ಐಸಿಸಿ ಟಿ20 ವಿಶ್ವಕಪ್ನ ಸೂಪರ್ 12 ಹಂತದ ಪಂದ್ಯದಲ್ಲಿ ಭಾರತ ತಂಡ ಇದೀಗ ಮುಂದಿನ ಸವಾಲಿಗೆ ಸಜ್ಜಾಗುತ್ತಿದೆ. ನವೆಂಬರ್ 2 ರಂದು ಅಡಿಲೇಡ್ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಬಾಂಗ್ಲಾದೇಶ (India vs Bangladesh) ವಿರುದ್ಧ ಸೆಣೆಸಾಟ ನಡೆಸಲಿದೆ. ಈಗಾಗಲೇ ಅಡಿಲೇಡ್ಗೆ (Adelaide) ತಲುಪಿರುವ ರೋಹಿತ್ ಪಡೆ ಇಂದು ಅಭ್ಯಾಸ ನಡೆಸಲಿದೆ. ಪಾಯಿಂಟ್ ಟೇಬಲ್ನಲ್ಲಿ ದ್ವಿತೀಯ ಸ್ಥಾನದಲ್ಲಿರುವ ಭಾರತಕ್ಕೆ ಬಾಂಗ್ಲಾ ವಿರುದ್ಧದ ಪಂದ್ಯ ಸಾಕಷ್ಟು ಮಹತ್ವದ್ದಾಗಿದೆ. ಸೆಮಿ ಫೈನಲ್ಗೇರುವ ದೃಷ್ಟಿಯಿಂದ ಟೀಮ್ ಇಂಡಿಯಾ ಈ ಮ್ಯಾಚ್ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿದೆ. ಹೀಗಾಗಿ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಬೇಕು. ಹಾಗಾದರೆ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಭಾರತ ಪ್ಲೇಯಿಂಗ್ ಇಲೆವೆನ್ (India Playing XI) ಹೇಗಿರಬಹುದು ಎಂಬುದನ್ನು ನೋಡೋಣ.
ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಭಾರತ ತಂಡದಲ್ಲಿ ಮೂರು ಬದಲಾವಣೆ ನಿರೀಕ್ಷಿಸಲಾಗಿದೆ. ಇಂಜುರಿ ಸಮಸ್ಯೆ ಕೂಡ ಟೀಮ್ ಇಂಡಿಯಾಕ್ಕೆ ಕಾಡುತ್ತಿದೆ. ಹೀಗಾಗಿ ಪ್ಲೇಯಿಂಗ್ ಇಲೆವೆನ್ನಲ್ಲಿ ಹೊಸ ಆಟಗಾರರು ಕಾಣಿಸಿಕೊಳ್ಳುವುದು ಖಚಿತ. ಮೊದಲನೆಯದಾಗಿ ಕೆಎಲ್ ರಾಹುಲ್ ಫಾರ್ಮ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಒಂದು ಪಂದ್ಯದಲ್ಲಿ ತಂಡ ಉತ್ತಮ ಆರಂಭ ಪಡೆದುಕೊಳ್ಳುವುದು ಮುಖ್ಯ. ಆದರೆ, ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಓಪನರ್ಗಳು ಸಂಪೂರ್ಣ ವಿಫರಾಗಿದ್ದಾರೆ. ಅದರಲ್ಲೂ ಕೆಎಲ್ ರಾಹುಲ್ ಕಡೆಯಿಂದ ರನ್ ಬರುತ್ತಿಲ್ಲ. ಕಳೆದ ಮೂರು ಪಂದ್ಯಗಳಲ್ಲಿ ಇವರು ಗಳಿಸಿದ್ದು ಇಟ್ಟು 22 ರನ್ ಮಾತ್ರ.
ಪಾಕ್ ವಿರುದ್ಧ ರಾಹುಲ್ 13 ಎಸೆತಗಳಲ್ಲಿ 4 ರನ್ ಗಳಿಸಿದರೆ, ನೆದರ್ಲೆಂಡ್ಸ್ ವಿರುದ್ಧ 12 ಎಸೆತಗಳಲ್ಲಿ 9 ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ 14 ಎಸೆತಗಳಲ್ಲಿ 9 ರನ್ ಬಾರಿಸಿ ಔಟಾಗಿದ್ದರು. ಹೀಗಿದ್ದರೂ ರಾಹುಲ್ಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ. ಈರೀತಿ ಕಳಪೆ ಫಾರ್ಮ್ನಿಂದ ಬಳಲಿ ಫಿನಿಕ್ಸ್ನಂತೆ ರಾಹುಲ್ ಎದ್ದು ಬಂದಿರುವ ಉದಾಹರಣೆ ಅನೇಕ ಇವೆ. ಹೀಗಾಗಿ ವೈಫಲ್ಯ ಅನುಭವಿಸಿದ್ದರೂ ರಾಹುಲ್ಗೆ ಕೊನೆಯ ಅವಕಾಶವೊಂದು ನೀಡುವ ಸಾಧ್ಯತೆ ಇದೆ. ಬಾಂಗ್ಲಾ ವಿರುದ್ಧ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಅವರೇ ಓಪನರ್ಗಳಾಗಿ ಕಣಕ್ಕಿಳಿಯಲಿದ್ದಾರೆ.
ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಆಡಲಿದ್ದು ನಂತರದ ಸ್ಥಾನವನ್ನು ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ತುಂಬಲಿದ್ದಾರೆ. ಆದರೆ, 6ನೇ ಹಾಗೂ ಏಳನೇ ಕ್ರಮಾಂಕಕ್ಕೆ ಯಾವ ಪ್ಲೇಯರ್ ಎಂಬ ಗೊಂದಲ ಮೂಡಿದೆ. ಯಾಕೆಂದರೆ ದಿನೇಶ್ ಕಾರ್ತಿಕ್ ಇಂಜುರಿಗೆ ತುತ್ತಾದ ಪರಿಣಾಮ ಬಾಂಗ್ಲಾ ವಿರುದ್ಧ ಆಡುವುದು ಅನುಮಾನ ಎನ್ನಲಾಗಿದೆ.
ಭಾರತ- ದಕ್ಷಿಣ ಆಫ್ರಿಕಾ ಪಂದ್ಯ ಆರಂಭಕ್ಕೂ ಮುನ್ನವೇ ಕಾರ್ತಿಕ್ ಇಂಜುರಿಗೆ ತುತ್ತಾಗಿದ್ದರು. ನೆಟ್ನಲ್ಲಿ ಕ್ಯಾಚಿಂಗ್ ಅಭ್ಯಾಸದ ವೇಳೆ ಡೈವ್ ಬಿದ್ದು ಕ್ಯಾಚ್ ಹಿಡಿಯುವಾಗ ಗಾಯಕ್ಕೆ ತುತ್ತಾಗಿದ್ದರು. ಆದರೆ, ಆ ಸಂದರ್ಭ ದೊಡ್ಡ ಮಟ್ಟದ ನೋವು ಕಾಣಿಸಿಕೊಂಡಿರಲಿಲ್ಲ. ಬಳಿಕ ಪಂದ್ಯದ ಮಧ್ಯೆ ಭಾರತ ಫೀಲ್ಡಿಂಗ್ ಮಾಡುವಾಗ 16ನೇ ಓವರ್ ವೇಳೆ ದೇಹದ ಹಿಂಭಾಗ ಜೋರಾಗಿ ನೋವು ಕಾಣಿಸಿಕೊಂಡಿದೆ. ಈ ಸಂದರ್ಭ ಕಾರ್ತಿಕ್ಗೆ ಕೀಪಿಂಗ್ ಕೂಡ ಮಾಡಲಾಗಿಲ್ಲ. ಹೀಗಾಗಿ ಮೈದಾನ ತೊರೆದು ಇವರ ಬದಲು ರಿಷಭ್ ಪಂತ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಿದರು.
ಕಾರ್ತಿಕ್ ಇಂಜುರಿ ಸಮಸ್ಯೆ ಬಗ್ಗೆ ಬಿಸಿಸಿಐ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಆದರೆ, ಮೂಲಗಳ ಪ್ರಕಾರ ಅವರಿಗೆ ವಿಶ್ರಾಂತಿಯ ಅಗತ್ಯವಿರುವ ಕಾರಣ ರಿಷಭ್ ಪಂತ್ ಸ್ಥಾನ ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಅಂತೆಯೆ ಕಳೆದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಬದಲು ಸ್ಥಾನ ಪಡೆದಿದ್ದ ದೀಪಕ್ ಹೂಡ ಯಾವುದೇ ಕಮಾಲ್ ಮಾಡಲಿಲ್ಲ. ಬ್ಯಾಟಿಂಗ್ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದರು. ಹೀಗಾಗಿ ಅಕ್ಷರ್ ಪ್ಲೇಯಿಂಗ್ ಇಲೆವೆನ್ಗೆ ಮರಳುವ ಸಾಧ್ಯತೆ ಹೆಚ್ಚಿದೆ. ರವಿಚಂದ್ರನ್ ಅಶ್ವಿನ್ ಜಾಗಕೂಡ ಭದ್ರವಿಲ್ಲ. ಯುಜ್ವೇಂದ್ರ ಚಹಲ್ ಅವರು ಅಶ್ವಿನ್ ಜಾಗದಲ್ಲಿ ಆಡಿದರೆ ಅಚ್ಚರಿ ಪಡಬೇಕಿಲ್ಲ. ವೇಗಿಗಳಾಗಿ ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಹಾಗೂ ಅರ್ಶ್ದೀಪ್ ಸಿಂಗ್ ಇರಲಿದ್ದಾರೆ.
ಭಾರತ ಸಂಭಾವ್ಯ ಪ್ಲೇಯಿಂಗ್ XI: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಭವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಹಲ್.