IND vs AUS: ಇಂದು ಭಾರತ- ಆಸ್ಟ್ರೇಲಿಯಾ ಅಧಿಕೃತ ಅಭ್ಯಾಸ ಪಂದ್ಯ: ರೋಹಿತ್ ಪಡೆಯ ಬಲಿಷ್ಠ ಪ್ಲೇಯಿಂಗ್ XI ಇಲ್ಲಿದೆ
T20 World Cup Warm-up Match: ಇಂದು ಬ್ರಿಸ್ಬೇನ್ನ ಗಬ್ಬಾ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮೊದಲ ಅಭ್ಯಾಸ ಪಂದ್ಯದಲ್ಲಿ ಮುಖಾಮುಖಿ ಆಗಲಿದೆ. ಈಗಾಗಲೇ ಗಬ್ಬಾಕ್ಕೆ ತಲುಪಿರುವ ರೋಹಿತ್ ಪಡೆ ಭಾನುವಾರ ಪ್ರ್ಯಾಕ್ಟೀಸ್ ಸೆಷನ್ನಲ್ಲಿ ಪಾಲ್ಗೊಂಡಿತ್ತು.
ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ (T20 World Cup) ಟೂರ್ನಿಗೆ ಚಾಲನೆ ದೊರಕಿದ್ದು ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲೇ ಅಚ್ಚರಿಯ ಫಲಿತಾಂಶ ಕಂಡುಬಂದಿದೆ. ಏಷ್ಯಾಕಪ್ ಚಾಂಪಿಯನ್ ಶ್ರೀಲಂಕಾ ವಿರುದ್ಧ ಕ್ರಿಕೆಟ್ ಶಿಶು ನಮೀಬಿಯಾ ತಂಡ 55 ರನ್ಗಳ ಭರ್ಜರಿ ಜಯ ಸಾಧಿಸಿತು. ದ್ವಿತೀಯ ಪಂದ್ಯದಲ್ಲಿ ಯುಎಇ ಅನ್ನು ನೆದರ್ಲೆಂಡ್ ಸೋಲಿಸಿ ಗೆಲುವಿನ ಸಿಹಿ ಕಂಡಿದೆ. ಇದರ ನಡುವೆ ಅಭ್ಯಾಸ ಪಂದ್ಯ ಕೂಡ ನಡೆಯುತ್ತಿದೆ. ಇಂದು ಬ್ರಿಸ್ಬೇನ್ನ ಗಬ್ಬಾ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ತಂಡಗಳು ಮೊದಲ ಅಭ್ಯಾಸ ಪಂದ್ಯದಲ್ಲಿ ಮುಖಾಮುಖಿ ಆಗಲಿದೆ. ಈಗಾಗಲೇ ಗಬ್ಬಾಕ್ಕೆ ತಲುಪಿರುವ ರೋಹಿತ್ ಪಡೆ ಭಾನುವಾರ ಪ್ರ್ಯಾಕ್ಟೀಸ್ ಸೆಷನ್ನಲ್ಲಿ ಪಾಲ್ಗೊಂಡಿತ್ತು. ಅನಧಿಕೃತ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿಯದ ವಿರಾಟ್ ಕೊಹ್ಲಿ (Virat Kohli) ಇಂದು ಆಡುತ್ತಾರ ಎಂಬುದು ಕುತೂಹಲ ಕೆರಳಿಸಿದೆ. ಜೊತೆಗೆ ಮೊಹಮ್ಮದ್ ಶಮಿ ಅವರ ಮೇಲೆ ಎಲ್ಲರ ಕಣ್ಣಿದೆ.
ಭಾರತ ತಂಡ ಅಕ್ಟೋಬರ್ 23 ರಂದು ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ತನ್ನ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಕಟ್ಟುವುದು ಅನಿವಾರ್ಯ. ಆಡಲಿರುವ ಎರಡು ಅಭ್ಯಾಸ ಪಂದ್ಯದಲ್ಲಿ ಪ್ರಯೋಗ ನಡೆಸಿ ಪಾಕ್ ವಿರುದ್ಧದ ಪಂದ್ಯಕ್ಕೆ ಆಯ್ಕೆ ಮಾಡಲಿದೆ. ಇಂದು ಓಪನರ್ಗಳಾಗಿ ಕೆಎಲ್ ರಾಹುಲ್ ಹಾಗೂ ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್ ಆರಂಭಿಸುವುದು ಖಚಿತ. ಮೂರನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಆಡಬಹುದು. ಇಲ್ಲವಾದಲ್ಲಿ ದೀಪಕ್ ಹೂಡಾಗೆ ಅವಕಾಶ ನೀಡಿದರೂ ಅಚ್ಚರಿ ಪಡಬೇಕಿಲ್ಲ.
