ಐಸಿಸಿ ಟಿ20 ವಿಶ್ವಕಪ್ 2022 ರಲ್ಲಿ (T20 World Cup) ಭಾರತ ತಂಡ ಅಕ್ಟೋಬರ್ 23 ರಂದು ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ಭರ್ಜರಿ ಅಭ್ಯಾಸ ನಡೆಸುತ್ತಿದೆ. ಈಗಾಗಲೇ ಪರ್ತ್ನಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧ ನಡೆದಿರುವ ಎರಡು ಅನಧಿಕೃತ ಅಭ್ಯಾಸ ಪಂದ್ಯದಲ್ಲಿ ಭಾರತ ಸೋಲು-ಗೆಲುವಿನ ರುಚಿ ಕಂಡಿದೆ. ಇದೀಗ ಗಬ್ಬಾಕ್ಕೆ ಬಂದಿರುವ ಭಾರತ ಇಂದು ಆ್ಯರೋನ್ ಫಿಂಚ್ ನಾಯಕತ್ವದ ಆಸ್ಟ್ರೇಲಿಯಾ (India vs Australia) ವಿರುದ್ಧ ಅಧಿಕೃತ ವಾರ್ಮ್-ಅಪ್ ಮ್ಯಾಚ್ ಆಡಲಿದೆ. ಇದಕ್ಕಾಗಿ ರೋಹಿತ್ ಪಡೆ ನೆಟ್ನಲ್ಲಿ ಬೆವರು ಹರಿಸುತ್ತಿದೆ. ಇದರ ನಡುವೆ ಭಾನುವಾರ ನಡೆದ ಪ್ರ್ಯಾಕ್ಟೀಸ್ ಸೆಷನ್ನಲ್ಲಿ ಹಿರಿಯ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ (Dinesh Karthik) ಅವರು ಯುವ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ಗೆ ಬ್ಯಾಟಿಂಗ್ ಟಿಪ್ಸ್ ನೀಡುತ್ತಿರುವುದು ಕಂಡುಬಂದಿದೆ.
ಖ್ಯಾತ ಕ್ರೀಡಾ ಪತ್ರಕರ್ತ ವಿಮಲ್ ಕುಮಾರ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ಇದರಲ್ಲಿ ಟೀಮ್ ಇಂಡಿಯಾ ಪ್ಲೇಯರ್ಸ್ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ಜೊತೆಗೆ ಕಾರ್ತಿಕ್ ಅವರು ಪಂತ್ಗೆ ಬ್ಯಾಟಿಂಗ್ ಪಾಠ ಮಾಡುತ್ತಿರುವುದು ಕಂಡುಬಂತು. ಪಿಚ್ ಮಧ್ಯೆ ನಿಂತು ಯಾವರೀತಿ ಶಾಟ್ ಹೊಡೆಯಬೇಕು ಎಂಬ ಕುರಿತು ಪಂತ್ಗೆ ಕೆಲ ಸಲಹೆ ನೀಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಸದ್ಯ ಪಂತ್ ಕಳಪೆ ಫಾರ್ಮ್ನಲ್ಲಿದ್ದಾರೆ. ಹೀಗಾಗಿ ಇವರಿಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಸಿಗುತ್ತಾ ಎಂಬುದು ಕುತೂಹಲ ಕೆರಳಿಸಿದೆ. ಪಂತ್ ಅವರನ್ನು ಬೆಂಚ್ ಕೂರಿಸಿದರೆ ಕಾರ್ತಿಕ್ ಕಣಕ್ಕಿಳಿಯಲಿದ್ದಾರೆ.
