IND vs WI: 0,6,6,0,4.. ಮೊದಲ ಐದು ಎಸೆತಗಳಲ್ಲಿ 16 ರನ್ ಚಚ್ಚಿದ ತಿಲಕ್ ವರ್ಮಾ! ವಿಡಿಯೋ ನೋಡಿ
Tilak Varma: ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಪರ ಪದಾರ್ಪಣೆ ಮಾಡಿದ ಯುವ ಬ್ಯಾಟ್ಸ್ಮನ್ ತಿಲಕ್ ವರ್ಮಾ ಮಾತ್ರ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದು, ಸೋಲಿನ ನಡುವೆಯೂ ತಂಡಕ್ಕೆ ಕೊಂಚ ಸಮಾಧಾನ ತಂದಿತು.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ (India vs West Indies) 4 ರನ್ಗಳ ಸೋಲು ಅನುಭವಿಸಿದೆ. ಆತಿಥೇಯರು ನೀಡಿದ 150 ರನ್ಗಳ ಅಲ್ಪ ಗುರಿ ಬೆನ್ನಟ್ಟುವಲ್ಲಿ ಮುಗ್ಗರಿಸಿದ ಹಾರ್ದಿಕ್ ಪಡೆಗೆ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಸೋಲು ಎದುರಾಗಿದೆ. ಆದರೆ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ (Team India) ಪರ ಪದಾರ್ಪಣೆ ಮಾಡಿದ ಯುವ ಬ್ಯಾಟ್ಸ್ಮನ್ ತಿಲಕ್ ವರ್ಮಾ (Tilak Varma) ಮಾತ್ರ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದು, ಸೋಲಿನ ನಡುವೆಯೂ ತಂಡಕ್ಕೆ ಕೊಂಚ ಸಮಾಧಾನ ತಂದಿತು. ವಾಸ್ತವವಾಗಿ ಈ ಪಂದ್ಯದ ಮೂಲಕ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನ ಆರಂಭಿಸಿದ ತಿಲಕ್ ಅವರಿಗೆ ತಂಡದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಟೀಂ ಇಂಡಿಯಾದ ಕ್ಯಾಪ್ ನೀಡಿದರು. ಈ ವೇಳೆ ತಿಲಕ್ಗೆ ಸಲಹೆ ನೀಡಿದ ಹಾರ್ದಿಕ್, ‘ಇಲ್ಲಿಯವರೆಗೆ ಏನು ಮಾಡುತ್ತಿದ್ದೀರೋ ಅದೇ ರೀತಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಾಡಬೇಕು. ಬೇರೆ ಏನನ್ನೂ ಮಾಡುವ ಅಗತ್ಯವಿಲ್ಲ ಎಂದಿದ್ದರು. ದೇಶೀಯ ಕ್ರಿಕೆಟ್ ಮತ್ತು ವಿಶೇಷವಾಗಿ ಐಪಿಎಲ್‌ನಲ್ಲಿ (IPL), ತಿಲಕ್ ವರ್ಮಾ ಮುಂಬೈ ಇಂಡಿಯನ್ಸ್ ಪರ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದರು. ಇದೀಗ ಆಡಿದ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲೂ ತಿಲಕ್ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ಬಂದ ತಕ್ಷಣ ಸತತ ಎರಡು ಸಿಕ್ಸರ್
ಬ್ಯಾಟಿಂಗ್ ಮಾಡುವುದಕ್ಕೂ ಮೊದಲು ಎರಡು ಅದ್ಭುತ ಕ್ಯಾಚ್‌ಗಳನ್ನು ಹಿಡಿಯುವ ಮೂಲಕ ಫೀಲ್ಡಿಂಗ್‌ನಲ್ಲಿ ಗಮನ ಸೆಳೆದಿದ್ದ ತಿಲಕ್, ಬ್ಯಾಟಿಂಗ್‌ನಲ್ಲೂ ಮೋಡಿ ಮಾಡಿದರು. ಇಶಾನ್ ಕಿಶನ್ ವಿಕೆಟ್ ಪತನದ ಬಳಿಕ ಕ್ರೀಸ್ಗೆ ಬಂದ ತಿಲಕ್ ಮೊದಲ ಎಸೆತದಲ್ಲಿ ಯಾವುದೇ ರನ್ ಗಳಿಸಲಿಲ್ಲ. ಆದರೆ ಮುಂದಿನ ಓವರ್‌ನಲ್ಲಿ ಅಲ್ಜಾರಿ ಜೋಸೆಫ್ ಅವರನ್ನು ಎದುರಿಸಿದ ತಿಲಕ್, ತಮ್ಮ ಎರಡನೇ ಎಸೆತವನ್ನು ಪುಲ್ ಶಾಟ್ ಹೊಡೆದು ಸಿಕ್ಸರ್‌ಗೆ ಅಟ್ಟಿದರು.
