ಐಪಿಎಲ್ (IPL) ಪ್ರಸಾರ ಹಕ್ಕುಗಳ ಮೆಗಾ ಬಿಡ್ ನಂತರ, ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ( International Cricket Council) ಮಾಧ್ಯಮ ಹಕ್ಕುಗಳಿಗಾಗಿ ಪ್ರಬಲ ಬಿಡ್ ಕೂಡ ನಡೆದಿದೆ. ICC ಟೂರ್ನಮೆಂಟ್‌ಗಳ ಪ್ರಸ್ತುತ ಪ್ರಸಾರಕರಾದ ಡಿಸ್ನಿ ಸ್ಟಾರ್ (Disney Star) ಮತ್ತೊಮ್ಮೆ ಈ ಹಕ್ಕುಗಳನ್ನು ಅತ್ಯಧಿಕ ಬಿಡ್‌ನೊಂದಿಗೆ ಖರೀದಿಸಿದೆ. ಮಾಹಿತಿ ಪ್ರಕಾರ ನಾಲ್ಕು ವರ್ಷಗಳ ಅವಧಿಗಾಗಿ ಸುಮಾರು 24 ಸಾವಿರ ಕೋಟಿಗೆ ಡಿಸ್ನಿ ಸ್ಟಾರ್ ಈ ಹಕ್ಕುಗಳನ್ನು ಖರೀದಿಸಿದ್ದು, ಈ ಮಾಧ್ಯಮ ಹಕ್ಕುಗಳು 2024 ರಿಂದ 2027 ರವರೆಗೆ ಮುಂದುವರಿಯುತ್ತದೆ. ಜೊತೆಗೆ ಈ ನಾಲ್ಕು ವರ್ಷಗಳಲ್ಲಿ ಭಾರತದಲ್ಲಿ ನಡೆಯುವ ಎಲ್ಲಾ ಪಂದ್ಯಾವಳಿಗಳನ್ನು ಡಿಸ್ನಿ ಸ್ಟಾರ್ ಪ್ರಸಾರ ಮಾಡಲಿದೆ.
ಮಹಿಳಾ ಮತ್ತು ಪುರುಷರ ಪಂದ್ಯಾವಳಿಗಳ ಪ್ರಸಾರ
ಈ ಹಿಂದೆ ಹರಾಜು ಪ್ರಕ್ರಿಯೆ ನಡೆದಿದ್ದು, ಪ್ರಸಾರ ಹಕ್ಕು ವಿಜೇತರ ಬಗ್ಗೆ ಶನಿವಾರ ಐಸಿಸಿ ಮಾಹಿತಿ ನೀಡಿದೆ. ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, ಡಿಸ್ನಿ ಸ್ಟಾರ್ ಮುಂದಿನ ನಾಲ್ಕು ವರ್ಷಗಳವರೆಗೆ ಭಾರತದಲ್ಲಿ ಎಲ್ಲಾ ಐಸಿಸಿ ಪಂದ್ಯಗಳನ್ನು ಪ್ರಸಾರ ಮಾಡುತ್ತದೆ. ಇದು ಪುರುಷರ ಮತ್ತು ಮಹಿಳೆಯರ ಐಸಿಸಿ ಪಂದ್ಯಾವಳಿಗಳ ಹಕ್ಕುಗಳನ್ನು ಒಳಗೊಂಡಿದೆ. ಅಲ್ಲದೆ, ಟಿವಿಯ ಹೊರತಾಗಿ ಡಿಜಿಟಲ್ ಹಕ್ಕುಗಳನ್ನು ಡಿಸ್ನಿ ಸ್ಟಾರ್ ಈ ಬಿಡ್ ಅಡಿಯಲ್ಲಿ ಖರೀದಿಸಿದೆ. ಅಂದರೆ, ಈಗ ಕಂಪನಿಯು 2027 ರ ಅಂತ್ಯದವರೆಗೆ ಪುರುಷರು ಮತ್ತು ಮಹಿಳೆಯರ ಎಲ್ಲಾ ICC ಪಂದ್ಯಾವಳಿಗಳನ್ನು ಪ್ರಸಾರ ಮಾಡುತ್ತದೆ.
