Duleep Trophy 2025: 18 ಸಾವಿರ ಕೋಟಿ ಇದ್ದು ಏನು ಪ್ರಯೋಜನ? ಬಿಸಿಸಿಐಗೆ ಛೀಮಾರಿ ಹಾಕಿದ ಫ್ಯಾನ್ಸ್

Duleep Trophy 2025: ಭಾರತೀಯ ಕ್ರಿಕೆಟ್ ಅಭಿಮಾನಿಗಳು ದುಲೀಪ್ ಟ್ರೋಫಿಯ ನೇರ ಪ್ರಸಾರ ಇಲ್ಲದಿರುವುದರಿಂದ ಆಕ್ರೋಶಗೊಂಡಿದ್ದಾರೆ. ಟೀಂ ಇಂಡಿಯಾದ ಪ್ರಮುಖ ಆಟಗಾರರು ಭಾಗವಹಿಸಿದ್ದರೂ, ಬಿಸಿಸಿಐ ಈ ಪ್ರಮುಖ ದೇಶೀಯ ಟೂರ್ನಿಯನ್ನು ಟಿವಿಯಲ್ಲಿ ಪ್ರಸಾರ ಮಾಡದಿರುವುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

Duleep Trophy 2025: 18 ಸಾವಿರ ಕೋಟಿ ಇದ್ದು ಏನು ಪ್ರಯೋಜನ? ಬಿಸಿಸಿಐಗೆ ಛೀಮಾರಿ ಹಾಕಿದ ಫ್ಯಾನ್ಸ್
Duleep Trophy 2025

Updated on: Aug 28, 2025 | 6:38 PM

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮುಗಿದ ನಂತರ, ಕ್ರಿಕೆಟ್ ಅಭಿಮಾನಿಗಳು ದುಲೀಪ್ ಟ್ರೋಫಿಗಾಗಿ (Duleep Trophy) ಕಾತರದಿಂದ ಕಾಯುತ್ತಿದ್ದರು. ಏಕೆಂದರೆ ಆಗಸ್ಟ್ 4 ರ ನಂತರ ಟೀಂ ಇಂಡಿಯಾಗೆ ಯಾವುದೇ ವೇಳಾಪಟ್ಟಿ ಇರಲಿಲ್ಲ. ಅದಕ್ಕಾಗಿಯೇ ತಂಡದ ಸ್ಟಾರ್ ಆಟಗಾರರು ಈ ಪಂದ್ಯಾವಳಿಯಲ್ಲಿ ಆಡುತ್ತಿದ್ದಾರೆ. ಇದರ ಹೊರತಾಗಿಯೂ, ದುಲೀಪ್ ಟ್ರೋಫಿಯನ್ನು ಟಿವಿಯಲ್ಲಿ ನೇರ ಪ್ರಸಾರ ಮಾಡಲಾಗುತ್ತಿಲ್ಲ. ಬಿಸಿಸಿಐನ (BCCI) ಈ ನಡೆ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಕೋಪವನ್ನು ಹೊರಹಾಕುತ್ತಿದ್ದಾರೆ. ವಾಸ್ತವವಾಗಿ ಬಿಸಿಸಿಐ ವಿಶ್ವದ ಅತ್ಯಂತ ಶ್ರೀಮಂತ ಮಂಡಳಿಯಾಗಿದೆ. ಇದರ ನಿವ್ವಳ ಮೌಲ್ಯವೇ 18760 ಕೋಟಿ ರೂ. ಆಗಿದೆ. ಇದರ ಹೊರತಾಗಿಯೂ, ದೇಶೀಯ ಕ್ರಿಕೆಟ್ ಬಗ್ಗೆ ಬಿಸಿಸಿಐನ ಕಡೆಗಣನೆ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.

