Emerging Asia Cup 2023: ಏಷ್ಯಾಕಪ್ ಫೈನಲ್​ಗೆ ಲಗ್ಗೆಯಿಟ್ಟ ಭಾರತ; ಪಾಕ್ ಎದುರು ಫೈನಲ್ ಫೈಟ್..!

|

Updated on: Jul 21, 2023 | 9:14 PM

Emerging Asia Cup 2023: ಉದಯೋನ್ಮುಖ ಏಷ್ಯಾಕಪ್​ನಲ್ಲಿ ಇಂದು ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ಎ ತಂಡವನ್ನು 51 ರನ್​ಗಳಿಂದ ಮಣಿಸಿದ ಯಶ್ ಧುಲ್ ನೇತೃತ್ವದ ಭಾರತ ಎ ತಂಡ ಬರೋಬ್ಬರಿ 11 ವರ್ಷಗಳ ಬಳಿಕ ಏಷ್ಯಾಕಪ್ ಫೈನಲ್​ಗೆ ಲಗ್ಗೆ ಇಟ್ಟಿದೆ.

Emerging Asia Cup 2023: ಏಷ್ಯಾಕಪ್ ಫೈನಲ್​ಗೆ ಲಗ್ಗೆಯಿಟ್ಟ ಭಾರತ; ಪಾಕ್ ಎದುರು ಫೈನಲ್ ಫೈಟ್..!
ಟೀಂ ಇಂಡಿಯಾ
Follow us on

ಉದಯೋನ್ಮುಖ ಏಷ್ಯಾಕಪ್​ನಲ್ಲಿ (Emerging Asia Cup 2023) ಇಂದು ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ಎ ತಂಡವನ್ನು 51 ರನ್​ಗಳಿಂದ ಮಣಿಸಿದ ಯಶ್ ಧುಲ್ ನೇತೃತ್ವದ ಭಾರತ ಎ ತಂಡ ಬರೋಬ್ಬರಿ 10 ವರ್ಷಗಳ ಬಳಿಕ ಏಷ್ಯಾಕಪ್ ಫೈನಲ್​ಗೆ ಲಗ್ಗೆ ಇಟ್ಟಿದೆ. ಇದೀಗ ಬಾಂಗ್ಲಾ  ತಂಡವನ್ನು ಮಣಿಸಿದ ಟೀಂ ಇಂಡಿಯಾ (India A vs Bangladesh A), ಚಾಂಪಿಯನ್ ಪಟ್ಟಕ್ಕಾಗಿ ಇದೇ ಭಾನುವಾರದಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. 10 ವರ್ಷಗಳ ಬಳಿಕ ಉಭಯ ತಂಡಗಳು ಉದಯೋನ್ಮುಖ ಏಷ್ಯಾಕಪ್‌ನ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿ ಪಾಕಿಸ್ತಾನ ಫೈನಲ್ ಪ್ರವೇಶಿಸಿತ್ತು. ಈ ಹಿಂದೆ 2013 ರಲ್ಲಿ ನಡೆದ ಉದಯೋನ್ಮುಖ ಏಷ್ಯಾಕಪ್‌ನ ಫೈನಲ್​ನಲ್ಲಿ ಭಾರತ ಮತ್ತು ಪಾಕಿಸ್ತಾನ (India A vs Pakistan A) ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav) ನೇತೃತ್ವದ ಭಾರತ ತಂಡ, ಪಾಕ್ ತಂಡವನ್ನು ಬಗ್ಗುಬಡಿದು ಏಷ್ಯಾಕಪ್ ಎತ್ತಿಹಿಡಿದಿತ್ತು.

ಉದಯೋನ್ಮುಖ ಏಷ್ಯಾಕಪ್‌ನ ಮೊದಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟಕ್ಕೇರಿದ್ದ ಭಾರತ, ಆ ಬಳಿಕ ಈ ಪ್ರಶಸ್ತಿ ಗೆದ್ದಿರಲಿಲ್ಲ. ಆದರೆ ಕಳೆದ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದ ಪಾಕ್ ಹಾಲಿ ಚಾಂಪಿಯನ್ ಎನಿಸಿಕೊಂಡಿದೆ. ಈಗಾಗಲೇ ಲೀಗ್ ಹಂತದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಪಾಕ್ ತಂಡವನ್ನು 8 ವಿಕೆಟ್​ಗಳಿಂದ ಮಣಿಸಿದ್ದ ಯಶ್ ಧುಲ್ ಪಡೆ ಟೂರ್ನಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿತ್ತು.