ಮೊಹಮ್ಮದ್ ಶಮಿ ಮಾರಕ ಬೌಲಿಂಗ್:
ಟಿ20 ವಿಶ್ವಕಪ್ಗೆ ಮುಖ್ಯ ಆಟಗಾರನಾಗಿ ಆಯ್ಕೆಯಾಗದ ಮೊಹಮ್ಮದ್ ಶಮಿ ಬಳಿಕ ಜಸ್ಪ್ರೀತ್ ಬುಮ್ರಾ ಅಲಭ್ಯತೆಯಲ್ಲಿ ತಂಡ ಸೇರಿಕೊಂಡಿದ್ದಾರೆ. ಬುಮ್ರಾ ನೀಡುತ್ತಿದ್ದ ಕೊಡುಗೆಯನ್ನು ಶಮಿ ಎಷ್ಟರ ಮಟ್ಟಿಗೆ ನಿರ್ವಹಿಸುತ್ತಾರೆ ಎಂಬುದು ನೋಡಬೇಕಿದೆ. ಈಗಾಗಲೇ ಅಭ್ಯಾಸ ಆರಂಭಿಸಿರುವ ಶಮಿ ಮೇಲೆ ಭಾರತ ನಂಬಿಕೆಯಿಟ್ಟಿದ್ದು ಎಲ್ಲರ ಕಣ್ಣು ಇವರ ಮೇಲಿದೆ. ಮೊದಲ ಅಭ್ಯಾಸ ಪಂದ್ಯಕ್ಕೂ ಮುನ್ನ ಭಾರತ ತಂಡವನ್ನು ಸೇರಿಕೊಂಡಿರುವ ಮೊಹಮ್ಮದ್ ಶಮಿ ನೆಟ್ಸ್‌ನಲ್ಲಿ ಬೌಲಿಂಗ್ ಅಭ್ಯಾಸ ಮಾಡಿದ್ದು ಗಮನ ಸೆಳೆದಿದ್ದಾರೆ. ಅವರು ಬ್ರಿಸ್ಬೇನ್‌ನಲ್ಲಿ ನೆಟ್ಸ್‌ನಲ್ಲಿ ದಿನೇಶ್ ಕಾರ್ತಿಕ್‌ರನ್ನು ಕ್ಲೀನ್ ಬೌಲ್ಡ್ ಮಾಡಿದ್ದು, ವಿಡಿಯೋ ವೈರಲ್ ಆಗುತ್ತಿದೆ. ಇತ್ತ ವಿರಾಟ್ ಕೊಹ್ಲಿ ಕೂಡ ಉತ್ತಮ ಹೊಡೆತಗಳನ್ನು ಬಾರಿಸಿ ಸತತವಾಗಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವುದು ಕಂಡುಬಂತು.
ಭಾರತ ಕ್ರಿಕೆಟ್ ತಂಡ ಕಳೆದ ವಾರ ವೆಸ್ಟರ್ನ್ ಆಸ್ಟ್ರೇಲಿಯಾ ಇಲೆವೆನ್ ವಿರುದ್ಧ ಆಡಿದ ಎರಡು ಅನಧಿಕೃತ ಅಭ್ಯಾಸ ಪಂದ್ಯದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ದ್ವಿತೀಯ ಪಂದ್ಯದಲ್ಲಿ 36 ರನ್ಗಳಿಂದ ಸೋಲು ಕಂಡಿತು. ಇದೀಗ ಟೀಮ್ ಇಂಡಿಯಾ ಆಟಗಾರರು ಇಂದು ಆಸ್ಟ್ರೇಲಿಯಾ ವಿರುದ್ಧ ಮತ್ತೊಂದು ಅಗ್ನಿಪರೀಕ್ಷೆಗೆ ಇಳಿಯಲಿದ್ದಾರೆ. ಇದಾದ ಬಳಿಕ ರೋಹಿತ್ ಪಡೆ ಕೊನೆಯ ವಾರ್ಮ್-ಅಪ್ ಮ್ಯಾಚ್ ಅಕ್ಟೋಬರ್ 19 ರಂದು ನ್ಯೂಜಿಲೆಂಡ್ ವಿರುದ್ಧ ಆಡಲಿದೆ.
ಇಂದು ಆಯೋಜಿಸಿರುವ ಭಾರತ-ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯ ಬೆಳಿಗ್ಗೆ 9:30 ಕ್ಕೆ ಪ್ರಾರಂಭವಾಗಲಿದೆ. ಈ ಪಂದ್ಯದ ನೇರ ಪ್ರಸಾರವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್ ಹಾಗೂ Dinsey+Hotstar ಅಪ್ಲಿಕೇಶನ್‌ನಲ್ಲಿ ನೇರಪ್ರಸಾರ ಕಾಣಬಹುದು.
Published On - 8:48 am, Mon, 17 October 22