IPL 2023: ಐಪಿಎಲ್ ಪ್ರಭಾವ; ಕರ್ನಾಟಕ ಸೇರಿ ದಕ್ಷಿಣದ ಮಾರುಕಟ್ಟೆಗಳಲ್ಲಿ ಡಿಸ್ನಿ ಸ್ಟಾರ್ ವೀಕ್ಷಕರ ಸಂಖ್ಯೆ ಭಾರೀ ಹೆಚ್ಚಳ

|

Updated on: Apr 14, 2023 | 9:46 PM

ಟಾಟಾ ಐಪಿಎಲ್​​ನ ಅಧಿಕೃತ ಪ್ರಸಾರದ ಹಕ್ಕು ಹೊಂದಿರುವ ‘ಡಿಸ್ನಿ ಸ್ಟಾರ್’ನ ಪ್ರಾದೇಶಿಕ ವೀಕ್ಷಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ ಎಂದು ಕಂಪನಿಯ ಪ್ರಕಟಣೆ ಶುಕ್ರವಾರ ತಿಳಿಸಿದೆ.

IPL 2023: ಐಪಿಎಲ್ ಪ್ರಭಾವ; ಕರ್ನಾಟಕ ಸೇರಿ ದಕ್ಷಿಣದ ಮಾರುಕಟ್ಟೆಗಳಲ್ಲಿ ಡಿಸ್ನಿ ಸ್ಟಾರ್ ವೀಕ್ಷಕರ ಸಂಖ್ಯೆ ಭಾರೀ ಹೆಚ್ಚಳ
ಸಾಂದರ್ಭಿಕ ಚಿತ್ರ
Follow us on

ಮುಂಬೈ: ಟಾಟಾ ಐಪಿಎಲ್​​ನ (Tata IPL) ಅಧಿಕೃತ ಪ್ರಸಾರದ ಹಕ್ಕು ಹೊಂದಿರುವ ‘ಡಿಸ್ನಿ ಸ್ಟಾರ್’ನ (Disney Star) ಪ್ರಾದೇಶಿಕ ವೀಕ್ಷಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ ಎಂದು ಕಂಪನಿಯ ಪ್ರಕಟಣೆ ಶುಕ್ರವಾರ ತಿಳಿಸಿದೆ. ಕಳೆದ ಬಾರಿಯ ಐಪಿಎಲ್​ ಸೀಸನ್​​ ಸಂದರ್ಭದ ವೀಕ್ಷಕರ ಸಂಖ್ಯೆಗೆ ಹೋಲಿಸಿದರೆ ಈ ಬಾರಿ ದಕ್ಷಿಣ ಭಾರತದಲ್ಲಿ ಶೇ 21ರ ಬೆಳವಣಿಗೆ ಸಾಧಿಸಲಾಗಿದೆ. ಈ ಪೈಕಿ ಕರ್ನಾಟಕದಲ್ಲಿ ಶೇ 30, ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಶೇ 33ರಷ್ಟು ಬೆಳವಣಿಗೆ ಕಂಡುಬಂದಿದೆ. ಮೊದಲ 10 ಪಂದ್ಯಗಳು 680 ಕೋಟಿ ನಿಮಿಷಗಳಷ್ಟು ವೀಕ್ಷಣೆಯಾಗಿವೆ. ಇದು ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ವೀಕ್ಷಣೆ ಎನಿಸಿದೆ ಎಂದು ಕಂಪನಿ ಹೇಳಿಕೊಂಡಿದೆ.

ಇದಲ್ಲದೆ, ಹಿಂದಿ ಭಾಷಿಕ ಮಾರುಕಟ್ಟೆಗಳು ಇತಿಹಾಸದಲ್ಲೇ ಅತಿ ಹೆಚ್ಚು ವೀಕ್ಷಣೆ ದಾಖಲಿಸಿದ್ದು, ಮೊದಲ 10 ಪಂದ್ಯಗಳನ್ನು 20.4 ಕೋಟಿ ಮಂದಿ ವೀಕ್ಷಿಸಿದ್ದಾರೆ. ಇದು ಕಳೆದ ಆವೃತ್ತಿಗೆ ಹೋಲಿಸಿದರೆ ಶೇ 29.5ರಷ್ಟು ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 438 ಕೋಟಿ ನಿಮಿಷಗಳ ವೀಕ್ಷಣೆ ದಾಖಲಿಸಿದ್ದು, ಈ ಪ್ರಮಾಣವೂ ಶೇ 25ರಷ್ಟು ಹೆಚ್ಚಾಗಿದೆ.

ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ದೆಹಲಿ, ರಾಜಸ್ಥಾನ, ಮಹಾರಾಷ್ಟ್ರ, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳು ಹಿಂದಿ ಭಾಷಿಕ ಮಾರುಕಟ್ಟೆಗಳಲ್ಲಿ ಬೆಳವಣಿಗೆಯ ಪ್ರಮುಖ ಕೇಂದ್ರಗಳಾಗಿ ಹೊರಹೊಮ್ಮಿವೆ ಎಂದು ‘ಡಿಸ್ನಿ ಸ್ಟಾರ್’ ಹೇಳಿದೆ.

ಇದನ್ನೂ ಓದಿ: IPL 2023: ಬೆಂಗಳೂರಿನಲ್ಲೇ ಆರ್​ಸಿಬಿ ಸೋಲಿಸಲು ಪಣತೊಟ್ಟ ಪಂತ್..!

ಪ್ರಾದೇಶಿಕ ಪ್ರಸಾರಕ್ಕೆ ಪಡೆದ ಪ್ರತಿಕ್ರಿಯೆಯಿಂದ ನಾವು ರೋಮಾಂಚನಗೊಂಡಿದ್ದೇವೆ. ಅಭಿಮಾನಿಗಳನ್ನು ಕ್ರೀಡೆಯ ಬಳಿ ತರಲು ಮತ್ತು ಅವರಿಗೆ ಉತ್ತಮ ಅನುಭವವನ್ನು ಒದಗಿಸುವ ರೀತಿಯಲ್ಲಿ ನಮ್ಮ ಪ್ರಸಾರ ಕಾರ್ಯಕ್ರಮನ್ನು ಆಯೋಜಿಸಲಾಗುತ್ತಿದೆ. ಆಯಾಭಾಷೆಗಳ ವಿಶಿಷ್ಟ ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡು ನಾವು ಪ್ರತಿ ಭಾಷೆಗೆ ಸರೌಂಡ್ ಪ್ರೋಗ್ರಾಮಿಂಗ್ ಅನ್ನು ರಚಿಸಿದ್ದೇವೆ. ಇದು ದೇಶದ ವಿವಿಧ ಭಾಗಗಳಲ್ಲಿನ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅವರ ಅಗತ್ಯಗಳಿಗೆ ಅನುಗುಣವಾಗಿ ಸೇವೆಯನ್ನು ಒದಗಿಸಲು ನಮಗೆ ಸಹಾಯ ಮಾಡಿದೆ ಎಂದು ಸ್ಟಾರ್ ಸ್ಪೋರ್ಟ್ಸ್ ವಕ್ತಾರರು ತಿಳಿಸಿದ್ದಾರೆ.

ಗುಂಡಪ್ಪ ವಿಶ್ವನಾಥ್, ಎಂಎಸ್​​ಕೆ ಪ್ರಸಾದ್, ಕೆ ಶ್ರೀಕಾಂತ್, ಎಲ್ ಬಾಲಾಜಿ, ಎಸ್ ಬದ್ರಿನಾಥ್, ಮುರಳಿ ವಿಜಯ್ ಮತ್ತು ಎಸ್ ಶ್ರೀಶಾಂತ್ ಅವರಂತಹ ಉನ್ನತ ಶ್ರೇಣಿಯ ಆಂತರಿಕ ತಜ್ಞರು ದಕ್ಷಿಣ ಮಾರುಕಟ್ಟೆಗಳ ಬಳಕೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದ್ದಾರೆ ಎಂದು ಕಂಪನಿ ಹೇಳಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:45 pm, Fri, 14 April 23