ಅಬ್ಬರ ಸಿಡಿಲಬ್ಬರ: ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ ಇಂಗ್ಲೆಂಡ್
England vs Netherlands: ಈ ಪಂದ್ಯದಲ್ಲಿ ಟಾಸ್ ಗೆದ್ದ ಐರ್ಲೆಂಡ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ರಾಯ್ ಕೇವಲ 1 ರನ್ ಗಳಿಸಿ ಔಟಾಗಿದ್ದರು.
Netherlands vs England: ಆಮ್ಸ್ಟೆಲ್ವೀನ್ ಮೈದಾನದಲ್ಲಿ ನಡೆದ ಆತಿಥೇಯ ನೆದರ್ಲ್ಯಾಂಡ್ಸ್ ವಿರುದ್ದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ (England) ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿ ಹೊಸ ವಿಶ್ವ ದಾಖಲೆ ( ODI World Record) ಬರೆದಿದೆ. ನಿಗದಿತ 50 ಓವರ್ಗಳಲ್ಲಿ 498 ರನ್ ಬಾರಿಸುವ ಮೂಲಕ ಇಂಗ್ಲೆಂಡ್ ತಂಡವು ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ಗಳಿಸಿದ ತಂಡವಾಗಿ ಹೊರಹೊಮ್ಮಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಮೂವರು ಬ್ಯಾಟ್ಸ್ಮನ್ಗಳು ಶತಕ ಸಿಡಿಸಿ ಮಿಂಚಿದ್ದರು. ವಿಶೇಷ ಎಂದರೆ ಇಂಗ್ಲೆಂಡ್ ತಂಡವು ತನ್ನದೇ ದಾಖಲೆಯನ್ನು ಮುರಿಯುವ ಮೂಲಕ ಈ ವಿಶ್ವ ದಾಖಲೆ ನಿರ್ಮಿಸಿದೆ. ಈ ಹಿಂದೆ 2018 ರಲ್ಲಿ ಆಸ್ಟ್ರೇಲಿಯಾ ವಿರುದ್ದ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 481 ರನ್ ಕಲೆಹಾಕಿಸಿ ದಾಖಲೆ ಬರೆದಿತ್ತು. ಇದೀಗ ನೆದರ್ಲ್ಯಾಂಡ್ಸ್ ವಿರುದ್ದ ಅಬ್ಬರಿಸುವ ಮೂಲಕ ಹಳೆಯ ದಾಖಲೆಯನ್ನು ಮುರಿದು ಹೊಸ ರೆಕಾರ್ಡ್ ನಿರ್ಮಿಸಿದೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್ಲ್ಯಾಂಡ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ರಾಯ್ ಕೇವಲ 1 ರನ್ ಗಳಿಸಿ ಔಟಾಗಿದ್ದರು. ಇದರ ನಂತರ, ಫಿಲಿಫ್ ಸಾಲ್ಟ್ ಮತ್ತು ಡೇವಿಡ್ ಮಲಾನ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಪರಿಣಾಮ ಎರಡನೇ ವಿಕೆಟ್‌ಗೆ 222 ರನ್‌ಗಳ ಅದ್ಭುತ ಜೊತೆಯಾಟ ಮೂಡಿಬಂತು. ಈ ವೇಳೆ ಆರಂಭಿಕ ಆಟಗಾರ ಫಿಲಿಪ್ ಸಾಲ್ಟ್ ಕೇವಲ 93 ಎಸೆತಗಳಲ್ಲಿ 122 ರನ್ ಗಳಿಸಿ ಮಿಂಚಿದರು. ಸಾಲ್ಟ್ ಅವರ ಈ ಇನಿಂಗ್ಸ್ನಲ್ಲಿ 14 ಬೌಂಡರಿ ಹಾಗೂ 3 ಸಿಕ್ಸರ್‌ಗಳು ಸೇರಿದ್ದವು. ಮತ್ತೊಂದೆಡೆ ಡೇವಿಡ್ ಮಲಾನ್ 109 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 9 ಬೌಂಡರಿಯೊಂದಿಗೆ 125 ರನ್ ಬಾರಿಸಿದರು.
ಫಿಲಿಪ್ ಸಾಲ್ಟ್ ಔಟಾದ ಬಳಿಕ ಕ್ರೀಸ್ಗಿಳಿದ ಜೋಸ್ ಬಟ್ಲರ್ ಇಡೀ ಪಂದ್ಯ ಗತಿಯನ್ನೇ ಬದಲಿಸಿದ್ದರು. 14 ಸಿಕ್ಸ್ ಹಾಗೂ 7 ಫೋರ್ನೊಂದಿಗೆ ಅಬ್ಬರಿಸಿದ ಬಟ್ಲರ್ ಕೇವಲ 70 ಎಸೆತಗಳಲ್ಲಿ ಅಜೇಯ 162 ರನ್ ಚಚ್ಚಿದ್ದರು. ಬಟ್ಲರ್ ಅಬ್ಬರಕ್ಕೆ ಸಾಥ್ ನೀಡಿದ ಲಿಯಾಮ್ ಲಿವಿಂಗ್ಸ್ಟೋನ್ ಸಿಡಿಲಬ್ಬರ ಪ್ರದರ್ಶಿಸಿದ್ದರು. ಕೇವಲ 22 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 6 ಬೌಂಡರಿಯೊಂದಿಗೆ ಲಿವಿಂಗ್ಸ್ಟೋನ್ ಅಜೇಯ 66 ರನ್ ಬಾರಿಸುವ ಮೂಲಕ ಇಂಗ್ಲೆಂಡ್ ತಂಡದ ಮೊತ್ತವನ್ನು ನಿಗದಿತ 50 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 498 ಕ್ಕೆ ತಂದು ನಿಲ್ಲಿಸಿದರು. ಈ ಮೂಲಕ ಇಂಗ್ಲೆಂಡ್ ತಂಡವು ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ತಂಡವಾಗಿ ಮತ್ತೊಮ್ಮೆ ಅಗ್ರಸ್ಥಾನ ಅಲಂಕರಿಸಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.