AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ENG vs WI: ಸತತ ಎರಡನೇ ಟಿ20 ಗೆದ್ದ ವಿಂಡೀಸ್​; ಸರಣಿ ಸೋಲುವ ಭೀತಿಯಲ್ಲಿ ಇಂಗ್ಲೆಂಡ್..!

ENG vs WI: ಗುರುವಾರ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 10 ರನ್​ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿತು. ಈ ಗೆಲುವಿನೊಂದಿಗೆ ವೆಸ್ಟ್ ಇಂಡೀಸ್ ತಂಡ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

ENG vs WI: ಸತತ ಎರಡನೇ ಟಿ20 ಗೆದ್ದ ವಿಂಡೀಸ್​; ಸರಣಿ ಸೋಲುವ ಭೀತಿಯಲ್ಲಿ ಇಂಗ್ಲೆಂಡ್..!
ವೆಸ್ಟ್ ಇಂಡೀಸ್- ಇಂಗ್ಲೆಂಡ್
ಪೃಥ್ವಿಶಂಕರ
|

Updated on: Dec 15, 2023 | 10:29 AM

Share

2024 ರ ಟಿ20 ವಿಶ್ವಕಪ್ (T20 World Cup 2023) ಅನ್ನು ಗಮನದಲ್ಲಿಟ್ಟುಕೊಂಡು, ಬಹುತೇಕ ಎಲ್ಲಾ ತಂಡಗಳು ಟಿ20 ಕ್ರಿಕೆಟ್‌ನತ್ತ ಗಮನಹರಿಸುತ್ತಿವೆ. ಇದೇ ವೇಳೆ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ (West Indies vs England) ನಡುವೆ ಟಿ20 ಸರಣಿ ಕೂಡ ಆಯೋಜಿಸಲಾಗಿದೆ. ಗುರುವಾರ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 10 ರನ್​ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿತು. ಈ ಗೆಲುವಿನೊಂದಿಗೆ ವೆಸ್ಟ್ ಇಂಡೀಸ್ ತಂಡ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 176 ರನ್​ಗಳ ಟಾರ್ಗೆಸ್ ಸೆಟ್ ಮಾಡಿತು. ಇದರ ಬೆನ್ನತ್ತಿದ ಇಂಗ್ಲೆಂಡ್ ತಂಡ 166 ರನ್ ಬಾರಿಸಲಷ್ಟೇ ಶಕ್ತವಾಗಿ 10 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಕಿಂಗ್ ಅಬ್ಬರದ ಇನ್ನಿಂಗ್ಸ್

ಇಂಗ್ಲೆಂಡ್‌ನ ಗ್ರೆನಡಾದ ಸೇಂಟ್ ಜಾರ್ಜ್‌ನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 176 ರನ್ ಗಳಿಸಿತು. ತಂಡದ ಪರ ಬ್ರಾಂಡನ್ ಕಿಂಗ್ 52 ಎಸೆತಗಳಲ್ಲಿ 157.69 ಸ್ಟ್ರೈಕ್ ರೇಟ್‌ನಲ್ಲಿ 82 ರನ್‌ಗಳ ಅಜೇಯ ಇನ್ನಿಂಗ್ಸ್ ಅನ್ನು ಆಡಿದರು. ಇದರಲ್ಲಿ ಕಿಂಗ್ ಎಂಟು ಬೌಂಡರಿ ಮತ್ತು ಐದು ಸಿಕ್ಸರ್‌ಗಳನ್ನು ಸಹ ಹೊಡೆದರು. ಕಿಂಗ್ ಅವರ ಇನ್ನಿಂಗ್ಸ್‌ನಿಂದಾಗಿ ವೆಸ್ಟ್ ಇಂಡೀಸ್ ಈ ಸ್ಕೋರ್ ಗಳಿಸಿತು.

