ನ್ಯೂಜಿಲೆಂಡ್ ವಿರುದ್ದದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ರೋಚಕ ಗೆಲುವು ದಾಖಲಿಸಿದೆ. ಪಂದ್ಯದ ಐದನೇ ದಿನ (ENG vs NZ) ನ್ಯೂಜಿಲೆಂಡ್ 72 ಓವರ್‌ಗಳಲ್ಲಿ 299 ರನ್‌ಗಳ ಗುರಿ ನೀಡಿತ್ತು. ಈ ಬೃಹತ್ ಗುರಿ ಬೆನ್ನತ್ತಿದ ಬೆನ್ ಸ್ಟೋಕ್ಸ್ ನೇತೃತ್ವದ ತಂಡ ಕೇವಲ 50 ಓವರ್‌ಗಳಲ್ಲಿ ಚೇಸ್ ಮಾಡಿ ಗೆಲುವು ದಾಖಲಿಸಿದೆ. ಅಂದರೆ 22 ಓವರ್‌ಗಳನ್ನು ಉಳಿಸಿ ಇಂಗ್ಲೆಂಡ್ ಅಮೋಘ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಜಾನಿ ಬೈರ್‌ಸ್ಟೋವ್ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 92 ಎಸೆತಗಳಲ್ಲಿ 136 ರನ್ಗಳಿಸಿದರೆ, ಸ್ಟೋಕ್ಸ್ 70 ಎಸೆತಗಳಲ್ಲಿ 75 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ತಂಡ 2-0 ಮುನ್ನಡೆ ಸಾಧಿಸಿದೆ. ನಾಯಕನಾಗಿ ಬೆನ್ ಸ್ಟೋಕ್ಸ್‌ಗೆ ಇದು ಮೊದಲ ಟೆಸ್ಟ್ ಸರಣಿ ಗೆಲುವಾಗಿದೆ.
ವಿಶೇಷ ಎಂದರೆ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಈ ಟೆಸ್ಟ್‌ನಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳ ಮೂಲಕ 1000 ಸಾವಿರಕ್ಕೂ ಹೆಚ್ಚು ರನ್ ಮೂಡಿಬಂದಿದೆ. 1877 ರಿಂದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ, ಟೆಸ್ಟ್‌ನಲ್ಲಿ ಬೌಂಡರಿಯಿಂದ 1044 ರನ್ ಗಳಿಸಲಾಗಿದೆ. ಈ ಪಂದ್ಯದಲ್ಲಿ 225 ಬೌಂಡರಿ ಹಾಗೂ 24 ಸಿಕ್ಸರ್‌ಗಳು ಮೂಡಿಬಂದಿದ್ದವು. ಈ ಮೂಲಕ ಟೀಮ್ ಇಂಡಿಯಾ ದಾಖಲೆ ಮುರಿದಿದೆ. ಇದಕ್ಕೂ ಮುನ್ನ 2004ರಲ್ಲಿ ಸಿಡ್ನಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಟೆಸ್ಟ್‌ನಲ್ಲಿ ಬೌಂಡರಿಯಿಂದ 976 ರನ್ ಗಳಿಸಲಾಗಿತ್ತು. ಆ ಪಂದ್ಯದಲ್ಲಿ 238 ಬೌಂಡರಿ ಹಾಗೂ 4 ಸಿಕ್ಸರ್‌ಗಳಿದ್ದವು. ಆದರೂ ಆ ಪಂದ್ಯ ಡ್ರಾ ಆಗಿತ್ತು. ಇದೀಗ ಬೌಂಡರಿಗಳ ಮೂಲಕವೇ 1000 ರನ್ ಕಲೆಹಾಕುವ ಮೂಲಕ ಇಂಗ್ಲೆಂಡ್-ನ್ಯೂಜಿಲೆಂಡ್ ಬ್ಯಾಟ್ಸ್ಮನ್ಗಳು ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಈ ಪಂದ್ಯದಲ್ಲಿ ಒಟ್ಟು 1675 ರನ್ ಗಳಿಸಲಾಗಿತ್ತು. ಇದು ಇಂಗ್ಲೆಂಡ್‌ನಲ್ಲಿ ಟೆಸ್ಟ್‌ನಲ್ಲಿ ಮೂಡಿಬಂದ ಎರಡನೇ ಅತಿ ಹೆಚ್ಚು ರನ್ ದಾಖಲೆಯಾಗಿದೆ. ಇದಕ್ಕೂ ಮುನ್ನ 1948ರಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಪಂದ್ಯದಲ್ಲಿ 1723 ರನ್ ಗಳಿಸಲಾಗಿತ್ತು. ಅಂದರೆ, 74 ವರ್ಷಗಳ ನಂತರ ಮತ್ತೊಮ್ಮೆ ರನ್ ಮಳೆ ಹರಿದಿದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 553 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 284 ರನ್ ಗಳಿಸಿತ್ತು. ಹಾಗೆಯೇ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 539 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗೆ 299 ರನ್ ಗಳಿಸಿತು. ಇನ್ನು ಈ ಪಂದ್ಯದಲ್ಲಿ 5 ಶತಕಗಳಿದ್ದವು ಎಂಬುದು ವಿಶೇಷ.
ಈ ಸರಣಿಯು ಇಂಗ್ಲೆಂಡ್‌ಗೆ ಮಹತ್ವದ್ದಾಗಿತ್ತು. ಏಕೆಂದರೆ ಮೊದಲು ಜೋ ರೂಟ್ ಆಶಸ್ ಸರಣಿಯಲ್ಲಿ ಕಳಪೆ ಪ್ರದರ್ಶನ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಸೋಲಿನ ನಂತರ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಅವರ ಸ್ಥಾನದಲ್ಲಿ ಬೆನ್ ಸ್ಟೋಕ್ಸ್ ನಾಯಕನಾಗಿ ಆಯ್ಕೆಯಾಗಿದ್ದರು. ಅಲ್ಲದೆ ನ್ಯೂಜಿಲೆಂಡ್‌ನ ಮಾಜಿ ನಾಯಕ ಬ್ರೆಂಡನ್ ಮೆಕಲಮ್ ಅವರು ಇಂಗ್ಲೆಂಡ್ ಟೆಸ್ಟ್ ತಂಡದ ನೂತನ ಕೋಚ್ ಆಗಿ ನೇಮಕಗೊಂಡಿದ್ದರು. ಇದೀಗ ಕೊನೆಯ ದಿನ 299 ರನ್‌ಗಳ ಬೃಹತ್ ಟಾರ್ಗೆಟ್ ಅನ್ನು ಬೆನ್ನತ್ತುವ ಮೂಲಕ ಇಂಗ್ಲೆಂಡ್ ತಂಡವು ಭರ್ಜರಿ ಗೆಲುವು ದಾಖಲಿಸಿ ಇತಿಹಾಸ ನಿರ್ಮಿಸಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.