GT vs RR: ಐಪಿಎಲ್ನಲ್ಲಿಂದು ಗುಜರಾತ್-ರಾಜಸ್ಥಾನ್ ನಡುವೆ ಮೊದಲ ಕ್ವಾಲಿಫೈಯರ್: ಗೆದ್ದ ತಂಡ ಫೈನಲ್ಗೆ ಲಗ್ಗೆ
IPL 2022, Qualifier 1: ಇಂದು ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ಮತ್ತು ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡ ಮುಖಾಮುಖಿ ಆಗಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಈ ಕದನವನ್ನು ಏರ್ಪಡಿಸಲಾಗಿದ್ದು ಹೈವೋಲ್ಟೇಜ್ ಪಂದ್ಯ ಆಗುವುದು ಖಚಿತ.
ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿ ಮಹತ್ವದ ಘಟ್ಟದತ್ತ ಬಂದುನಿಂತಿದೆ. ಈ ಬಾರಿ 10 ತಂಡಗಳೊಂದಿಗೆ ಶುರುವಾದ ಐಪಿಎಲ್ 2022 ರಲ್ಲಿ ಇದೀಗ ನಾಲ್ಕು ತಂಡಗಳ ಕ್ವಾಲಿಫೈ ಆಗಿ ಪ್ಲೇ ಆಫ್ ಪಂದ್ಯಕ್ಕೆ ಸಜ್ಜಾಗಿ ನಿಂತಿದೆ. ಈ ಪೈಕಿ ಇಂದು ನಡೆಯಲಿರುವ ಮೊದಲ ಕ್ವಾಲಿಫೈಯರ್ (Qualifier 1) ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ಮತ್ತು ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ (GT vs RR) ತಂಡ ಮುಖಾಮುಖಿ ಆಗಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಈ ಕದನವನ್ನು ಏರ್ಪಡಿಸಲಾಗಿದ್ದು ಹೈವೋಲ್ಟೇಜ್ ಪಂದ್ಯ ಆಗುವುದು ಖಚಿತ. ಇಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ಗೆ ಪ್ರವೇಶ ಪಡೆಯಲಿದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದ್ದು ಲಖನೌ ಸೂಪರ್ ಜೇಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (LSG vs RCB) ನಡುವಣ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದೊಂದಿಗೆ ಸೆಣೆಸಾಟ ನಡೆಸಲಿದೆ.
ಎರಡೂ ತಂಡಗಳ ಬಲಾಬಲ ಒಂದೇ ರೀತಿಯಾಗಿದ್ದು ಬಲಿಷ್ಠವಾಗಿದೆ. ಆತ್ಮವಿಶ್ವಾಸವೇ ಎರಡೂ ತಂಡದ ದೊಡ್ಡ ಶಕ್ತಿ. ವೇಗದ ಬೌಲಿಂಗ್, ಸ್ಪಿನ್ ಬೌಲಿಂಗ್, ಆಲ್ರೌಂಡರ್ ಗಳು ಮತ್ತು ಸ್ಫೋಟಕ ಬ್ಯಾಟರ್ಗಳು ಎರಡೂ ತಂಡದಲ್ಲಿದ್ದಾರೆ. ಟೂರ್ನಿಯ ಮೊದಲಾರ್ಧದಲ್ಲಿ ರಾಯಲ್ಸ್ ತಂಡದ ಬ್ಯಾಟಿಂಗ್ಗೆ ಜೋಸ್ ಬಟ್ಲರ್ ಆಧಾರವಾಗಿದ್ದರು. ಆದರೆ, ಟೂರ್ನಿಯ ಎರಡನೇ ಅವಧಿಯಲ್ಲಿ ಇವರು ಮಿಂಚಿಲ್ಲ ಅನ್ನುವುದು ಕೊಂಚ ತಲೆನೋವಿಗೆ ಕಾರಣವಾಗಿದೆ. ಯಶಸ್ವಿ ಜೈಸ್ವಾಲ್ ಸಿಕ್ಕ ಅವಕಾಶ ಬಾಚಿಕೊಂಡಿದ್ದಾರೆ. ದೇವದತ್ ಪಡಿಕ್ಕಲ್ ಕೆಲ ಪಂದ್ಯ ಆಡಿದರೆ ಇನ್ನೂ ಕೆಲ ಪಂದ್ಯದಲ್ಲಿ ಕೈಕೊಟ್ಟಿದ್ದಾರೆ.
