IPL 2022: ಐಪಿಎಲ್​ನ ಸರ್ವಶ್ರೇಷ್ಠ ದಾಖಲೆಯನ್ನು ಸರಿಗಟ್ಟಿದ ಬ್ರಾವೊ

| Updated By: ಝಾಹಿರ್ ಯೂಸುಫ್

Updated on: Mar 27, 2022 | 2:58 PM

Dwayne Bravo: ಒಟ್ಟಾರೆ ಟಿ20 ಕ್ರಿಕೆಟ್ ದಾಖಲೆ ನೋಡುವುದಾದರೆ, ಡ್ವೇನ್ ಬ್ರಾವೊ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.

IPL 2022: ಐಪಿಎಲ್​ನ ಸರ್ವಶ್ರೇಷ್ಠ ದಾಖಲೆಯನ್ನು ಸರಿಗಟ್ಟಿದ ಬ್ರಾವೊ
Dwayne Bravo
Follow us on

ಐಪಿಎಲ್ ಸೀಸನ್ 15 ಆರಂಭದಲ್ಲೇ ದಾಖಲೆಗಳು ನಿರ್ಮಾಣವಾಗಿದೆ. 200 ಪಂದ್ಯಗಳ ಬಳಿಕ ನಾಯಕನಾಗುವ ರವೀಂದ್ರ ಜಡೇಜಾ ದಾಖಲೆ ಬರೆದರೆ 3 ವಿಕೆಟ್ ಉರುಳಿಸಿ ಡ್ವೇನ್ ಬ್ರಾವೊ ವಿಶೇಷ ಸಾಧನೆಯನ್ನು ಸರಿಗಟ್ಟಿದರು. ಇದಕ್ಕೂ ಮುನ್ನ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಈ ಪಂದ್ಯದಲ್ಲಿ ಟಾಸ್ ಗೆದ್ದ KKR ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡಿದ್ದರು. ಅಲ್ಲದೆ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸುವ ಮೂಲಕ ಸಿಎಸ್​ಕೆ ತಂಡವನ್ನು ಕೇವಲ 131 ರನ್​ಗಳಿಗೆ ನಿಯಂತ್ರಿಸಿದರು. ಇದಕ್ಕೆ ಉತ್ತರವಾಗಿ ಕೆಕೆಆರ್ 18.3 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 133 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು. ಈ ಸೋಲಿನ ಹೊರತಾಗಿಯೂ ಸಿಎಸ್​ಕೆ ಪರ ಮಹೇಂದ್ರ ಸಿಂಗ್ ಧೋನಿ ಅರ್ಧಶತಕ ಬಾರಿಸಿದ್ರೆ, ಡ್ವೇನ್ ಬ್ರಾವೊ 3 ವಿಕೆಟ್ ಉರುಳಿಸಿ ಮಿಂಚಿದ್ದರು.

ಈ ಮೂರು ವಿಕೆಟ್​ನೊಂದಿಗೆ ಇದೀಗ ಬ್ರಾವೊ ಐಪಿಎಲ್​ನಲ್ಲಿ 170 ವಿಕೆಟ್ ಕಬಳಿಸಿದಂತಾಗಿದೆ. ಇದರೊಂದಿಗೆ ಐಪಿಎಲ್​ನ ಸರ್ವಶ್ರೇಷ್ಠ ದಾಖಲೆ ಬರೆದಿರುವ ಲಸಿತ್ ಮಾಲಿಂಗ ಅವರ ದಾಖಲೆಯನ್ನು ಬ್ರಾವೊ ಸರಿಗಟ್ಟಿದ್ದಾರೆ. ಮಾಲಿಂಗ ಐಪಿಎಲ್​ನಲ್ಲಿ 170 ವಿಕೆಟ್ ಕಬಳಿಸುವ ಮೂಲಕ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಬರೆದಿಟ್ಟಿದ್ದಾರೆ. ಇದೀಗ ಈ ಸರ್ವಶ್ರೇಷ್ಠ ದಾಖಲೆಯನ್ನು ಡ್ವೇನ್ ಬ್ರಾವೊ ಸರಿಗಟ್ಟಿದ್ದಾರೆ. ಈ ಮೂಲಕ ಮುಂದಿನ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸುವತ್ತ ಹೆಜ್ಜೆಯಿಟ್ಟಿದ್ದಾರೆ.

ಇನ್ನು ಐಪಿಎಲ್​ನಲ್ಲಿ ಕೇವಲ 5 ಬೌಲರುಗಳು ಮಾತ್ರ 150 ಕ್ಕೂ ಅಧಿಕ ವಿಕೆಟ್ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಇದೀಗ ಲಸಿತ್ ಮಾಲಿಂಗ ಹಾಗೂ ಡ್ವೇನ್ ಬ್ರಾವೊ 170 ವಿಕೆಟ್​ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಅಮಿತ್ ಮಿಶ್ರಾ ಇದ್ದು, ಮಿಶ್ರಾ ಒಟ್ಟು 166 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ 157 ವಿಕೆಟ್ ಪಡೆದಿಯುವ ಪಿಯುಷ್ ಚಾವ್ಲಾ ನಂತರದ ಸ್ಥಾನದಲ್ಲಿದ್ದಾರೆ. ಇನ್ನು ಹರ್ಭಜನ್ ಸಿಂಗ್ ಕೂಡ 150 ಪಡೆಯುವ ಮೂಲಕ ಈ ಪಟ್ಟಿಯಲ್ಲಿದ್ದಾರೆ.

ಬ್ರಾವೋ ಹೆಸರಿನಲ್ಲಿದೆ ವಿಶ್ವ ದಾಖಲೆ:
ಸದ್ಯ ಲಸಿತ್ ಮಾಲಿಂಗ ದಾಖಲೆ ಮುರಿಯಲು ಬ್ರಾವೊಗೆ 1 ವಿಕೆಟ್ ಅಗತ್ಯವಿದೆ. ಇದಾಗ್ಯೂ ಒಟ್ಟಾರೆ ಟಿ20 ಕ್ರಿಕೆಟ್ ದಾಖಲೆ ನೋಡುವುದಾದರೆ, ಡ್ವೇನ್ ಬ್ರಾವೊ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಇದುವರೆಗೆ 522 ಟಿ20 ಪಂದ್ಯಗಳಲ್ಲಿ 571 ವಿಕೆಟ್ ಪಡೆದು ಬ್ರಾವೊ ವಿಶ್ವ ದಾಖಲೆ ಬರೆದಿಟ್ಟಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಇಮ್ರಾನ್ ತಾಹಿರ್ 451 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಹಾಗೆಯೇ ರಶೀದ್ ಖಾನ್ 435 ವಿಕೆಟ್ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?

ಇದನ್ನೂ ಓದಿ:  IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು

(Dwayne Bravo equals Lasith Malinga’s all-time record for most IPL wickets)