ಪ್ರಸ್ತುತ ದೆಹಲಿಯಲ್ಲಿ ಚೊಚ್ಚಲ ಆವೃತ್ತಿಯ ದೆಹಲಿ ಪ್ರೀಮಿಯರ್ ಲೀಗ್ ನಡೆಯುತ್ತಿದೆ. ಇಂದು ನಡೆಯುತ್ತಿರುವ ಈ ಲೀಗ್‌ನ 23 ನೇ ಪಂದ್ಯದಲ್ಲಿ ದಕ್ಷಿಣ ದೆಹಲಿ ಸೂಪರ್‌ಸ್ಟಾರ್ಸ್ ಮತ್ತು ಉತ್ತರ ದೆಹಲಿ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ದೆಹಲಿ ಸೂಪರ್‌ಸ್ಟಾರ್ ತಂಡದ ಇಬ್ಬರು ಬ್ಯಾಟರ್ಗಳು ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದ್ದಾರೆ. ಈ ಇಬ್ಬರ ಅಬ್ಬರದಿಂದಾಗಿ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದೆಹಲಿ ಸೂಪರ್‌ಸ್ಟಾರ್ಸ್ ತಂಡ ನಿಗದಿತ 20 ಓವರ್ಗಳಲ್ಲಿ ಬರೋಬ್ಬರಿ 308 ರನ್ ಕಲೆಹಾಕಿದೆ. ಈ ವೇಳೆ ತಂಡದ 23 ವರ್ಷದ ಓಪನರ್ ಪ್ರಿಯಾಂಶ್ ಆರ್ಯ, ಒಂದೇ ಓವರ್‌ನಲ್ಲಿ 6 ಸಿಕ್ಸರ್ ಬಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಈ ಲೀಗ್‌ನ ಆರಂಭದಿಂದಲೂ ಅತ್ಯುತ್ತಮ ಬ್ಯಾಟಿಂಗ್ ಮಾಡುತ್ತಿರುವ ಪ್ರಿಯಾಂಶ್ ಆರ್ಯ, ಈ ಲೀಗ್‌ನಲ್ಲಿ ಇದುವರೆಗೆ 2 ಶತಕ ಬಾರಿಸಿದ್ದಾರೆ. ಇನ್ನು ಈಗ ನಡೆಯುತ್ತಿರುವ ಉತ್ತರ ದೆಹಲಿ ವಿರುದ್ಧದ ಪಂದ್ಯದಲ್ಲಿ ಮನನ್ ಭಾರದ್ವಾಜ್ ಬೌಲ್ ಮಾಡಿದ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಬಾರಿಸಿ ಪ್ರಿಯಾಂಶ್ ದಾಖಲೆ ನಿರ್ಮಿಸಿದ್ದಾರೆ. ಪಂದ್ಯದ 12ನೇ ಓವರ್‌ನಲ್ಲಿ ಪ್ರಿಯಾಂಶ್ ಪ್ರತಿ ಎಸೆತವನ್ನು ಸಿಕ್ಸರ್ಗಟ್ಟಿದರು. ಇದರೊಂದಿಗೆ ಡೆಲ್ಲಿ ಪ್ರೀಮಿಯರ್ ಲೀಗ್‌ನಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು. ಇದಕ್ಕೂ ಮೊದಲು ಪ್ರಿಯಾಂಶ್, ಡೆಲ್ಲಿ ಪ್ರೀಮಿಯರ್ ಲೀಗ್‌ನಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಪ್ರಿಯಾಂಶ್, 12ನೇ ಓವರ್‌ನ ಮೊದಲ ಎಸೆತವನ್ನು ಲಾಂಗ್ ಆಫ್ ದಿಕ್ಕಿನಲ್ಲಿ ಸಿಕ್ಸರ್ಗಟ್ಟಿದರೆ, ಎರಡನೇ ಎಸೆತವನ್ನು ಡೀಪ್ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಬಾರಿಸಿದರು. ಇದರ ನಂತರ, ಮೂರನೇ ಎಸೆತವನ್ನು ಲಾಂಗ್ ಆನ್ ಕಡೆಗೆ ಸಿಕ್ಸರ್ ಬಾರಿಸಿದ ಅವರು ನಂತರದ ಮೂರು ಎಸೆತಗಳಲ್ಲಿ ಸಿಕ್ಸರ್‌ಗಳನ್ನು ಬಾರಿಸಿದರು. ಈ ಮೂಲಕ ಪ್ರಿಯಾಂಶ್ ಆರ್ಯ ಡಿಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದಲ್ಲದೆ, ರವಿಶಾಸ್ತ್ರಿ ಮತ್ತು ಯುವರಾಜ್ ಸಿಂಗ್ ನಂತರ ಒಂದು ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿದ ಮೂರನೇ ಭಾರತೀಯ ಎನಿಸಿಕೊಂಡಿದ್ದಾರೆ.
6️⃣ 𝐒𝐈𝐗𝐄𝐒 𝐢𝐧 𝐚𝐧 𝐨𝐯𝐞𝐫 🤩
There’s nothing Priyansh Arya can’t do 🔥#AdaniDPLT20 #AdaniDelhiPremierLeagueT20 #DilliKiDahaad | @JioCinema @Sports18 pic.twitter.com/lr7YloC58D
— Delhi Premier League T20 (@DelhiPLT20) August 31, 2024
ಈ ಪಂದ್ಯದಲ್ಲಿ ಪ್ರಿಯಾಂಶ್ ಆರ್ಯ 50 ಎಸೆತಗಳನ್ನು ಎದುರಿಸಿ 120 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಅವರ ಈ ಶತಕದ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು 10 ಸಿಕ್ಸರ್‌ಗಳು ಸೇರಿದ್ದವು. 240 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಪ್ರಿಯಾಂಶ್ ಆರ್ಯ, ನಾಯಕ ಆಯುಷ್ ಬಡೋನಿ ಅವರೊಂದಿಗೆ ಎರಡನೇ ವಿಕೆಟ್‌ಗೆ 286 ರನ್‌ಗಳ ದಾಖಲೆಯ ಜೊತೆಯಾಟವನ್ನು ನಡೆಸಿದರು. ಇದು ಈ ಲೀಗ್‌ನಲ್ಲಿ ಇದುವರೆಗಿನ ಅತಿದೊಡ್ಡ ಜೊತೆಯಾಟವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:32 pm, Sat, 31 August 24