Duleep Trophy 2025: ಮೊದಲ ದಿನವೇ ಸ್ಫೋಟಕ ಶತಕ ಸಿಡಿಸಿದ ಆರ್‌ಸಿಬಿ ನಾಯಕ ರಜತ್ ಪಾಟಿದರ್
Rajat Patidar's Century: ದುಲೀಪ್ ಟ್ರೋಫಿ 2025 ರ ಕ್ವಾರ್ಟರ್ ಫೈನಲ್‌ನಲ್ಲಿ, ರಜತ್ ಪಟಿದಾರ್ ಕೇವಲ 80 ಎಸೆತಗಳಲ್ಲಿ ಅದ್ಭುತ ಶತಕ ಸಿಡಿಸಿದರು. ಅವರ 125 ರನ್‌ಗಳ ಇನ್ನಿಂಗ್ಸ್‌ನಲ್ಲಿ 18 ಬೌಂಡರಿ ಮತ್ತು 3 ಸಿಕ್ಸರ್‌ಗಳು ಸೇರಿವೆ. ಈ ಪ್ರದರ್ಶನವು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗಾಗಿ ಟೀಂ ಇಂಡಿಯಾದಲ್ಲಿ ಅವರ ಸ್ಥಾನವನ್ನು ಬಲಪಡಿಸಿದೆ. ರಜತ್ ಪಟಿದಾರ್ 2025ರ ಐಪಿಎಲ್ ನಲ್ಲಿ ಆರ್‌ಸಿಬಿಯನ್ನು ಚಾಂಪಿಯನ್ ಮಾಡಿದ ನಾಯಕ ಕೂಡ ಆಗಿದ್ದಾರೆ.

2025 ರ ದುಲೀಪ್ ಟ್ರೋಫಿಗೆ (Duleep Trophy 2025) ಇಂದಿನಿಂದ ಚಾಲನೆ ಸಿಕ್ಕಿದೆ. ಇದರೊಂದಿಗೆ ಭಾರತದ ದೇಶೀ ಕ್ರಿಕೆಟ್ ಕೂಡ ಆರಂಭವಾಗಿದೆ. ದುಲೀಪ್ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದ ಮೊದಲ ದಿನದಂದೇ, ಕೇಂದ್ರ ವಲಯದ ನಾಯಕ ರಜತ್ ಪಟಿದಾರ್ (Rajat Patidar) ಕೇವಲ 80 ಎಸೆತಗಳಲ್ಲಿ ಬಿರುಸಿನ ಶತಕ ಬಾರಿಸಿದ್ದಾರೆ. ರಜತ್ ತಮ್ಮ ಶತಕದ ಇನ್ನಿಂಗ್ಸ್‌ನಲ್ಲಿ 18 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದರು. ಈ ಮೂಲಕ ಏಷ್ಯಾಕಪ್ ಬಳಿಕ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲಿದ್ದಾರೆ. 17 ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ತಮ್ಮ ನಾಯಕತ್ವದಲ್ಲಿ ಐಪಿಎಲ್ ಚಾಂಪಿಯನ್ ಮಾಡಿದ್ದ ರಜತ್ ಪಟಿದಾರ್, ಇದೀಗ ದುಲೀಪ್ ಟ್ರೋಫಿಯ ಮೊದಲ ದಿನದಂದೇ ಉತ್ತಮ ಪ್ರದರ್ಶನ ನೀಡಿದ್ದಾರೆ.
ರಜತ್ ಪಾಟಿದಾರ್ ಅದ್ಭುತ ಬ್ಯಾಟಿಂಗ್
ದುಲೀಪ್ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯಗಳು ಆಗಸ್ಟ್ 28 ರಂದು ಪ್ರಾರಂಭವಾಗಿವೆ. ಇದರಡಿಯಲ್ಲಿ ಈಶಾನ್ಯ ವಲಯ ತಂಡವು ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಆರಂಭಿಸಿದ ಕೇಂದ್ರ ವಲಯ ತಂಡದ ಪರ ಬ್ಯಾಟ್ಸ್‌ಮನ್‌ಗಳು ಉತ್ತಮ ಆರಂಭ ನೀಡಿದರು. ಈ ವೇಳೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ನಾಯಕ ರಜತ್ ಪಟಿದಾರ್ ಬಂದ ಕೂಡಲೇ ಹೊಡಿಬಡಿ ಆಟಕ್ಕೆ ಮುಂದಾಗಿದಲ್ಲದೆ, 21 ವರ್ಷದ ಬ್ಯಾಟ್ಸ್‌ಮನ್ ಡ್ಯಾನಿಶ್ ಮಾಲೆವಾರ್ ಅವರೊಂದಿಗೆ ಶತಕದ ಜೊತೆಯಾಟವನ್ನು ನಡೆಸಿದರು.
