ಮೂರು ತಿಂಗಳ ಹಿಂದೆ ದಿನೇಶ್ ಕಾರ್ತಿಕ್ (Dinesh Karthik) ಪುನಃ ಟೀಮ್ ಇಂಡಿಯಾ ಪರ ಆಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಇವರು ನೀಡಿದ ಪ್ರದರ್ಶನ ಕಾರ್ತಿಕ್ ಕೆರೆಯರ್ ಅನ್ನೇ ಬದಲಾಯಿಸಿದೆ. ತಿಂಗಳ ಹಿಂದೆ ಆರ್ಸಿಬಿ (RCB) ತಂಡಕ್ಕೆ ನೀಡುತ್ತಿದ್ದ ಕೊಡುಗೆಯನ್ನು ಈಗ ಟೀಮ್ ಇಂಡಿಯಾ ಪರವೂ ಮುಂದುವರೆಸುತ್ತಿದ್ದಾರೆ. ಇದು ಮತ್ತೊಮ್ಮೆ ಸಾಭೀತಾಗಿದ್ದು ಸದ್ಯ ಸಾಗುತ್ತಿರುವ ಭಾರತ- ದಕ್ಷಿಣ ಆಫ್ರಿಕಾ (India vs South Africa) ನಡುವಣ ಟಿ20 ಸರಣಿ. ಶುಕ್ರವಾರ ರಾಜ್ಕೋಟ್ನಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಕಾರ್ತಿಕ್ ಅಕ್ಷರಶಃ ಎದುರಾಳಿಗೆ ಕಂಟಕವಾಗಿ ಪರಿಣಮಿಸಿದರು. ಕುಸಿದಿದ್ದ ಭಾರತ ತಂಡಕ್ಕೆ ಆಧಾರವಾಗಿ ನಿಂತ ಡಿಕೆ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಇದರ ಜೊತೆಗೆ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ ಸಾಧನೆ ಕೂಡ ಮಾಡಿದ್ದಾರೆ.
ಕೇವಲ 27 ಎಸೆತಗಳಲ್ಲಿ 55 ರನ್ ಚಚ್ಚಿದ ಕಾರ್ತಿಕ್ 203.70 ಸ್ಟ್ರೈಕ್‌ರೇಟ್‌ನಲ್ಲಿ 9 ಫೋರ್ ಮತ್ತು 2 ಅಮೋಘ ಸಿಕ್ಸರ್ ಸಿಡಿಸಿದರು. ಈ ಮೂಲಕ ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ಅರ್ಧಶತಕ ದಾಖಲಿಸಿದ ಅತಿ ಹಿರಿಯ ಆಟಗಾರ ಎಂಬ ಸಾಧನೆ ಇವರ ಹೆಸರಿಗೆ ದಾಖಲಾಗಿದೆ. ಈ ವಿಚಾರದಲ್ಲಿ ಮಾಜಿ ನಾಯಕ ಎಂಎಸ್ ಧೋನಿ ದಾಖಲೆಯನ್ನೂ ಅಳಿಸಿ ಹಾಕಿದ್ದಾರೆ. ಈ ಹಿಂದೆ ಧೋನಿ 36ನೇ ವರ್ಷದಲ್ಲಿ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಅರ್ಧಶತಕ ದಾಖಲಿಸಿದ್ದರು. ಇದೀಗ ಡಿಕೆ 37ನೇ ವಯಸ್ಸಿನಲ್ಲಿ ಚೊಚ್ಚಲ ಅರ್ಧಶತಕ ಗಳಿಸಿದ್ದಾರೆ.
IND vs SA: ಕಾರ್ತಿಕ್- ಹಾರ್ದಿಕ್ ಅಬ್ಬರ.. ಅವೇಶ್- ಹರ್ಷಲ್ ಮಾರಕ ದಾಳಿ; ಭಾರತಕ್ಕೆ 82 ರನ್ ಜಯ
ನಾಲ್ಕನೇ ಟಿ20 ಕದನದಲ್ಲಿ ಟಾಸ್ ಗೆದ್ದ ಅ. ಆಫ್ರಿಕಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ದಿನೇಶ್ ಕಾರ್ತಿಕ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಜೊತೆಯಾಟದ ಬಲದಿಂದ ಆತಿಥೇಯ ತಂಡವು 20 ಓವರ್‌ಗಳಲ್ಲಿ 6ಕ್ಕೆ 169 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಆವೇಶ್ ಖಾನ್ (18ಕ್ಕೆ4) ತಡೆಯೊಡ್ಡಿದರು. ತೆಂಬಾ ಬವುಮಾ ಬಳಗವು 16.5 ಓವರ್‌ಗಳಲ್ಲಿ 87 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ 2-2ರ ಸಮಬಲ ಸಾಧಿಸಿತು. ಅದರಿಂದಾಗಿ ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕೊನೆಯ ಪಂದ್ಯದಲ್ಲಿ ಜಯಿಸುವವರಿಗೆ ಸರಣಿ ಕಿರೀಟ ಒಲಿಯಲಿದೆ. ಮೊದಲ ಎರಡು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಅಮೋಘ ಜಯ ಸಾಧಿಸಿತ್ತು. ಮೂರನೇ ಪಂದ್ಯದಲ್ಲಿ ರಿಷಭ್ ಪಂತ್ ಬಳಗವು ಪುಟಿದೆದ್ದು ಗೆಲುವು ಸಾಧಿಸಿತು.
ಅಚ್ಚರಿ ಎಂದರೆ ಈ ಪಂದ್ಯದಲ್ಲಿ ಭಾರತ ತಂಡವು 81 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಕ್ರೀಸ್‌ಗೆ ಕಾಲಿಟ್ಟ ದಿನೇಶ್ ಇನಿಂಗ್ಸ್‌ನ ಚಿತ್ರಣವನ್ನೇ ಬದಲಿಸಿದರು. ಸ್ಟ್ರೈಟ್ ಡ್ರೈವ್, ಸ್ಕೂಪ್ ಮತ್ತು ರಿವರ್ಸ್ ಸ್ವೀಪ್‌ಗಳ ಮೂಲಕ ಮನಮೋಹಕವಾಗಿ ಆಟವಾಡಿದರು. ಇವರಿಗೆ ಹಾರ್ದಿಕ್ ಕೂಡ ಸಾಥ್ ನೀಡಿದರು. ಇದರಿಂದಾಗಿ ಕೊನೆಯ 5 ಓವರ್‌ಗಳಲ್ಲಿ 69 ರನ್‌ಗಳು ತಂಡದ ಖಾತೆ ಸೇರಿದವು. ಐದನೇ ವಿಕೆಟ್ ಜೊತೆಯಾಟದಲ್ಲಿ ಡಿಕೆ- ಹಾರ್ದಿಕ್ 65 ರನ್ಗಳ ಕಾಣಿಕೆ ನೀಡಿದರು.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:03 am, Sat, 18 June 22