GT vs RR: ಗೆದ್ದರೆ ಫೈನಲ್ಗೆ, ಸೋತರೆ ನೋ ಟೆನ್ಶನ್..!
IPL 2022 GT vs RR head to head record: ಮೊದಲ ಕ್ವಾಲಿಫೈಯರ್ ಪಂದ್ಯವಾಡುವ ತಂಡಗಳಿಗೆ ಫೈನಲ್ ಪ್ರವೇಶಿಸಲು ಎರಡು ಅವಕಾಶ ಇರುವುದರಿಂದ ಯಾವುದೇ ಒತ್ತಡವಿಲ್ಲದೆ ಆಡಬಹುದು.
IPL 2022: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಪ್ಲೇಆಫ್ ಪಂದ್ಯಗಳು ಇಂದಿನಿಂದ ಶುರುವಾಗಲಿದೆ. ಲೀಗ್ ಹಂತದಲ್ಲಿ ಆಡಿದ 10 ತಂಡಗಳಲ್ಲಿ ನಾಲ್ಕು ತಂಡಗಳು ಪ್ಲೇಆಫ್ಗೆ ಕಾಲಿಫೈ ಆಗಿದ್ದು, ಅದರಂತೆ ಗುಜರಾತ್ ಟೈಟಾನ್ಸ್, ರಾಜಸ್ಥಾನ್ ರಾಯಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ಪಂದ್ಯಗಳನ್ನು ಆಡಲಿದೆ. ಈ ಪೈಕಿ ಇಂದು ನಡೆಯಲಿರುವ ಮೊದಲ ಕ್ವಾಲಿಫೈಯರ್ (Qualifier 1) ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ (GT vs RR) ತಂಡ ಮುಖಾಮುಖಿಯಾಗಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ಗೆ ಎಂಟ್ರಿ ಕೊಡಲಿದೆ. ಇನ್ನು ಸೋತರೂ 2ನೇ ಕ್ವಾಲಿಫೈಯರ್ ಆಡುವ ಮತ್ತೊಂದು ಅವಕಾಶ ಕೂಡ ದೊರೆಲಿಯಲಿದೆ. ಹೀಗಾಗಿ ನೇರವಾಗಿ ಫೈನಲ್ಗೆ ಎಂಟ್ರಿ ಕೊಡಲು ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ಕಂಡು ಬರಲಿದೆ.
ಇಲ್ಲಿ ಮೇಲ್ನೋಟಕ್ಕೆ ಉಭಯ ತಂಡಗಳೂ ಬಲಿಷ್ಠವಾಗಿದ್ದರೂ, ಗುಜರಾತ್ ಟೈಟಾನ್ಸ್ ತಂಡವು ಮೇಲುಗೈ ಹೊಂದಿದೆ. ಏಕೆಂದರೆ ರಾಜಸ್ಥಾನ್ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ಲೀಗ್ ಹಂತದಲ್ಲಿ ಒಂದು ಬಾರಿ ಮುಖಾಮುಖಿಯಾಗಿದೆ. ಈ ವೇಳೆ ರಾಜಸ್ಥಾನ್ ರಾಯಲ್ಸ್ ವಿರುದ್ದ ಹಾರ್ದಿಕ್ ಪಾಂಡ್ಯ ಪಡೆ ಭರ್ಜರಿ ಜಯ ಸಾಧಿಸಿತ್ತು ಎಂಬುದು ವಿಶೇಷ.
ಏಪ್ರಿಲ್ 14 ರಂದು ನಡೆದಿದ್ದ ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ ಟೈಟಾನ್ಸ್ 4 ವಿಕೆಟ್ ಕಳೆದುಕೊಂಡು 192 ರನ್ ಕಲೆಹಾಕಿತ್ತು. ಈ ಬೃಹತ್ ಟಾರ್ಗೆಟ್ ಅನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ 9 ವಿಕೆಟ್ ಕಳೆದುಕೊಂಡು 155 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ಗುಜರಾತ್ ಟೈಟಾನ್ಸ್ ತಂಡವು 37 ರನ್ಗಳಿಂದ ಜಯ ಸಾಧಿಸಿತ್ತು. ಇಲ್ಲಿ ವಿಶೇಷ ಎಂದರೆ ಗುಜರಾತ್ ಟೈಟಾನ್ಸ್ಗಿಂತ ರಾಜಸ್ಥಾನ್ ರಾಯಲ್ಸ್ ಉತ್ತಮ ಬ್ಯಾಟಿಂಗ್ ಪಡೆಗಳನ್ನು ಹೊಂದಿದೆ. ಇದಾಗ್ಯೂ ಗುಜರಾತ್ ಟೈಟಾನ್ಸ್ ಬೌಲರ್ಗಳ ಮುಂದೆ ಪರಾಕ್ರಮ ಮೆರೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಪಂದ್ಯದಲ್ಲೂ ಗುಜರಾತ್ ಟೈಟಾನ್ಸ್ ತಂಡವೇ ಮೇಲುಗೈ ಹೊಂದಿದೆ ಎನ್ನಬಹುದು.