Emerging Asia Cup 2023: ಲಂಕಾ ತಂಡವನ್ನು ಮಣಿಸಿ ಏಷ್ಯಾಕಪ್ ಫೈನಲ್​ಗೆ ಲಗ್ಗೆಯಿಟ್ಟ ಪಾಕಿಸ್ತಾನ..!

211 ರನ್‌ಗಳಿಗೆ ಆಲೌಟ್

ಇನ್ನು ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸೆಮಿಫೈನಲ್ ಪಂದ್ಯದ ಕುರಿತು ಮಾತನಾಡುವುದಾದರೆ, ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯಶ್ ಧುಲ್ ಪಡೆ 211 ರನ್‌ಗಳಿಗೆ ಆಲೌಟ್ ಆಯಿತು. ಟೀಂ ಇಂಡಿಯಾವನ್ನು ಕಾಡಿದ ಬಾಂಗ್ಲಾದೇಶ ತಂಡದ ಬೌಲರ್​ಗಳು ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಛಿದ್ರಗೊಳಿಸಿ ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರು. ಆದರೆ ಸತತ ವಿಕೆಟ್​ಗಳ ಪತನದ ನಡುವೆಯೂ ಏಕಾಂಗಿ ಹೋರಾಟ ನಡೆಸಿದ ನಾಯಕ ಯಶ್ ಧುಲ್ ಅರ್ಧಶತಕದ ಇನ್ನಿಂಗ್ಸ್ ಆಡುವುದರೊಂದಿಗೆ ಟೀಂ ಇಂಡಿಯಾವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು.

ಧುಲ್ ಏಕಾಂಗಿ ಹೋರಾಟ

ಒಂದು ಹಂತದಲ್ಲಿ ಭಾರತ 150 ರನ್ ಕಲೆಹಾಕುವುದು ಕಷ್ಟ ಎನ್ನುವ ಸಂದರ್ಭದಲ್ಲಿ ನಾಯಕನ ಜವಬ್ದಾರಿ ನೆನೆದ ಯಶ್, ಬಾಲಂಗೋಚಿಗಳೊಂದಿಗೆ ಇನ್ನಿಂಗ್ಸ್ ಕಟ್ಟುವ ಕೆಲಸ ಮಾಡಿದರು. ಹೀಗಾಗಿ ಟೀಂ ಇಂಡಿಯಾ ಇನ್ನಿಂಗ್ಸ್​ನ ಕೊನೆಯ ಓವರ್​ವರೆಗೂ ಬ್ಯಾಟಿಂಗ್ ಮಾಡಿ 211 ರನ್ ಕಲೆಹಾಕಿತು. ಟೀಂ ಇಂಡಿಯಾದ ಈ ಗುರಿಯಲ್ಲಿ ಬಹುಪಾಲು ಕೊಡುಗೆ ನೀಡಿದ ಧುಲ್ ತಮ್ಮ ಇನ್ನಿಂಗ್ಸ್​ನಲ್ಲಿ 85 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ 66 ರನ್ ಬಾರಿಸಿದರು. ಇವರಲ್ಲದೆ ಆರಂಭಿಕ ಅಭಿಷೇಕ್ ಶರ್ಮಾ 63 ಎಸೆತಗಳಲ್ಲಿ 34 ರನ್ ಬಾರಿಸಿದರೆ, ಕನ್ನಡಿಗ ನಿಖಿನ್ ಜೋಶ್ 17 ರನ್​ಗಳ ಕೊಡುಗೆ ನೀಡಿದರು. ಇನ್ನು ಕೆಳಕ್ರಮಾಂಕದಲ್ಲಿ ನಾಯಕನಿಗೆ ಸಾಥ್ ನೀಡಿದ ಮಾನವ್ ಸುತಾರ್ ಬಿರುಸಿನ ಬ್ಯಾಟಿಂಗ್ ಮಾಡಿ 24 ಎಸೆತಗಳಲ್ಲಿ 21 ರನ್ ಬಾರಿಸಿದರು.

