Ishan Kishan: ಕೆಣಕಿದ ಶಮ್ಸಿಗೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ ಇಶಾನ್ ಕಿಶನ್
Ishan Kishan: ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ನಾಯಕ ಬವುಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ರುತುರಾಜ್ ಗಾಯಕ್ವಾಡ್ (54) ಹಾಗೂ ಇಶಾನ್ ಕಿಶನ್ (54) ಅವರ ಅರ್ಧಶತಕದ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 179 ರನ್ ಕಲೆಹಾಕಿತು.
ಸೌತ್ ಆಫ್ರಿಕಾ ವಿರುದ್ದದ ಮೂರನೇ ಟಿ20 ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ (Team India) ಸರಣಿಯನ್ನು ಜೀವಂತವಾಗಿರಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಇಶಾನ್ ಕಿಶನ್ (Ishan Kishan) ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಕಿಶನ್ ಕೇವಲ 35 ಎಸೆತಗಳಲ್ಲಿ 54 ರನ್ ಗಳಿಸುವ ಮೂಲಕ ಭಾರತ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಈ ಭರ್ಜರಿ ಇನ್ನಿಂಗ್ಸ್‌ನಲ್ಲಿ ಯುವ ಆಟಗಾರನ ಬ್ಯಾಟ್ನಿಂದ 5 ಬೌಂಡರಿ ಹಾಗೂ 3 ಸಿಕ್ಸರ್‌ಗಳು ಮೂಡಿಬಂದಿತ್ತು. ಹೀಗೆ ಬಾರಿಸಿದ ಒಂದು ಸಿಕ್ಸ್ ಸೌತ್ ಆಫ್ರಿಕಾ ಸ್ಪಿನ್ನರ್ ತಬ್ರೇಝ್ ಶಮ್ಸಿ ಮತ್ತು ಇಶಾನ್ ನಡುವಿನ ವಾಗ್ವಾದಕ್ಕೆ ಕಾರಣವಾಗಿತ್ತು.
9ನೇ ಓವರ್ ನಲ್ಲಿ ಶಮ್ಸಿ ಬೌಲಿಂಗ್ ಮಾಡಲು ಬಂದಾಗ ರುತುರಾಜ್ ಗಾಯಕ್ವಾಡ್ ಬ್ಯಾಟಿಂಗ್ ಮಾಡುತ್ತಿದ್ದರು. ಗಾಯಕ್ವಾಡ್ ಸಿಂಗಲ್ ತೆಗೆದುಕೊಂಡು ಇಶಾನ್ ಕಿಶನ್ಗೆ ಸ್ಟ್ರೈಕ್ ನೀಡಿದರು. ಸ್ಟ್ರೈಕ್ ತಲುಪಿದ ಕಿಶನ್, ಶಮ್ಸಿ ಅವರ ಓವರ್‌ಪಿಚ್ ಎಸೆತದಲ್ಲಿ ಸ್ಲಾಗ್ ಸ್ವೀಪ್‌ನೊಂದಿಗೆ ಭರ್ಜರಿ ಸಿಕ್ಸರ್ ಬಾರಿಸಿದರು. ಇದಾದ ನಂತರ, ಶಮ್ಸಿಯ ಫುಲ್ ಟಾಸ್ ಎಸೆತವನ್ನು ರಿವರ್ಸ್ ಸ್ವೀಪ್ ಮಾಡಲು ಯತ್ನಿಸಿದ್ದರು. ಇದೇ ವೇಳೆ ಮುಂದಕ್ಕೆ ಬಂದ ತಬ್ರೇಝ್ ಶಮ್ಸಿ ಇಶಾನ್ ಅವರನ್ನು ಕೆಣಕಿದ್ದಾರೆ. ಇದಕ್ಕೆ ಇಶಾನ್ ಕಿಶನ್ ಕೂಡ ತಕ್ಷಣವೇ ಪ್ರತಿಕ್ರಿಯಿಸಿದ್ದಾರೆ.
ಇದಾದ ಬಳಿಕ ಬ್ಯಾಟಿಂಗ್ ಮೂಲಕ ಉತ್ತರ ನೀಡಿದ ಕಿಶನ್ ಕೇವಲ 31 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಅಲ್ಲದೆ ಮತ್ತೆ ಬೌಲಿಂಗ್ಗೆ ಬಂದ ಶಮ್ಸಿ ಅವರ ಓವರ್‌ನಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ ಸೇಡು ತೀರಿಸಿಕೊಂಡರು. ಇಶಾನ್ ಕಿಶನ್ ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ ಸವಾಲಿನ ಸ್ಕೋರ್ಗಳಿಸುವಂತಾಯಿತು.
— Guess Karo (@KuchNahiUkhada) June 14, 2022
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ನಾಯಕ ಬವುಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ರುತುರಾಜ್ ಗಾಯಕ್ವಾಡ್ (54) ಹಾಗೂ ಇಶಾನ್ ಕಿಶನ್ (54) ಅವರ ಅರ್ಧಶತಕದ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 179 ರನ್ ಕಲೆಹಾಕಿತು.
ಈ ಸ್ಪರ್ಧಾತ್ಮಕ ಸವಾಲನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಟೀಮ್ ಇಂಡಿಯಾ ಬೌಲರ್ಗಳ ಮುಂದೆ ರನ್ಗಳಿಸಲು ಪರದಾಡಿದ ಆಫ್ರಿಕನ್ನರು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು. ಪರಿಣಾಮ 100 ರನ್ಗಳಿಸುವಷ್ಟರಲ್ಲಿ ಪ್ರಮುಖ 6 ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ 19.1 ಓವರ್‌ನಲ್ಲಿ ಸೌತ್ ಆಫ್ರಿಕಾ ತಂಡವು 131 ರನ್ಗಳಿಗೆ ಸರ್ವಪತನ ಕಾಣುವ ಮೂಲಕ 48 ರನ್ಗಳಿಂದ ಸೋಲೊಪ್ಪಿಕೊಂಡಿತು.
ಟೀಮ್ ಇಂಡಿಯಾ ಪರ 4 ಓವರ್ಗಳಲ್ಲಿ 20 ರನ್ ನೀಡಿ ಯುಜ್ವೇಂದ್ರ ಚಹಾಲ್ 3 ವಿಕೆಟ್ ಪಡೆದರೆ, ಹರ್ಷಲ್ ಪಟೇಲ್ 3.1 ಓವರ್‌ನಲ್ಲಿ 25 ರನ್ ನೀಡಿ 4 ವಿಕೆಟ್ ಕಬಳಿಸಿದರು. ಈ ಜಯದೊಂದಿಗೆ ಟೀಮ್ ಇಂಡಿಯಾ ಗೆಲುವಿನ ಲಯಕ್ಕೆ ಮರಳಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.