IND vs WI 1st T20: 200ನೇ ಟಿ20 ಪಂದ್ಯವನ್ನು 4 ರನ್ಗಳಿಂದ ಸೋತ ಟೀಂ ಇಂಡಿಯಾ..!
ಅಚ್ಚರಿಗೊಂಡ ಅಲ್ಜಾರಿ ಜೋಸೆಫ್
ತಿಲಕ್ ಅವರ ಈ ಶಾಟ್ ಅಲ್ಜಾರಿ ಜೋಸೆಫ್ ಅವರನ್ನು ಅಚ್ಚರಿಗೊಳಿಸಿತು. ಅಲ್ಲದೆ ತಮ್ಮ ಚೊಚ್ಚಲ ಪಂದ್ಯದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಖಾತೆ ತೆರೆದ ತಿಲಕ್ ವರ್ಮಾ ಅವರು ಟಿ20ಯಲ್ಲಿ ಸೂರ್ಯಕುಮಾರ್ ಯಾದವ್ ಅವರ ಮೊದಲ ಇನ್ನಿಂಗ್ಸ್ ಅನ್ನು ನೆನಪಿಸಿದರು. ವಾಸ್ತವವಾಗಿ 2021 ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದ ವೇಳೆ, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ಪಂದ್ಯವನ್ನಾಡಿದ್ದ ಸೂರ್ಯ, ತಾವು ಎದುರಿಸಿದ ಮೊದಲ ಎಸೆತವನ್ನು ಸಿಕ್ಸರ್‌ಗೆ ಕಳುಹಿಸಿದ್ದರು.
Tilak Varma the star!
0,6,6,0,4 on the first 5 balls in international cricket – what a talent…!! pic.twitter.com/GE8QuLOPml
— Mufaddal Vohra (@mufaddal_vohra) August 3, 2023
ಐದು ಎಸೆತಗಳಲ್ಲಿ 16 ರನ್
ಆದರೆ ಸೂರ್ಯನಂತೆ ಒಂದು ಸಿಕ್ಸರ್‌ಗೆ ಸುಮ್ಮನಾಗದ ತಿಲಕ್, ಜೋಸೆಫ್ ಎಸೆದ ಮುಂದಿನ ಎಸೆತವನ್ನು ಮತ್ತೊಮ್ಮೆ ಸಿಕ್ಸರ್ಗಟ್ಟಿದರು. ಮೊದಲ ಮೂರು ಎಸೆತಗಳಲ್ಲಿ ಎರಡು ಅದ್ಭುತ ಸಿಕ್ಸರ್ ಬಾರಿಸುವುದರೊಂದಿಗೆ ತಿಲಕ್ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಉತ್ತಮವಾಗಿ ಆರಂಭಿಸಿದರು. ಬಳಿಕ ಮುಂದಿನ ಎಸೆತವನ್ನು ಡಾಟ್ ಮಾಡಿದ ತಿಲಕ್, ಆ ನಂತರದ ಎಸೆತವನ್ನು ಬೌಂಡರಿಗಟ್ಟಿದರು. ಈ ಮೂಲಕ ತಾವು ಎದುರಿಸಿದ ಮೊದಲ ಐದು ಎಸೆತಗಳಲ್ಲಿ ತಿಲಕ್ 16 ರನ್ ಕಲೆಹಾಕಿದರು. ಆದರೆ ಸ್ಫೋಟಕ ಆರಂಭದ ಹೊರತಾಗಿಯೂ ತಿಲಕ್, 11 ನೇ ಓವರ್‌ನಲ್ಲಿ ಬಿಗ್ ಶಾಟ್ ಹೊಡೆಯುವ ಯತ್ನದಲ್ಲಿ ಕ್ಯಾಚಿತ್ತು ಔಟಾದರು. ತಿಲಕ್ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ ಆದರೆ ಅವರು ಕೇವಲ 22 ಎಸೆತಗಳಲ್ಲಿ 39 ರನ್ ಸಿಡಿಸುವ ಮೂಲಕ ಭವಿಷ್ಯದ ಬಗ್ಗೆ ಉತ್ತಮ ಭರವಸೆ ಮೂಡಿಸಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:13 am, Fri, 4 August 23