ಉತ್ತಮ ಆರಂಭ ಪಡೆದು ಎಡವಿದ ಬಾಂಗ್ಲಾ

ಭಾರತ ನೀಡಿದ 211 ರನ್‌ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಎ ತಂಡಕ್ಕೆ ಬಿರುಸಿನ ಆರಂಭ ಸಿಕ್ಕಿತು. ಆರಂಭಿಕರಾಗಿ ಕಣಕ್ಕಿಳಿದ ಮೊಹಮ್ಮದ್ ನಯೀಮ್ ಮತ್ತು ತಂಜಿದ್ ಹಸನ್ ಮುರಿಯದ ವಿಕೆಟ್​ಗೆ 70 ರನ್​ಗಳ ಜೊತೆಯಾಟ ನೀಡಿದರು. ಹೀಗಾಗಿ ಆರಂಭಿಕ ಆಟವನ್ನು ನೋಡುತ್ತಿದ್ದರೆ ಟೀಂ ಇಂಡಿಯಾ ಸೋಲುವುದು ಖಚಿತ ಎಂದು ತೋರುತ್ತಿತ್ತು. ಆದರೆ ಟೀಂ ಇಂಡಿಯಾದ ಸ್ಪಿನ್ ದಾಳಿ ಆರಂಭವಾದ ಬಳಿಕ ಬಾಂಗ್ಲಾ ಪಾಳೆಯದ ಪೆವಿಲಿಯನ್ ಪರೇಡ್ ಆರಂಭವಾಯಿತು.

ಬಾಂಗ್ಲಾ ಪರ ಆರಂಭಿಕ ತಂಝೀದ್ ಹಸನ್ 51 ರನ್​ಗಳ ಬಿರುಸಿನ ಇನ್ನಿಂಗ್ಸ್ ಆಡಿದರೆ, ಮತ್ತೊಬ್ಬ ಆರಂಭಿಕ  ಮೊಹಮ್ಮದ್ ನಯಿಮ್ ಕೂಡ 38 ರನ್​ಗಳ ಕೊಡುಗೆ ನೀಡಿದರು. ಈ ಇಬ್ಬರನ್ನು ಬಿಟ್ಟರೆ, ಬಾಂಗ್ಲಾ ತಂಡದ ಬ್ಯಾಟಿಂಗ್ ವಿಭಾಗ ಬಿಗ್ ಇನ್ನಿಂಗ್ಸ್ ಆಡುವಲ್ಲಿ ಯಶ ಕಾಣಲಿಲ್ಲ.  ನಾಯಕ ಸೈಫ್ ಹಸನ್ 22 ರನ್​ಗಳಿಗೆ ಸುಸ್ತಾದರೆ, ಮಹಮ್ಮದುಲ್ ಹಸನ್ ಜಾಯ್ 20 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರು. ಅಂತಿಮವಾಗಿ  ಬಾಂಗ್ಲಾ ತಂಡ ಸಂಪೂರ್ಣ 50 ಓವರ್​ಗಳನ್ನು ಆಡಲು ಸಾಧ್ಯವಾಗದೆ, 35ನೇ ಓವರ್​ನಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 160 ರನ್​ಗಳಿಗೆ ಆಲೌಟ್ ಆಯಿತು. ಇನ್ನು ಟೀಂ ಇಂಡಿಯಾ ಪರ ಬೌಲಿಂಗ್​ನಲ್ಲಿ ಮಿಂಚಿದ ನಿಶಾಂತ್ ಸಿಂಧು 20 ರನ್ ನೀಡಿ 5 ವಿಕೆಟ್ ಪಡೆದರೆ ಸುತಾರ್ 32 ರನ್ ನೀಡಿ 3 ವಿಕೆಟ್ ಪಡೆದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:38 pm, Fri, 21 July 23