ಡೋಮ್ ಸಿಬ್ಲಿ ತ್ರಿಶತಕ… 126 ವರ್ಷಗಳ ಬಳಿಕ ದಾಖಲೆ ಮೊತ್ತ ಪೇರಿಸಿದ ಸರ್ರೆ

Surrey vs Durham: ಡರ್ಹಾಮ್​ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸರ್ರೆ ಪರ ಆರಂಭಿಕ ದಾಂಡಿಗ ಡೋಮ್ ಸಿಬ್ಲಿ ಭರ್ಜರಿ ತ್ರಿಶತಕ ಸಿಡಿಸಿ ಮಿಂಚಿದ್ದಾರೆ. ಈ ಟ್ರಿಪಲ್ ಸೆಂಚುರಿ ನೆರವಿನೊಂದಿಗೆ ಸರ್ರೆ ತಂಡವು ಮೊದಲ ಇನಿಂಗ್ಸ್​ನಲ್ಲಿ 820 ರನ್ ಕಲೆಹಾಕಿದೆ. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿರುವ ಡರ್ಹಾಮ್ 1 ವಿಕೆಟ್ ಕಳೆದುಕೊಂಡು 59 ರನ್ ಕಲೆಹಾಕಿದೆ.

ಡೋಮ್ ಸಿಬ್ಲಿ ತ್ರಿಶತಕ... 126 ವರ್ಷಗಳ ಬಳಿಕ ದಾಖಲೆ ಮೊತ್ತ ಪೇರಿಸಿದ ಸರ್ರೆ
Dom Sibley

Updated on: Jul 01, 2025 | 9:43 AM

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್​ಶಿಪ್ ಟೆಸ್ಟ್ ಟೂರ್ನಿಯ 42ನೇ ಪಂದ್ಯದಲ್ಲಿ ಡೋನ್ ಸಿಬ್ಲಿ ತ್ರಿಶತಕ ಸಿಡಿಸಿ ಮಿಂಚಿದ್ದಾರೆ. ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಡರ್ಹಾಮ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸರ್ರೆ ತಂಡಕ್ಕೆ ರೋರಿ ಬರ್ನ್ಸ್​ ಹಾಗೂ ಡೋಮ್ ಸಿಬ್ಲಿ ಉತ್ತಮ ಆರಂಭ ಒದಗಿಸಿದ್ದರು.

ಮೊದಲ ವಿಕೆಟ್​​ಗೆ 95 ರನ್ ಪೇರಿಸಿದ ಬಳಿಕ ರೋರಿ ಬರ್ನ್ಸ್​ (54) ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ರಿಯಾನ್ ಪಟೇಲ್ (10) ಕೂಡ ಬೇಗನೆ ಔಟಾದರು. ಈ ಹಂತದಲ್ಲಿ ಜೊತೆಗೂಡಿದ ಡೋಮ್ ಸಿಬ್ಲಿ ಹಾಗೂ ಸ್ಯಾಮ್ ಕರನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ ಮೂರನೇ ವಿಕೆಟ್​ಗೆ 178 ರನ್​ಗಳ  ಜೊತೆಯಾಟವಾಡಿದರು.

ಈ ಹಂತದಲ್ಲಿ 124 ಎಸೆತಗಳಲ್ಲಿ 108 ರನ್ ಬಾರಿಸಿದ್ದ ಸ್ಯಾಮ್ ಕರನ್ ಔಟಾದರು. ಇದಾಗ್ಯೂ ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತಿದ್ದ ಡೋಮ್ ಸಿಬ್ಲಿ ತ್ರಿಶತಕ ಸಿಡಿಸುವ ಮೂಲಕ ತಂಡದ ಸ್ಕೋರ್​ ಅನ್ನು 700 ರ ಗಡಿದಾಟಿಸಿದರು. ಅಂತಿಮವಾಗಿ 475 ಎಸೆತಗಳನ್ನು ಎದುರಿಸಿದ ಸಿಬ್ಲಿ 29 ಫೋರ್ ಹಾಗೂ 2 ಸಿಕ್ಸ್​ನೊಂದಿಗೆ 305 ರನ್​ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದರು.

