ವಲಯ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹನ್ ಕುನ್ನುಮ್ಮಲ್ ಹಾಗೂ ಮಯಾಂಕ್ ಅಗರ್ವಾಲ್ ಭರ್ಜರಿ ಆರಂಭ ಒದಗಿಸಿದ್ದರು.
ಮೊದಲ ವಿಕೆಟ್ಗೆ 181 ರನ್ ಪೇರಿಸಿದ ಈ ಜೋಡಿ ಬೃಹತ್ ಮೊತ್ತಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಇದರ ನಡುವೆ ರೋಹನ್ ಕೇವಲ 68 ಎಸೆತಗಳಲ್ಲಿ ಬಿರುಸಿನ ಸೆಂಚುರಿ ಸಿಡಿಸಿದರು. ಅಲ್ಲದೆ ಕೇವಲ 75 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ 107 ರನ್ ಬಾರಿಸಿ ಔಟಾದರು. ಮತ್ತೊಂದೆಡೆ ಮಯಾಂಕ್ ಅಗರ್ವಾಲ್ 83 ಎಸೆತಗಳಲ್ಲಿ 4 ಫೋರ್ಗಳೊಂದಿಗೆ 63 ರನ್ ಕಲೆಹಾಕಿದರು.
ಆ ಬಳಿಕ ಬಂದ ಎನ್. ಜಗದೀಸನ್ (54) ಅರ್ಧಶತಕದ ಕೊಡುಗೆ ನೀಡಿದರೆ, ರೋಹಿತ್ ರಾಯುಡು 26 ರನ್ಗಳ ಕಾಣಿಕೆ ನೀಡಿದರು. ಇನ್ನು ಅಂತಿಮ ಹಂತದಲ್ಲಿ ಅಜೇಯ 24 ರನ್ ಬಾರಿಸಿ ಸಾಯಿ ಕಿಶೋರ್ ಅಬ್ಬರಿಸಿದರು. ಪರಿಣಾಮ ನಿಗದಿತ 50 ಓವರ್ಗಳಲ್ಲಿ ದಕ್ಷಿಣ ವಲಯ ತಂಡವು 8 ವಿಕೆಟ್ ಕಳೆದುಕೊಂಡು 328 ರನ್ ಕಲೆಹಾಕಿತು.
329 ರನ್ಗಳ ಕಠಿಣ ಗುರಿ ಬೆನ್ನತ್ತಿದ ಪೂರ್ವ ವಲಯ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಅಭಿಮನ್ಯು ಈಶ್ವರನ್ (1) ಅನ್ನು ವಿ ಕೌಶಿಕ್ ಔಟ್ ಮಾಡಿದರೆ, ಉತ್ಕರ್ಷ್ ಸಿಂಗ್ (4) ವಿಧ್ವತ್ ಕಾವೇರಪ್ಪ ಎಸೆತದಲ್ಲಿ ಔಟಾದರು. ಇನ್ನು ವಿರಾಟ್ ಸಿಂಗ್ (6) ಕೌಶಿಕ್ಗೆ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಕಣಕ್ಕಿಳಿದ ಸಂದೀಪ್ ಕುಮಾರ್ 41 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಇನ್ನು ನಾಯಕ ಸೌರಭ್ ತಿವಾರಿ 28 ರನ್ಗಳಿಸಿ ಔಟಾದರು. ಪರಿಣಾಮ ಕೇವಲ 115 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಪೂರ್ವ ವಲಯ ಸಂಕಷ್ಟಕ್ಕೆ ಸಿಲುಕಿತ್ತು.
ಈ ವೇಳೆ ಕ್ರೀಸ್ಗೆ ಆಗಮಿಸಿದ ರಿಯಾನ್ ಪರಾಗ್ ಅಕ್ಷರಶಃ ಅಬ್ಬರಿಸಿದರು. ಕುಮಾರ್ ಕುಶಾಗ್ರ ಜೊತೆಗೂಡಿ ಬ್ಯಾಟ್ ಬೀಸಿದ ಪರಾಗ್ ದಕ್ಷಿಣ ವಲಯ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ಯುವ ದಾಂಡಿಗನ ಬ್ಯಾಟ್ನಿಂದ 5 ಭರ್ಜರಿ ಸಿಕ್ಸ್ ಹಾಗೂ 8 ಫೋರ್ಗಳು ಮೂಡಿಬಂದವು.
