ಜೂನ್ 9 ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ಕ್ರಿಕೆಟ್ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಸಿಸಿಐ (BCCI) ಭಾನುವಾರ ಪ್ರಕಟ ಮಾಡಿತ್ತು. ಅಂದುಕೊಂಡಂತೆ ಪ್ರಮುಖ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು ಜೊತೆಗೆ ಕೆಲ ಅಚ್ಚರಿ ಆಯ್ಕೆಗಳು ಕೂಡ ನಡೆದಿದೆ. ಟೀಮ್ ಇಂಡಿಯಾ (Team India) ಖಾಯಂ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ರೆಸ್ಟ್ ನೀಡಲಾಗಿದೆ. ಹೀಗಾಗಿ ಕೆಎಲ್ ರಾಹುಲ್ ಅವರನ್ನು ಹಂಗಾಮಿ ನಾಯಕರಾಗಿ ಮತ್ತು ರಿಷಬ್ ಪಂತ್ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ವಿಶೇಷ ಎಂದರೆ ಈ ಬಾರಿಯ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಫಿನಿಶರ್ ಆಗಿ ಬೊಂಬಾಟ್ ಪ್ರದರ್ಶನ ನೀಡುತ್ತಿರುವ ದಿನೇಶ್ ಕಾರ್ತಿಕ್ (Dinesh Karthik) ಮತ್ತೆ ಟೀಮ್ ಇಂಡಿಯಾಕ್ಕೆ ಆಯ್ಕೆಯಾಗಿದ್ದಾರೆ. ಬರೋಬ್ಬರಿ ಮೂರು ವರ್ಷಗಳ ನಂತರ ಕಾರ್ತಿಕ್ಗೆ ಮತ್ತೆ ಅಂತರರಾಷ್ಟ್ರೀಯ ಕ್ರಿಕೆಟ್ನ ಬಾಗಿಲು ತೆರೆದಿದ್ದು, ಸಂಭ್ರಮ ಹಂಚಿಕೊಂಡಿದ್ದಾರೆ. ಅವರು ಏನು ಹೇಳಿದ್ದಾರೆ ಕೇಳಿ.
ಆರ್ಸಿಬಿ ಹಂಚಿಕೊಂಡಿರುವ ವಿಡಿಯೋದಲ್ಲಿ ಈ ಬಗ್ಗೆ ಸಂತಸ ಹಂಚಿಕೊಂಡಿರುವ ಕಾರ್ತಿಕ್, “ನಾನು ತುಂಬಾ ಸಂತೋಷವಾಗಿದ್ದೇನೆ. ತುಂಬಾ ತೃಪ್ತಿ ಹೊಂದಿದ್ದೇನೆ. ಇದು ನನ್ನ ಅತ್ಯಂತ ವಿಶೇಷವಾದ ಕಮ್ಬ್ಯಾಕ್ ಆಗಿದೆ. ಏಕೆಂದರೆ ಬಹಳಷ್ಟು ಜನರು ನನ್ನನ್ನು ತ್ಯಜಿಸಿದ್ದಾರೆ. ನಾನು ಸತತವಾಗಿ ಅಭ್ಯಾಸ ನಡೆಸಿದ್ದೆ. ನಾನು ಮಾಡಲು ಬಯಸಿದ ಪಾತ್ರವನ್ನು ನಿರ್ವಹಿಸಲು ಅವರು ನನಗೆ ಮತ್ತೊಂದು ಅವಕಾಶ ನೀಡಿದ್ದಾರೆಂದು ಭಾವಿಸುತ್ತೇನೆ. ಅನೇಕ ವಿಧಗಳಲ್ಲಿ ನಾನು ಆರ್ಸಿಬಿಗೆ ಋಣಿಯಾಗಿದ್ದೇನೆ, ನನ್ನನ್ನು ಆಕ್ಷನ್ನಲ್ಲಿ ಖರೀದಿಸಿ ಮತ್ತು ನನಗೆ ಆ ಪಾತ್ರವನ್ನು ನೀಡಿದೆ. ನನ್ನ ಮೇಲೆ ನಂಬಿಕೆಯಿಟ್ಟ ಕಾರಣ ನಾನು ಇಂದು ಇಲ್ಲಿಗೆ ಬಂದು ನಿಂತಿದ್ದೇನೆ. ಆರ್ಸಿಬಿ ತಂಡಕ್ಕಾಗಿ ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ. ಇದು ತುಂಬಾ ಸಂತೋಷದ ಭಾವನೆಯಾಗಿದೆ,” ಎಂದು ಕಾರ್ತಿಕ್ ಹೇಳಿದ್ದಾರೆ.
