IND vs ENG: ಭಾರತ ವಿರುದ್ಧದ ಏಕದಿನ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ
India vs England Women's Cricket: ಭಾರತದ ಮಹಿಳಾ ಕ್ರಿಕೆಟ್ ತಂಡ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಟಿ20 ಮತ್ತು ಏಕದಿನ ಸರಣಿಯಲ್ಲಿ ಭಾಗವಹಿಸುತ್ತಿದೆ. ಟಿ20 ಸರಣಿಯಲ್ಲಿ ಭಾರತ 2-1 ಅಂತರದಿಂದ ಮುನ್ನಡೆಯಲ್ಲಿದೆ. ಟಿ20 ಸರಣಿಯ ಬಳಿಕ ಏಕದಿನ ಸರಣಿ ನಡೆಯಲಿದ್ದು, ಈ ಸರಣಿಗಾಗಿ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ.

ಟಿ20 ಹಾಗೂ ಏಕದಿನ ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಮಾಡಿರುವ ಭಾರತ ಮಹಿಳಾ ತಂಡ (India vs England Women’s Cricket:) ಪ್ರಸ್ತುತ ಟಿ20 ಸರಣಿಯಲ್ಲಿ ನಿರತವಾಗಿದೆ. ಉಭಯ ತಂಡಗಳ ನಡುವೆ ನಡೆದಿರುವ ಮೂರು ಟಿ20 ಪಂದ್ಯಗಳಲ್ಲಿ ಭಾರತ ತಂಡ 2-1 ಅಂತರದಿಂದ ಮುನ್ನಡೆ ಪಡೆದುಕೊಂಡಿದೆ. ಇಂದು ಅಂದರೆ ಜುಲೈ 9 ರಂದು ಎರಡು ತಂಡಗಳ ನಡುವೆ ನಾಲ್ಕನೇ ಟಿ20 ಪಂದ್ಯ ನಡೆಯಲಿದ್ದು, ಈ ಪಂದ್ಯವನ್ನು ಗೆಲ್ಲುವ ಮೂಲಕ ಇಂಗ್ಲೆಂಡ್ ವಿರುದ್ಧ ಅವರ ನೆಲದಲ್ಲಿ ಮೊದಲ ಬಾರಿಗೆ ಟಿ20 ಸರಣಿ ಗೆದ್ದ ದಾಖಲೆ ಬರೆಯುವ ಇರಾದೆಯಲ್ಲಿ ಟೀಂ ಇಂಡಿಯಾ ಇದೆ. ಈ ಸರಣಿಯ ಬಳಿಕ ಏಕದಿನ ಸರಣಿ ನಡೆಯಲಿದ್ದು, ಈ ಸರಣಿಗಾಗಿ ಇಂಗ್ಲೆಂಡ್ ಮಹಿಳಾ ತಂಡವನ್ನು ಪ್ರಕಟಿಸಲಾಗಿದೆ.
ಜುಲೈ 16 ರಿಂದ ಆರಂಭವಾಗಲಿರುವ ಏಕದಿನ ಸರಣಿಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳು ಮುಖಾಮುಖಿಯಾಗಲಿವೆ. ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಏಕದಿನ ಪಂದ್ಯ ಸೌತಾಂಪ್ಟನ್‌ನ ರೋಸ್ ಬೌಲ್‌ನಲ್ಲಿ ನಡೆಯಲಿದೆ. ಈ ಸರಣಿಗೆ ಇಂಗ್ಲೆಂಡ್ ತನ್ನ ಏಕದಿನ ತಂಡವನ್ನು ಸಹ ಪ್ರಕಟಿಸಿದೆ. ಟಿ20 ಸರಣಿಯ ವೇಳೆ ಗಾಯಕ್ಕೆ ತುತ್ತಾಗಿ ಇಡೀ ಸರಣಿಯಿಂದ ಹೊರಬಿದ್ದಿದ್ದ ನಾಯಕಿ ನ್ಯಾಟ್ ಸಿವರ್ ಬ್ರಂಟ್ ಏಕದಿನ ತಂಡಕ್ಕೆ ಮರಳಿದ್ದಾರೆ.