6ನೇ ವಿಕೆಟ್ಗೆ 105 ರನ್ಗಳ ಜೊತೆಯಾಟವಾಡಿದ ರಿಯಾನ್ ಪರಾಗ್ ಹಾಗೂ ಕುಮಾರ್ ಕುಶಾಗ್ರರನ್ನು ಬೇರ್ಪಡಿಸುವಲ್ಲಿ ಕೊನೆಗೂ ವಾಷಿಂಗ್ಟನ್ ಸುಂದರ್ ಯಶಸ್ವಿಯಾದರು. 65 ಎಸೆತಗಳಲ್ಲಿ 95 ರನ್ ಬಾರಿಸಿದ್ದ ರಿಯಾನ್ ಪರಾಗ್ರನ್ನು ಸುಂದರ್ ಎಲ್ಬಿಡಬ್ಲ್ಯೂ ಮಾಡಿದರು.
ಇದರ ಬೆನ್ನಲ್ಲೇ 58 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 68 ಬಾರಿಸಿದ್ದ ಕುಮಾರ್ ಕುಶಾಗ್ರಗೂ ವಾಷಿಂಗ್ಟನ್ ಸುಂದರ್ ಪೆವಿಲಿಯನ್ ಹಾದಿ ತೋರಿಸಿದರು. ಬ್ಯಾಕ್ ಟು ಬ್ಯಾಕ್ ವಿಕೆಟ್ ಸಿಗುತ್ತಿದ್ದಂತೆ ಮೇಲುಗೈ ಸಾಧಿಸಿದ ದಕ್ಷಿಣ ವಲಯ ಬೌಲರ್ಗಳು 46.1 ಓವರ್ಗಳಲ್ಲಿ 283 ರನ್ಗಳಿಗೆ ಪೂರ್ವ ವಲಯವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ಈ ಮೂಲಕ 45 ರನ್ಗಳ ಅಮೋಘ ಗೆಲುವು ದಾಖಲಿಸಿ ದಕ್ಷಿಣ ವಲಯ ತಂಡವು ದೇವಧರ್ ಟ್ರೋಫಿಯನ್ನು ಎತ್ತಿ ಹಿಡಿದಿದೆ.
ದಕ್ಷಿಣ ವಲಯ ಪ್ಲೇಯಿಂಗ್ 11: ಅರುಣ್ ಕಾರ್ತಿಕ್ , ಮಯಾಂಕ್ ಅಗರ್ವಾಲ್ (ನಾಯಕ) , ರೋಹನ್ ಕುನ್ನುಮ್ಮಲ್ , ಸಾಯಿ ಸುದರ್ಶನ್ , ಎನ್ ಜಗದೀಸನ್ (ವಿಕೆಟ್ ಕೀಪರ್) , ರೋಹಿತ್ ರಾಯುಡು , ವಾಷಿಂಗ್ಟನ್ ಸುಂದರ್ , ಸಾಯಿ ಕಿಶೋರ್ , ವಾಸುಕಿ ಕೌಶಿಕ್ , ವಿಜಯ್ಕುಮಾರ್ ವೈಶಾಕ್ , ವಿಧ್ವತ್ ಕಾವೇರಪ್ಪ.
ಇದನ್ನೂ ಓದಿ: Team India: ಒಟ್ಟು 47 ಪ್ಲೇಯರ್ಸ್: ಟೀಮ್ ಇಂಡಿಯಾದಿಂದ 32 ಆಟಗಾರರು ಔಟ್..!
ಪೂರ್ವ ವಲಯ ಪ್ಲೇಯಿಂಗ್ 11: ಅಭಿಮನ್ಯು ಈಶ್ವರನ್ , ಉತ್ಕರ್ಷ್ ಸಿಂಗ್ , ವಿರಾಟ್ ಸಿಂಗ್ , ಸೌರಭ್ ತಿವಾರಿ (ನಾಯಕ) , ರಿಯಾನ್ ಪರಾಗ್ , ಕುಮಾರ್ ಕುಶಾಗ್ರಾ (ವಿಕೆಟ್ ಕೀಪರ್) , ಶಹಬಾಝ್ ಅಹ್ಮದ್ , ಮಣಿಶಂಕರ್ ಮುರಾಸಿಂಗ್ , ಆಕಾಶ್ ದೀಪ್ , ಸುದೀಪ್ ಕುಮಾರ್ ಘರಾಮಿ , ಮುಖ್ತಾರ್ ಹುಸೇನ್.
Published On - 10:56 pm, Thu, 3 August 23