ಅಭಿಮಾನಿಗಳ ಆಕ್ರೋಶ

ದುಲೀಪ್ ಟ್ರೋಫಿ ಭಾರತದ ಪ್ರಮುಖ ದೇಶೀಯ ಕ್ರಿಕೆಟ್ ಪಂದ್ಯಗಳಲ್ಲಿ ಒಂದಾಗಿದೆ. ಇದನ್ನು ರಣಜಿ ಮತ್ತು ಇರಾನಿ ಟ್ರೋಫಿಗೆ ಹೋಲಿಸಲಾಗುತ್ತದೆ. ಈ ಆವೃತ್ತಿಯಲ್ಲಿ ಎರಡು ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯುತ್ತಿವೆ. ಇದರಲ್ಲಿ ಉತ್ತರ ವಲಯ ಹಾಗೂ ಪೂರ್ವ ವಲಯ ಮತ್ತು ಮಧ್ಯ ವಲಯ ಹಾಗೂ ಈಶಾನ್ಯ ವಲಯ ತಂಡಗಳು ಪಂದ್ಯಗಳನ್ನಾಡುತ್ತಿವೆ. ಈ ಪಂದ್ಯಾವಳಿಯ ಸೆಮಿಫೈನಲ್ ಸೆಪ್ಟೆಂಬರ್ 04 ರಂದು ಮತ್ತು ಫೈನಲ್ ಪಂದ್ಯ ಸೆಪ್ಟೆಂಬರ್ 11 ರಂದು ನಡೆಯಲಿದೆ. ಅನೇಕ ಸ್ಟಾರ್ ಆಟಗಾರರು ಇದರಲ್ಲಿ ಆಡುತ್ತಿದ್ದಾರೆ. ಇದರ ಹೊರತಾಗಿಯೂ, ನೇರ ಪ್ರಸಾರದ ಕೊರತೆಯಿಂದಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಅಭಿಮಾನಿಗಳು ಹೇಳಿದ್ದೇನು?

ಚಿಕ್ಕ ಟೆನಿಸ್ ಬಾಲ್ ಪಂದ್ಯಾವಳಿಗಳು ಸಹ ನೇರ ಪ್ರಸಾರವಾಗುವ ಈ ಯುಗದಲ್ಲಿ, ಬಿಸಿಸಿಐ ದುಲೀಪ್ ಟ್ರೋಫಿಯ ನೇರ ಪ್ರಸಾರವನ್ನು ಒದಗಿಸದಿರುವುದು ತುಂಬಾ ನಾಚಿಕೆಗೇಡಿನ ಸಂಗತಿ. ದುಲೀಪ್ ಟ್ರೋಫಿ ದೇಶೀಯ ಕ್ರಿಕೆಟ್‌ನ ಪ್ರಮುಖ ಪಂದ್ಯಾವಳಿಯಾಗಿದೆ. ಹಾಗಿದ್ದರೂ ಬಿಸಿಸಿಐ ಇದನ್ನು ಕಡೆಗಣಿಸುತ್ತಿದೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಕಣದಲ್ಲಿ ಸ್ಟಾರ್ ಆಟಗಾರರು

ಆಗಸ್ಟ್ 28 ರಂದು ಪ್ರಾರಂಭವಾಗಿರುವ ದುಲೀಪ್ ಟ್ರೋಫಿಯಲ್ಲಿ, ಟೀಂ ಇಂಡಿಯಾದ ವೇಗಿಗಳಾದ ಮೊಹಮ್ಮದ್ ಶಮಿ , ಮುಖೇಶ್ ಕುಮಾರ್ ಮತ್ತು ಆಲ್‌ರೌಂಡರ್ ರಿಯಾನ್ ಪರಾಗ್ ಪೂರ್ವ ವಲಯದ ಪರ ಆಡುತ್ತಿದ್ದಾರೆ. ವೇಗಿಗಳಾದ ಅರ್ಷದೀಪ್ ಸಿಂಗ್ ಮತ್ತು ಯಶ್ ಧುಲ್ ಉತ್ತರ ವಲಯದಲ್ಲಿ ಆಡುತ್ತಿದ್ದಾರೆ. ಇವರಲ್ಲದೆ, ಕುಲ್ದೀಪ್ ಯಾದವ್, ರಜತ್ ಪತಿದಾರ್ ಮತ್ತು ದೀಪಕ್ ಚಹಾರ್ ಅವರಂತಹ ಆಟಗಾರರು ಸಹ ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:35 pm, Thu, 28 August 25