ವಡೋದರದ ಮೋತಿ ಬಾಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಜಯ ಹಝಾರೆ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡದ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಭರ್ಜರಿ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಬರೋಡಾ ತಂಡದ ನಾಯಕ ಕೃನಾಲ್ ಪಾಂಡ್ಯ ಕರ್ನಾಟಕ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು.
ಅದರಂತೆ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಕೇವಲ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಮತ್ತೊಂದೆಡೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ದೇವದತ್ ಪಡಿಕ್ಕಲ್ ಯುವ ಆಟಗಾರ ಅನೀಶ್ ಜೊತೆಗೂಡಿ ಇನಿಂಗ್ಸ್ ಕಟ್ಟಿದರು.
ಅನುಭವಿ ಬರೋಡಾ ಬೌಲರ್ಗಳನ್ನು ನಿರಾಯಾಸವಾಗಿ ಎದುರಿಸಿದ ಪಡಿಕ್ಕಲ್ ಮೈದಾನದ ಮೂಲೆ ಮೂಲೆಗೂ ಫೋರ್ಗಳ ಸುರಿಮಳೆಗೈದರು. ಈ ಮೂಲಕ ಕೇವಲ 96 ಎಸೆತಗಳಲ್ಲಿ 1 ಭರ್ಜರಿ ಸಿಕ್ಸ್ ಹಾಗೂ 15 ಫೋರ್ಗಳೊಂದಿಗೆ ಶತಕ ಪೂರೈಸಿದರು.
ಆದರೆ ಶತಕದ ಬೆನ್ನಲ್ಲೇ ಭರ್ಜರಿ ಹೊಡೆತಕ್ಕೆ ಮುಂದಾದ ದೇವದತ್ ಪಡಿಕ್ಕಲ್ (102 ರನ್, 99 ಎಸೆತ) ರಾಜ್ ಲಿಂಬಾನಿ ಎಸೆತದಲ್ಲಿ ಕ್ಯಾಚಿತ್ತು ನಿರ್ಗಮಿಸಿದರು. ಮತ್ತೊಂದೆಡೆ ಪಡಿಕ್ಕಲ್ಗೆ ಉತ್ತಮ ಸಾಥ್ ನೀಡಿದ ಅನೀಶ್ 64 ಎಸೆತಗಳಲ್ಲಿ 54 ರನ್ ಬಾರಿಸಿದರು. ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡವು 41 ಓವರ್ಗಳ ಮುಕ್ತಾಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 220 ರನ್ ಕಲೆಹಾಕಿದೆ.
ಕರ್ನಾಟಕ ಪ್ಲೇಯಿಂಗ್ 11: ಮಯಾಂಕ್ ಅಗರವಾಲ್ (ನಾಯಕ) , ದೇವದತ್ ಪಡಿಕ್ಕಲ್ , ಅನೀಶ್ ಕೆ ವಿ , ಸ್ಮರಣ್ ರವಿಚಂದ್ರನ್ , ಕೃಷ್ಣನ್ ಶ್ರೀಜಿತ್ ( ವಿಕೆಟ್ ಕೀಪರ್ ) , ಅಭಿನವ್ ಮನೋಹರ್ , ಹಾರ್ದಿಕ್ ರಾಜ್ , ಶ್ರೇಯಸ್ ಗೋಪಾಲ್ , ಅಭಿಲಾಷ್ ಶೆಟ್ಟಿ , ವಾಸುಕಿ ಕೌಶಿಕ್ , ಪ್ರಸಿದ್ಧ್ ಕೃಷ್ಣ.
ಇದನ್ನೂ ಓದಿ: 1,955 ಎಸೆತಗಳಲ್ಲಿ ಇತಿಹಾಸ ರಚಿಸಿದ ಗ್ಲೆನ್ ಮ್ಯಾಕ್ಸ್ವೆಲ್
ಬರೋಡಾ ಪ್ಲೇಯಿಂಗ್ 11: ಶಾಶ್ವತ್ ರಾವತ್ , ನಿನಾದ್ ಅಶ್ವಿನ್ ಕುಮಾರ್ ರಥ್ವಾ , ಅತಿತ್ ಶೇಠ್ , ಶಿವಾಲಿಕ್ ಶರ್ಮಾ , ಕೃನಾಲ್ ಪಾಂಡ್ಯ (ನಾಯಕ) , ವಿಷ್ಣು ಸೋಲಂಕಿ ( ವಿಕೆಟ್ ಕೀಪರ್ ) , ಮಹೇಶ್ ಪಿಥಿಯಾ , ಭಾರ್ಗವ್ ಭಟ್ , ಭಾನು ಪಾನಿಯಾ , ರಾಜ್ ಲಿಂಬಾನಿ , ಲುಕ್ಮಾನ್ ಮೇರಿವಾಲಾ.