ಸುಮಾರು 24 ಸಾವಿರ ಕೋಟಿ ಬಿಡ್
ಒಂದು ಸುತ್ತಿನ ಮೊಹರು ಮಾಡಿದ ಬಿಡ್ಡಿಂಗ್ ಪ್ರಕ್ರಿಯೆಯ ನಂತರ ಡಿಸ್ನಿ ಸ್ಟಾರ್ ಗೆದ್ದಿದೆ ಎಂದು ICC ಹೇಳಿದೆ. ಹಿಂದಿನ ವಿಲ್ನಲ್ಲಿ ಮಾಧ್ಯಮ ಹಕ್ಕುಗಳಿಗಾಗಿ ಖರ್ಚು ಮಾಡಿದ ಮೊತ್ತಕ್ಕಿಂತ ಇದು ಗಣನೀಯ ಹೆಚ್ಚಳವಾಗಿದೆ. ಇದು ಕ್ರಿಕೆಟ್‌ನ ಜನಪ್ರಿಯತೆ ಮತ್ತು ವ್ಯಾಪ್ತಿಯ ಹೆಚ್ಚಳವನ್ನು ತೋರಿಸುತ್ತದೆ. ಐಸಿಸಿಯ ಹಿರಿಯ ಮಂಡಳಿಯ ಸದಸ್ಯರೊಬ್ಬರ ಹೇಳಿಕೆಯನ್ನು ಪಿಟಿಐ ವರದಿಯಲ್ಲಿ ಉಲ್ಲೇಖಿಸಿದ್ದು, ಅದರಲ್ಲಿ ಅವರು, ಮಾಹಿತಿ ಪ್ರಕಾರ ಡಿಸ್ನಿ ಸ್ಟಾರ್ ಈ ಹಕ್ಕುಗಳಿಗಾಗಿ ಸುಮಾರು ಮೂರು ಬಿಲಿಯನ್ ಡಾಲರ್ (ರೂ. 23,991 ಕೋಟಿ) ಪಾವತಿಸುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲಿ ಮಾತನಾಡಿ, “ಮುಂದಿನ ನಾಲ್ಕು ವರ್ಷಗಳ ಕಾಲ ಐಸಿಸಿ ಕ್ರಿಕೆಟ್ ಪಂದ್ಯಗಳನ್ನು ಪ್ರಸಾರ ಮಾಡಲು ಡಿಸ್ನಿ ಸ್ಟಾರ್‌ನೊಂದಿಗೆ ನಮ್ಮ ಪಾಲುದಾರಿಕೆಯನ್ನು ಮುಂದುವರಿಸಲು ನಾವು ಸಂತೋಷಪಡುತ್ತೇವೆ. ಇದು ಹಿಂದೆ ನಮ್ಮ ಸದಸ್ಯರಿಗೆ ಅತ್ಯುತ್ತಮ ಫಲಿತಾಂಶವನ್ನು ನೀಡಿದೆ ಮತ್ತು ನಮ್ಮ ಮಹತ್ವಾಕಾಂಕ್ಷೆಯ ಬೆಳವಣಿಗೆಯ ಯೋಜನೆಗಳನ್ನು ಬೆಂಬಲಿಸುತ್ತಿದೆ ಎಂದಿದ್ದಾರೆ.
ಐಪಿಎಲ್ ನಂತರ ಮತ್ತೊಂದು ಯಶಸ್ಸು
ಇದರೊಂದಿಗೆ, ಡಿಸ್ನಿ ಸ್ಟಾರ್ ಎರಡೂವರೆ ತಿಂಗಳೊಳಗೆ ಎರಡು ಪ್ರಮುಖ ಮಾಧ್ಯಮ ಹಕ್ಕುಗಳನ್ನು ಗೆದ್ದಿದ್ದಾರೆ. ಹಿಂದಿನ ಜೂನ್‌ನಲ್ಲಿಯೂ ಕಂಪನಿಯು ಮುಂದಿನ ಐದು ವರ್ಷಗಳವರೆಗೆ ಐಪಿಎಲ್‌ನ ಟಿವಿ ಪ್ರಸಾರ ಹಕ್ಕುಗಳನ್ನು ಪಡೆದುಕೊಂಡಿತ್ತು. ಇದಕ್ಕಾಗಿ ಕಂಪನಿ 23 ಸಾವಿರ ಕೋಟಿಗೂ ಹೆಚ್ಚು ಖರ್ಚು ಮಾಡಿದೆ.
Published On - 9:11 pm, Sat, 27 August 22