ಆ ಬಳಿಕ ರಜತ್ ಕೇವಲ 80 ಎಸೆತಗಳಲ್ಲಿ 18 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ ತಮ್ಮ ಶತಕವನ್ನು ಪೂರೈಸಿದರು. ಅಂತಿಮವಾಗಿ ರಜತ್ 96 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 21 ಬೌಂಡರಿಗಳ ಸಹಾಯದಿಂದ 125 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ರಜತ್ ಮಾತ್ರವಲ್ಲದೆ ಡ್ಯಾನಿಶ್ ಮಾಲೆವಾರ್ ಕೂಡ ದಿನದಾಟದಂತ್ಯದ ವೇಳೆಗೆ 219 ಎಸೆತಗಳಲ್ಲಿ 35 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ 198 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ. ಈ ಇಬ್ಬರು ಬ್ಯಾಟ್ಸ್‌ಮನ್‌ಗಳ ಅದ್ಭುತ ಬ್ಯಾಟಿಂಗ್ ಸಹಾಯದಿಂದ, ಸೆಂಟ್ರಲ್ ಜೋನ್ ತಂಡ ಮೊದಲ ದಿನದಾಟದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 432 ರನ್ ಗಳಿಸಿದೆ.
ಆ.28 ರಿಂದ ದುಲೀಪ್ ಟ್ರೋಫಿ ಬೆಂಗಳೂರಿನಲ್ಲಿ ಆರಂಭ; ವೇಳಾಪಟ್ಟಿ, ಆರು ತಂಡಗಳ ವಿವರ ಇಲ್ಲಿದೆ
ಐಪಿಎಲ್ನಲ್ಲಿ ರಜತ್ ಸಾಧನೆ
ದುಲೀಪ್ ಟ್ರೋಫಿಗೂ ಮುನ್ನ ಇದೇ ರಜತ್ ಪಾಟಿದರ್ 2025 ರ ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದರು. ಅವರ ನಾಯಕತ್ವದಲ್ಲಿ ಆರ್‌ಸಿಬಿ 17 ವರ್ಷಗಳ ನಂತರ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಐಪಿಎಲ್ 2025 ರಲ್ಲಿ ನಾಯಕತ್ವದ ಜೊತೆಗೆ, ಪಾಟಿದಾರ್ ಬ್ಯಾಟಿಂಗ್‌ನಲ್ಲೂ ತಮ್ಮ ಶಕ್ಕಿ ಪ್ರದರ್ಶಿಸಿದರು. ಆಡಿದ 15 ಪಂದ್ಯಗಳ 14 ಇನ್ನಿಂಗ್ಸ್‌ಗಳಲ್ಲಿ 24 ಸರಾಸರಿಯಲ್ಲಿ 312 ರನ್ ಗಳಿಸಿದರು. ಇದರಲ್ಲಿ ಎರಡು ಅರ್ಧಶತಕಗಳು ಸೇರಿದ್ದವು.
ರಜತ್ ಪಟಿದಾರ್ ಟೀಂ ಇಂಡಿಯಾ ಪರ ಮೂರು ಟೆಸ್ಟ್ ಪಂದ್ಯಗಳು ಮತ್ತು ಒಂದು ಏಕದಿನ ಪಂದ್ಯವನ್ನು ಆಡಿದ್ದಾರೆ. ಈಗ ದುಲೀಪ್ ಟ್ರೋಫಿಯಲ್ಲಿ ಶತಕ ಬಾರಿಸುವ ಮೂಲಕ, ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗಾಗಿ ಟೀಂ ಇಂಡಿಯಾದಲ್ಲಿ ತಮ್ಮ ಹಕ್ಕನ್ನು ಬಲಪಡಿಸಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ಅಕ್ಟೋಬರ್‌ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