ಆರ್ ಆರ್ ನಾಯಕ ಸಂಜು ಸ್ಯಾಮ್ಸನ್ ನಾಯಕನ ಆಟ ಆಡಲೇಬೇಕಿದೆ. ಬ್ಯಾಟ್ಸ್ಮನ್ ಆಗಿ ಅಶ್ವಿನ್ ನೀಡುತ್ತಿರುವ ಕೊಡುಗೆ ತಂಡಕ್ಕೆ ಅಮೂಲ್ಯ. ಶಿಮ್ರೊನ್ ಹೆಟ್ಮಯರ್, ರಿಯಾನ್ ಪರಾಗ್ ಫಿನಿಷರ್ಗಳು. ಟ್ರೆಂಟ್ ಬೋಲ್ಟ್ ದುಬಾರಿ ಆದರೂ ತಂಡಕ್ಕೆ ವಿಕೆಟ್ ತಂದುಕೊಡುವ ಸಾಮರ್ಥ್ಯ ಹೊಂದಿದ್ದಾರೆ. ಪ್ರಸಿಧ್ ಕೃಷ್ಣ ಅದ್ಭುತ ಪ್ರದರ್ಶನ ನೀಡಿದ್ದಾರೆ. ಒಬೆಡ್ ಮೆಕಾಯ್ ಮತ್ತು ಕುಲ್ ದೀಪ್ ಸೇನ್ ಉತ್ತಮ ಲಯದಲ್ಲಿದ್ದಾರೆ. ಯುಜ್ವೇಂದ್ರ ಚಹಲ್ ಪರ್ಪಲ್ ಕ್ಯಾಪ್ ತೊಟ್ಟಿದ್ದು ಅಪಾಯಕಾರಿಯಾಗಿದ್ದಾರೆ. ಇವರಿಗೆ ಅಶ್ವಿನ್ ಕೂಡ ಉತ್ತಮ ಸಾಥ್ ನೀಡುತ್ತಿದ್ದಾರೆ.
ಇತ್ತ ನಾಯಕತ್ವದ ಅನುಭವವಿಲ್ಲದ ಹಾರ್ದಿಕ್ ಪಾಂಡ್ಯ ಸಾರಥ್ಯ, ಸ್ಟಾರ್ ಬ್ಯಾಟರ್‌ಗಳಿಲ್ಲದ ತಂಡವಾಗಿದ್ದರೂ ಗುಜರಾತ್ ಟೈಟಾನ್ಸ್ ಲೀಗ್ ಹಂತದಲ್ಲಿ ತೋರಿದ ಬಲಿಷ್ಠ ನಿರ್ವಹಣೆ ಎಲ್ಲರನ್ನೂ ಬೆರಗುಗೊಳಿಸಿದೆ. ಮಾರಕ ಬೌಲಿಂಗ್ ವಿಭಾಗ ಮತ್ತು ಕೊನೇ ಓವರ್‌ನಲ್ಲಿ 20-25 ರನ್ ಬೇಕಿದ್ದರೂ ಕಸಿಯುವ ಫಿನಿಷರ್‌ಗಳ ಬಲವೇ ಗುಜರಾತ್ ಯಶಸ್ಸಿನ ಪ್ರಮುಖ ಗುಟ್ಟಾಗಿದೆ. ಬ್ಯಾಟಿಂಗ್-ಬೌಲಿಂಗ್ ಎರಡಲ್ಲೂ ಮಿಂಚುತ್ತ ಬಂದಿರುವ ನಾಯಕ ಹಾರ್ದಿಕ್ ಪಾಂಡ್ಯ, ರಶೀದ್ ಖಾನ್, ರಾಹುಲ್ ತೆವಾಟಿಯ ಕೂಡ ಟೈಟಾನ್ಸ್ ಯಶಸ್ಸಿನಲ್ಲಿ ಮಿಂಚಿದ್ದಾರೆ. ವೃದ್ಧಿಮಾನ್ ಸಾಹಾ ಉತ್ತಮ ಲಯದಲ್ಲಿದ್ದಾರೆ. ಶುಭ್ಮನ್ ಗಿಲ್ ಕ್ರೀಸ್ನಲ್ಲಿ ನಿಂತ್ರೆ ರನ್ ಗ್ಯಾರೆಂಟಿ. ಡೇವಿಡ್ ಮಿಲ್ಲರ್ ಕೂಡ ಬೌಲರ್ಗಳಿ ಚಳ್ಳೆ ಹಣ್ಣು ತಿನ್ನಿಸಬಹುದು. ಬೌಲಿಂಗ್ನಲ್ಲಿ ರಶೀದ್ ಖಾನ್, ಮೊಹ್ಮದ್ ಶಮಿ, ಲೂಕಿ ಫರ್ಗ್ಯೂಸನ್ ಮತ್ತು ಯಶ್ ದಯಾಳ್ ಬ್ಯಾಟ್ಸ್ಮನ್ಗಳಿಗೆ ಕಡಿವಾಣ ಹಾಕುತ್ತಿದ್ದಾರೆ.