ಇದಾದ ಬಳಿಕ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ವಿಲ್ ಜಾಕ್ಸ್​ ಕೇವಲ 94 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ 119 ರನ್ ಬಾರಿಸಿದರು. ಈ ಮೂಲಕ ಸರ್ರೆ ತಂಡವು ಮೊದಲ ಇನಿಂಗ್ಸ್​ನಲ್ಲಿ 9 ವಿಕೆಟ್ ಕಳೆದುಕೊಂಡು 820 ರನ್​ಗಳಿಸಿ ಡಿಕ್ಲೇರ್ ಘೋಷಿಸಿತು.

ದಾಖಲೆಯ ಮೊತ್ತ:

820 ರನ್​ಗಳು ಕೌಂಟಿ ಚಾಂಪಿಯನ್​ಶಿಪ್ ಇತಿಹಾಸದಲ್ಲಿ ಸರ್ರೆ ತಂಡ ಕಲೆಹಾಕಿದ ದಾಖಲೆಯ ಮೊತ್ತ ಎಂಬುದು ವಿಶೇಷ. ಇದಕ್ಕೂ ಮುನ್ನ 1899 ರಲ್ಲಿ ಸೋಮರ್​ಸೆಟ್ ತಂಡದ ವಿರುದ್ಧ 811 ರನ್ ಕಲೆಹಾಕಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ 820 ರನ್​ಗಳಿಸುವ ಮೂಲಕ ಸರ್ರೆ ತಂಡವು 126 ವರ್ಷಗಳ ಬಳಿಕ ಮತ್ತೊಮ್ಮೆ ಗರಿಷ್ಠ ಸ್ಕೋರ್​ಗಳಿಸುವಲ್ಲಿ ಯಶಸ್ವಿಯಾಗಿದೆ.

ಇದಾಗ್ಯೂ ಇದು ಕೌಂಟಿ ಚಾಂಪಿಯನ್​ಶಿಪ್​ ಇತಿಹಾಸದ ಗರಿಷ್ಠ ಮೊತ್ತವಲ್ಲ. ಈ ದಾಖಲೆ ಯಾರ್ಕ್​ಷೈರ್ ತಂಡದ ಹೆಸರಿನಲ್ಲಿದೆ. 1896 ರಲ್ಲಿ ವಾರ್ವಿಕ್​ಷೈರ್ ತಂಡದ ವಿರುದ್ಧ 887 ರನ್​​ ಕಲೆಹಾಕುವ ಮೂಲಕ ಯಾರ್ಕ್​ಷೈರ್ ದಾಖಲೆ ನಿರ್ಮಿಸಿದೆ. 129 ವರ್ಷಗಳ ಹಿಂದೆ ಬರೆದ ಈ ದಾಖಲೆಯನ್ನು ಮುರಿಯಲು ಈವರೆಗೆ ಯಾವುದೇ ತಂಡಕ್ಕೆ ಸಾಧ್ಯವಾಗಿಲ್ಲ ಎಂಬುದು ವಿಶೇಷ.

ಇದನ್ನೂ ಓದಿ: IPL 2026: ಐಪಿಎಲ್ ಟ್ರೇಡ್ ವಿಂಡೋ ಓಪನ್: ಯಾವ ತಂಡಕ್ಕೆ ಯಾರು?

ಕೌಂಟಿ ಚಾಂಪಿಯನ್​ಶಿಪ್​ ಇತಿಹಾಸದ ಗರಿಷ್ಠ ಸ್ಕೋರ್​​:

  • 887 – ಯಾರ್ಕ್‌ಷೈರ್ vs ವಾರ್ವಿಕ್‌ಷೈರ್, ಎಡ್ಜ್‌ಬಾಸ್ಟನ್ (1896)
  • 863 – ಲಂಕಾಷೈರ್ vs ಸರ್ರೆ, ದಿ ಓವಲ್ (1990)
  • 850-7 ಡಿಕ್ಲೇರ್ಡ್ – ಸೋಮರ್‌ಸೆಟ್ vs ಮಿಡ್ಲ್‌ಸೆಕ್ಸ್, ಟೌಂಟನ್ (2007)
  • 820-9 ಡಿಕ್ಲೇರ್ಡ್ – ಸರ್ರೆ vs ಡರ್ಹಾಮ್, ದಿ ಓವಲ್ (2025)
  • 811 – ಸರ್ರೆ vs ಸೋಮರ್‌ಸೆಟ್, ದಿ ಓವಲ್ (1899)