ENG vs WI: ವಿವ್ ರಿಚರ್ಡ್ಸ್ ಮತ್ತು ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶಾಯ್ ಹೋಪ್

ಈ ಪಂದ್ಯದಲ್ಲಿ ಕಿಂಗ್‌ಗೆ ಅಗ್ರ ಅಥವಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಂದ ಹೆಚ್ಚಿನ ಬೆಂಬಲ ಸಿಕ್ಕಿದ್ದರೆ ವಿಂಡೀಸ್ ಹೆಚ್ಚು ರನ್ ಗಳಿಸಬಹುದಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಆದಾಗ್ಯೂ, ಇನ್ನಿಂಗ್ಸ್‌ನ ಮಧ್ಯದಲ್ಲಿ ನಾಯಕ ರೋವ್‌ಮನ್ ಪೊವೆಲ್ ಅವರು 28 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಐದು ಸಿಕ್ಸರ್‌ಗಳ ನೆರವಿನಿಂದ 50 ರನ್​ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ಸಿಕ್ಸರ್​ನೊಂದಿಗೆ ಅರ್ಧಶತಕ ಪೂರೈಸಿದ ಪೊವೆಲ್, ಮುಂದಿನ ಎಸೆತದಲ್ಲಿ ಸಿಕ್ಸರ್ ಹೊಡೆಯುವ ಪ್ರಯತ್ನದಲ್ಲಿ ಔಟಾದರು.

ಮತ್ತೊಮ್ಮೆ ಎಡವಿದ ಇಂಗ್ಲೆಂಡ್

ವೆಸ್ಟ್ ಇಂಡೀಸ್ ನೀಡಿದ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಆರಂಭದಲ್ಲೇ ಹಿನ್ನಡೆ ಅನುಭವಿಸಿತು. ನಾಯಕ ಜೋಸ್ ಬಟ್ಲರ್ ಐದು ರನ್‌ಗಳ ವೈಯಕ್ತಿಕ ಸ್ಕೋರ್‌ನಲ್ಲಿ ಅಕೆಲ್ ಹೊಸೈನ್‌ಗೆ ವಿಕೆಟ್ ನೀಡಿದರು. ವಿಲ್ ಜಾಕ್ವೆಸ್ ಮತ್ತು ಫಿಲ್ ಸಾಲ್ಟ್ ಎರಡನೇ ವಿಕೆಟ್‌ಗೆ 46 ರನ್ ಸೇರಿಸಿದರು. ಆದರೆ ಅದಕ್ಕಾಗಿ ಅವರು 32 ಎಸೆತಗಳನ್ನು ಎದುರಿಸಬೇಕಾಯಿತು. ಇದಾದ ನಂತರ ಇಬ್ಬರೂ ಆಟಗಾರರು ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ ಸೇರಿಕೊಂಡರು. ಇದು ಆಂಗ್ಲರ ಬ್ಯಾಟಿಂಗ್ ಕ್ರಮಾಂಕದ ಮೇಲೆ ಒತ್ತಡ ಹೇರಿತು.

ತಂಡದ ಪರ ಸ್ಯಾಮ್ ಕರನ್ ಅದ್ಭುತ ಅರ್ಧಶತಕ ಗಳಿಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಕೆಳ ಕ್ರಮಾಂಕದಲ್ಲಿ ಮೊಯಿನ್ ಅಲಿ ಕೂಡ ಗೆಲುವಿಗಾಗಿ ಹೋರಾಡಿದರಾದರೂ ಇಂಗ್ಲೆಂಡ್ ತಂಡವನ್ನು 166 ರನ್‌ಗಳಿಗಿಂತ ಮುಂದಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಸದ್ಯ ಇಂಗ್ಲೆಂಡ್ ಸತತ 2 ಪಂದ್ಯಗಳನ್ನು ಸೋತಿದೆಯಾದರೂ, ಸರಣಿಯಲ್ಲಿ ಪುನರಾಗಮನ ಮಾಡುವ ಅವಕಾಶ ಆಂಗ್ಲರಿಗಿದೆ. ಈಗಾಗಲೇ ಏಕದಿನ ಸರಣಿ ಸೋತಿರುವ ಇಂಗ್ಲೆಂಡ್​ಗೆ ಟಿ20 ಸರಣಿಯ ಗೆಲುವು ಬಹಳ ಮುಖ್ಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