ಮಳೆ ಕಾಟ:
ಪ್ಲೇ ಆಫ್ ಪಂದ್ಯಕ್ಕಾಗಿ ಬಿಸಿಸಿಐ ಸಕಲ ಸಿದ್ದತೆ ಮಾಡಿದೆ. ಆದರೆ, ಪಂದ್ಯಕ್ಕೂ ಮುನ್ನ ಸಂಪೂರ್ಣ ಸಿದ್ಧಗೊಂಡಿದ್ದ ಕ್ರೀಡಾಂಗಣ ಶನಿವಾರ ಭಾರೀ ಬಿರುಗಾಳಿ ಹಾಗೂ ಧಾರಾಕಾರ ಮಳೆಗೆ ಸಿಲುಕಿದ್ದು, ಇಲ್ಲಿನ ವ್ಯವಸ್ಥೆ ಹದಗೆಟ್ಟಿದೆ. ಕೋಲ್ಕತದಲ್ಲಿ ಸದ್ಯ ಭಾರಿ ಮಳೆಯಾಗುತ್ತಿದ್ದು, ಐಪಿಎಲ್ ಪಂದ್ಯಗಳಿಗೂ ಅಡಚಣೆ ತರುವ ಭೀತಿ ಇದೆ. ಪ್ರೇಕ್ಷಕರ ಗ್ಯಾಲರಿಯಲ್ಲಿಯೂ ಮೇಲ್ಚಾವಣಿಗಳು ಕುಸಿದು ಬಿದ್ದಿವೆ. ಗಾಳಿಯ ರಭಸಕ್ಕೆ ಪ್ರೆಸ್ ಬಾಕ್ಸ್‌ನ ಗಾಜಿನ ಕಿಟಕಿಯೂ ಒಡೆದಿದೆ. ಕೋಲ್ಕತ್ತಾದಲ್ಲಿ ಶನಿವಾರ ಸುರಿದ ಧಾರಾಕಾರ ಮಳೆಯ ನಂತರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈಡನ್ ಗಾರ್ಡನ್ಸ್‌ಗೆ ಭೇಟಿ ನೀಡಿದ್ದರು. ಮಳೆ ನಿಂತ ಕೂಡಲೇ ಕವರ್ ಅಳವಡಿಸಲಾಯಿತು.
ಸಂಭಾವ್ಯ ಪ್ಲೇಯಿಂಗ್ XI
ಗುಜರಾತ್: ಹಾರ್ದಿಕ್ ಪಾಂಡ್ಯ (ನಾಯಕ), ಶುಭ್ಮನ್ ಗಿಲ್, ವೃದ್ಧಿಮಾನ್ ಸಾಹ, ಮ್ಯಾಥ್ಯೂ ವೇಡ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಆರ್ ಸಾಯಿ ಕಿಶೋರ್, ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ, ಯಶ್ ದಯಾಲ್.
ರಾಜಸ್ಥಾನ್: ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಶಿಮ್ರೋನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಾಹಲ್, ಪ್ರಸಿದ್ದ್ ಕೃಷ್ಣ, ಒಬೆಡ್ ಮೆಕಾಯ್.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:56 am, Tue, 24 May 22