ನ್ಯಾಟ್ ಸಿವರ್ ಬ್ರಂಟ್ ಲಭ್ಯ
ಬ್ರಿಸ್ಟಲ್‌ನ ಕೌಂಟಿ ಮೈದಾನದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ನ್ಯಾಟ್ ಸಿವರ್ ಬ್ರಂಟ್ ಗಾಯಗೊಂಡರು, ಇದರಿಂದಾಗಿ ಅವರು ಉಳಿದ ಮೂರು ಟಿ20 ಪಂದ್ಯಗಳಿಂದ ಹೊರಗುಳಿದಿದ್ದಾರೆ. ನಾಯಕಿ ನ್ಯಾಟ್ ಸಿವರ್ ಬ್ರಂಟ್ ಗಾಯದ ಕಾರಣದಿಂದಾಗಿ ಟಿ20 ಸರಣಿಯ ಉಳಿದ ಮೂರು ಪಂದ್ಯಗಳಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೂ, ಏಕದಿನ ಸರಣಿಯಲ್ಲಿ ಅವರು ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ ಎಂದು ತಂಡದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಚಾರ್ಲೊಟ್ ಎಡ್ವರ್ಡ್ಸ್ ಮಾತನಾಡಿ, ‘ಈ ಟಿ20 ಸರಣಿಯಲ್ಲಿ ಭಾರತ ನಮ್ಮ ಮೇಲೆ ಹೆಚ್ಚಿನ ಒತ್ತಡ ಹೇರಿದೆ. ಇಲ್ಲಿಯವರೆಗೆ ಆಡಿದ ಮೂರು ಪಂದ್ಯಗಳಲ್ಲಿ, ನಾವು ಒಂದು ತಂಡವಾಗಿ ಬಹಳಷ್ಟು ಕಲಿತಿದ್ದೇವೆ. ನಾವು ಒಂದು ತಂಡವಾಗಿ ಕಠಿಣ ಪರಿಶ್ರಮ ಪಡಬೇಕು ಮತ್ತು ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡಬೇಕು. ಅದೇ ರೀತಿ, ಏಕದಿನ ಸರಣಿಯಲ್ಲಿಯೂ ನಮ್ಮ ಆಟಗಾರ್ತಿಯರಿಂದ ನಮಗೆ ನಿರೀಕ್ಷೆಗಳಿರುತ್ತವೆ. ಬ್ರಂಟ್ ಜೊತೆಗೆ, ಸೋಫಿ ಎಕ್ಲೆಸ್ಟೋನ್ ಮತ್ತು ಮಾಯಾ ಬೌಚರ್ ಅವರನ್ನು ಇಂಗ್ಲೆಂಡ್ ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದಿದ್ದಾರೆ.
ODI Cricket on the horizon 👀
Our squad to play India has just dropped 👇
— England Cricket (@englandcricket) July 8, 2025
ಏಕದಿನ ಸರಣಿಯ ವೇಳಾಪಟ್ಟಿ
ಉಭಯ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯ ಜುಲೈ 16 ರಂದು ನಡೆಯಲಿದ್ದು, ಎರಡನೇ ಪಂದ್ಯ ಜುಲೈ 19 ರಂದು ಲಂಡನ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೂರನೇ ಮತ್ತು ಕೊನೆಯ ಪಂದ್ಯ ಜುಲೈ 22 ರಂದು ಚೆಸ್ಟರ್-ಲೆ-ಸ್ಟ್ರೀಟ್‌ನ ರಿವರ್‌ಸೈಡ್ ಮೈದಾನದಲ್ಲಿ ನಡೆಯಲಿದೆ. ಟಿ20 ಸರಣಿಯ ಬಗ್ಗೆ ಹೇಳುವುದಾದರೆ, ಇಲ್ಲಿಯವರೆಗೆ ಎರಡೂ ತಂಡಗಳ ನಡುವೆ ಮೂರು ಪಂದ್ಯಗಳು ನಡೆದಿದ್ದು, ಟೀಂ ಇಂಡಿಯಾ 2-1 ಮುನ್ನಡೆಯಲ್ಲಿದೆ. ಇಂಗ್ಲೆಂಡ್ ಮತ್ತು ಭಾರತ ನಡುವಿನ ನಾಲ್ಕನೇ ಟಿ20 ಪಂದ್ಯ ಜುಲೈ 9 ರಂದು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇಂಗ್ಲೆಂಡ್ ಏಕದಿನ ತಂಡ ಇಂತಿದೆ:
ನ್ಯಾಟ್ ಸಿವರ್ ಬ್ರಂಟ್ (ನಾಯಕಿ), ಎಂ ಆರ್ಲಾಟ್, ಸೋಫಿಯಾ ಡಂಕ್ಲಿ, ಎಮ್ಮಾ ಲ್ಯಾಂಬ್, ಟ್ಯಾಮಿ ಬ್ಯೂಮಾಂಟ್ (ವಿಕೆಟ್ ಕೀಪರ್), ಆಮಿ ಜೋನ್ಸ್ (ವಿಕೆಟ್ ಕೀಪರ್), ಮಾಯಾ ಬೌಚರ್, ಆಲಿಸ್ ಕ್ಯಾಪ್ಸಿ, ಕೇಟ್ ಕ್ರಾಸ್, ಆಲಿಸ್ ಡೇವಿಡ್ಸನ್-ರಿಚರ್ಡ್ಸ್, ಚಾರ್ಲಿ ಡೀನ್, ಸೋಫಿ ಎಕ್ಲೆಸ್ಟೋನ್, ಲಾರೆನ್ ಫಿಲ್ಲರ್, ಲಿನ್ಸೆ ಸ್ಮಿತ್, ಲಾರೆನ್ ಬೆಲ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