GT vs RR: ಕೋಲ್ಕತ್ತಾ ಹವಾಮಾನ ಹೇಗಿದೆ?: ಕ್ವಾಲಿಫೈಯರ್ 1 ಪಂದ್ಯ ಮಳೆಯಿಂದ ರದ್ದಾದರೆ ಏನಾಗಲಿದೆ?
ಇನ್ನು ಬಿಸಿಸಿಐ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ತನ್ನನ್ನು ಆಯ್ಕೆ ಮಾಡುತ್ತಿದ್ದಂತೆ ಟ್ವೀಟ್ ಮಾಡಿದ್ದ ಕಾರ್ತಿಕ್, “ನೀವು ನಿಮ್ಮನ್ನು ನಂಬಿದರೆ, ಎಲ್ಲವೂ ಸರಿಯಾಗಿ ಸಾಗುತ್ತದೆ. ನಿಮ್ಮೆಲ್ಲರ ಬೆಂಬಲ ಮತ್ತು ನಂಬಿಕೆಗೆ ಧನ್ಯವಾದಗಳು… ಕಠಿಣ ಪರಿಶ್ರಮ ಮುಂದುವರಿಯುತ್ತದೆ…,” ಎಂದು ಬರೆದುಕೊಂಡಿದ್ದಾರೆ. ದಿನೇಶ್ ಕಾರ್ತಿಕ್ ಇದ್ದ ತಂಡದಲ್ಲೇ ರಿಷಭ್ ಪಂತ್ ಕೂಡ ಇದ್ದಾರೆ. ಇದರಿಂದ ಕಾರ್ತಿಕ್ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯುತ್ತಾರಾ ಎಂಬ ಅನುಮಾನ ಮೂಡಿದೆ. ಎಲ್ಲದರೂ ಅವಕಾಶ ಸಿಕ್ಕರೆ ಆ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೆಯುವುದು ಖಚಿತ.
ರುತುರಾಜ್ ಗಾಯಕ್ವಾಡ್ ಹಾಗೂ ಇಶಾನ್ ಕಿಶನ್ ಅವರು ಭಾರತ ತಂಡದಲ್ಲಿ ತಮ್ಮ ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ಐಪಿಎಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾದ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಸಹ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಶ್ರೇಯಸ್ ಅಯ್ಯರ್, ದೀಪಕ್ ಹೂಡ ಕೂಡ ಕಮ್ಬ್ಯಾಕ್ ಮಾಡಿದ್ದಾರೆ. ಆವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್ ಆಯ್ಕೆಯಾಗಿದ್ದಾರೆ. ಜೂನ್ 9 ರಿಂದ ಆರಂಭಗೊಳ್ಳುವ ಮೊದಲ ಟಿ20 ಪಂದ್ಯವು ದೆಹಲಿಯಲ್ಲಿ ನಡೆಯಲಿದ್ದು, ಜೂನ್ 12 ಎರಡನೇ ಟಿ20 ಕಟಕ್, ಜೂನ್ 14 ಮೂರನೇ ಟಿ20 ವಿಶಾಖಪಟ್ಟಣಂ, ಜೂನ್ 17 ನಾಲ್ಕನೇ ಟಿ20 ರಾಜ್‌ಕೋಟ್, ಜೂನ್ 19 ಐದನೇ ಟಿ20 ಬೆಂಗಳೂರಿನಲ್ಲಿ ನಡೆಯಲಿದೆ.
ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾ:
ಕೆಎಲ್ ರಾಹುಲ್ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಉಪ ನಾಯಕ) (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜುವೇಂದ್ರ ಚಾಹಲ್, ಕುಲ್‌ದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್ , ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆವೇಶ್ ಖಾನ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.