ಇನ್ನು ಮೊದಲ ಕ್ವಾಲಿಫೈಯರ್ ಪಂದ್ಯವಾಡುವ ತಂಡಗಳಿಗೆ ಫೈನಲ್ ಪ್ರವೇಶಿಸಲು ಎರಡು ಅವಕಾಶ ಇರುವುದರಿಂದ ಯಾವುದೇ ಒತ್ತಡವಿಲ್ಲದೆ ಆಡಬಹುದು. ಹೀಗಾಗಿ ರಾಜಸ್ಥಾನ್ ರಾಯಲ್ಸ್ ತಂಡವು ಲೀಗ್ ಹಂತದ ಸೋಲಿನ ಸೇಡನ್ನು ಗುಜರಾತ್ ಟೈಟಾನ್ಸ್ ವಿರುದ್ದ ತೀರಿಸಿ ಫೈನಲ್ಗೇರುವ ತವಕದಲ್ಲಿದೆ.
ಕ್ವಾಲಿಫೈಯರ್ 1 ಪಂದ್ಯವಾಡುವ ತಂಡಕ್ಕೆ ಎರಡು ಅವಕಾಶ: ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲೆರಡು ಸ್ಥಾನದಲ್ಲಿರುವ ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯವಾಡಲಿದೆ. ಈ ಪಂದ್ಯವಾಡುವ ಮುಖ್ಯ ಲಾಭವೆಂದರೆ ಗೆದ್ದರೆ ನೇರವಾಗಿ ಫೈನಲ್ಗೆ ಪ್ರವೇಶಿಸಬಹುದು. ಈ ಬಾರಿ ಗುಜರಾತ್ ಟೈಟಾನ್ಸ್ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿದ್ದರೆ, ರಾಜಸ್ಥಾನ್ ರಾಯಲ್ಸ್ 2ನೇ ಸ್ಥಾನದಲ್ಲಿದೆ. ಹೀಗಾಗಿ ಈ ಎರಡು ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯವಾಡಲಿದೆ. ಇಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ತಂಡ ಐಪಿಎಲ್ನಿಂದ ಹೊರಬೀಳುವುದಿಲ್ಲ. ಬದಲಾಗಿ ಮತ್ತೊಂದು ಚಾನ್ಸ್ ಸಿಗಲಿದೆ.
ಅದರಂತೆ ಮೊದಲ ಕ್ವಾಲಿಫೈಯರ್ನಲ್ಲಿ ಸೋತ ತಂಡಕ್ಕೆ 2ನೇ ಕ್ವಾಲಿಫೈಯರ್ ಪಂದ್ಯವಾಡುವ ಅವಕಾಶ ದೊರೆಯಲಿದೆ. ಅಂದರೆ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡವು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ತಂಡದೊಡನೆ 2ನೇ ಕ್ವಾಲಿಫೈಯರ್ ಪಂದ್ಯವಾಡಬೇಕಾಗುತ್ತದೆ.
ಇಲ್ಲಿ ಮೊದಲ ಅವಕಾಶದಲ್ಲಿ ಸೋತರೂ, 2ನೇ ಕ್ವಾಲಿಫೈಯರ್ ಪಂದ್ಯದ ಮೂಲಕ ಫೈನಲ್ಗೆ ಎಂಟ್ರಿ ಕೊಡುವ ಚಾನ್ಸ್ ಮೊದಲ ಕ್ವಾಲಿಫೈಯರ್ ಪಂದ್ಯವಾಡುವ ತಂಡಗಳಿಗೆ ಇರಲಿದೆ. ಅಂದರೆ ಗುಜರಾತ್ ಟೈಟನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳಿಗೆ ಫೈನಲ್ ಪ್ರವೇಶಿಸಲು ಎರಡು ಅವಕಾಶ ಸಿಗಲಿದೆ. ಮತ್ತೊಂದೆಡೆ ಎಲಿಮಿನೇಟರ್ ಪಂದ್ಯವಾಡುವ ಆರ್ಸಿಬಿ-ಲಕ್ನೋ ತಂಡಗಳಲ್ಲಿ ಸೋತ ತಂಡ ನೇರವಾಗಿ ಐಪಿಎಲ್ನಿಂದ ಹೊರಬೀಳಲಿದೆ.
ಹಾಗಾಗಿ ಇಂದು ನಡೆಯುವ ಮೊದಲ ಕ್ವಾಲಿಫೈಯರ್ ಫಲಿತಾಂಶದ ಬೆನ್ನಲ್ಲೇ ಈ ಸಲ ಫೈನಲ್ ಆಡುವ ಒಂದು ತಂಡ ನಿರ್ಧಾರವಾಗಲಿದೆ. ಆದರೆ ಮತ್ತೊಂದು ತಂಡ ಯಾವುದೆಂದು ತಿಳಿಯಲು ಎಲಿಮಿನೇಟರ್ ಹಾಗೂ 2ನೇ ಕ್ವಾಲಿಫೈಯರ್ ಪಂದ್ಯಗಳು ಮುಗಿಯಬೇಕು.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.