ನಾಲ್ಕನೇ ಸ್ಥಾನ ಸೂರ್ಯಕುಮಾರ್ ಯಾದವ್ಗೆ ಫಿಕ್ಸ್ ಆಗಿದ್ದು ಹಾರ್ದಿಕ್ ಪಾಂಡ್ಯ ನಂತರದಲ್ಲಿ ಬ್ಯಾಟ್ ಬೀಸಲು ಬರಲಿದ್ದಾರೆ. ಇನ್ನು ವಿಕೆಟ್ ಕೀಪಿಂಗ್ ಜವಾಬ್ದಾರಿ ದಿನೇಶ್ ಕಾರ್ತಿಕ್ಗೆ ಎಂದು ಹೇಳಲಾಗುತ್ತಿದೆ. ರಿಷಭ್ ಪಂತ್ ಕಡೆಯಿಂದ ನಿರೀಕ್ಷೆಗೆ ತಕ್ಕ ಪ್ರದರ್ಶನ ಬರುತ್ತಿಲ್ಲ. ಹೀಗಾಗಿ ಕಾರ್ತಿಕ್ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎಂದೇ ಹೇಳಬಹುದು. ಅಕ್ಷರ್ ಪಟೇಲ್ ಅಥವಾ ಆರ್. ಅಶ್ವಿನ್ ನಡುವೆ ಪೈಪೋಟಿ ಇದೆ. ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಮೊಹಮ್ಮದ್ ಶಮಿ ಹಾಗೂ ಅರ್ಶ್ದೀಪ್ ವೇಗಿಗಳಾಗಿದ್ದು ಯಾರಿಗೆ ಸ್ಥಾನ ಎಂಬುದು ನೋಡಬೇಕಿದೆ. ಯುಜ್ವೇಂದ್ರ ಚಹಲ್ ಆಡುವ ಬಳಗದಲ್ಲಿ ಇರಲಿದ್ದಾರೆ.
ಭಾರತ ಕ್ರಿಕೆಟ್ ತಂಡ ಕಳೆದ ವಾರ ವೆಸ್ಟರ್ನ್ ಆಸ್ಟ್ರೇಲಿಯಾ ಇಲೆವೆನ್ ವಿರುದ್ಧ ಆಡಿದ ಎರಡು ಅನಧಿಕೃತ ಅಭ್ಯಾಸ ಪಂದ್ಯದಲ್ಲಿ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲಿಲ್ಲ. ಮೊದಲ ಅಭ್ಯಾಸ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ದ್ವಿತೀಯ ಪಂದ್ಯದಲ್ಲಿ 36 ರನ್ಗಳಿಂದ ಸೋಲುಂಡಿತು. ಇದೀಗ ಟೀಮ್ ಇಂಡಿಯಾ ಆಟಗಾರರು ಆಸ್ಟ್ರೇಲಿಯಾ ವಿರುದ್ಧ ಅಗ್ನಿಪರೀಕ್ಷೆಗೆ ಇಳಿಯಲಿದ್ದಾರೆ. ಇದಾದ ಬಳಿಕ ರೋಹಿತ್ ಪಡೆ ಕೊನೆಯ ವಾರ್ಮ್-ಅಪ್ ಮ್ಯಾಚ್ ಅಕ್ಟೋಬರ್ 19 ರಂದು ನ್ಯೂಜಿಲೆಂಡ್ ವಿರುದ್ಧ ಆಡಲಿದೆ.
ಇನ್ನು ಭಾರತ-ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಇಂದು ಬೆಳಿಗ್ಗೆ 9:30 ಕ್ಕೆ ಪ್ರಾರಂಭವಾಗಲಿದೆ. ಈ ಪಂದ್ಯದ ನೇರ ಪ್ರಸಾರವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್ಗಳಲ್ಲಿ ನೇರಪ್ರಸಾರ ವೀಕ್ಷಿಸಬಹುದು. ಹಾಗೆಯೇ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು Dinsey+Hotstar ಅಪ್ಲಿಕೇಶನ್‌ನಲ್ಲಿ ನೋಡಬಹುದು.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.
ಸ್ಟ್ಯಾಂಡ್ ಬೈ ಆಟಗಾರರು: ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಶ್ರೇಯಸ್ ಅಯ್ಯರ್, ರವಿ ಬಿಷ್ಟೋಯಿ.
ಆಸ್ಟ್ರೇಲಿಯಾ ತಂಡ: ಆರೋನ್ ಫಿಂಚ್ (ನಾಯಕ), ಪ್ಯಾಟ್ ಕಮ್ಮಿನ್ಸ್ (ಉಪ ನಾಯಕ), ಆಷ್ಟನ್ ಅಗರ್, ಟಿಮ್ ಡೇವಿಡ್, ಜೋಶ್ ಹ್ಯಾಜಲ್‌ವುಡ್, ಜೋಶ್ ಇಂಗ್ಲಿಸ್ (ವಿಕೆಟ್- ಕೀಪರ್), ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್ಸನ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋನಿಸ್, ಮ್ಯಾಥ್ಯೂ ವೇಡ್ (ವಿಕೆಟ್-ಕೀಪರ್), ಡೇವಿಡ್ ವಾರ್ನರ್, ಆ್ಯಡಂ ಝಂಪಾ.
Published On - 7:52 am, Mon, 17 October 22