IND vs ENG: ಲಾರ್ಡ್ಸ್ ಟೆಸ್ಟ್ ಪಂದ್ಯಕ್ಕೆ ಪ್ಲೇಯಿಂಗ್ 11 ಪ್ರಕಟಿಸಿದ ಇಂಗ್ಲೆಂಡ್; ತಂಡದಲ್ಲಿ 1 ಬದಲಾವಣೆ
England Announces Playing XI for Lords Test: ಎಡ್ಜ್‌ಬಾಸ್ಟನ್‌ನಲ್ಲಿನ ಸೋಲಿನ ನಂತರ, ಲಾರ್ಡ್ಸ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್‌ಗಾಗಿ ಇಂಗ್ಲೆಂಡ್ ತನ್ನ ಆಡುವ ಹನ್ನೊಂದರ ಬಳಗನ್ನು ಘೋಷಿಸಿದೆ. ಇದರೊಂದಿಗೆ ನಾಲ್ಕು ವರ್ಷಗಳ ನಂತರ ಜೋಫ್ರಾ ಆರ್ಚರ್ ಟೆಸ್ಟ್ ಕ್ರಿಕೆಟ್‌ಗೆ ಮರಳಿದ್ದಾರೆ. ಅತಿ ಹೆಚ್ಚು ವಿಕೆಟ್ ಪಡೆದ ಜೋಶ್ ಟಂಗ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಆರ್ಚರ್ ಮತ್ತು ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ಭಾರತದ ವಿರುದ್ಧ ಸರಣಿಯಲ್ಲಿ ಮತ್ತೆ ಗೆಲ್ಲಲು ಪ್ರಯತ್ನಿಸಲಿದೆ.

ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ (Team India) ವಿರುದ್ಧ ಹೀನಾಯವಾಗಿ ಸೋತಿದ್ದ ಆತಿಥೇಯ ಇಂಗ್ಲೆಂಡ್ ತಂಡ ನಾಳೆಯಿಂದ ಅಂದರೆ ಜುಲೈ 10 ರಿಂದ ಲಾರ್ಡ್ಸ್‌ನಲ್ಲಿ (Lords Test) ನಡೆಯಲ್ಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೆ ಭರ್ಜರಿ ತಯಾರಿ ನಡೆಸುತ್ತಿದೆ. ಕೆಲವು ದಿನಗಳ ಹಿಂದೆ ಈ ಪಂದ್ಯಕ್ಕೆ 16 ಸದಸ್ಯರ ತಂಡವನ್ನು ಪ್ರಕಟಿಸಿದ್ದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಇದೀಗ ಮೂರನೇ ಟೆಸ್ಟ್ ಪಂದ್ಯಕ್ಕೆ ತನ್ನ ಆಡುವ ಹನ್ನೊಂದರ ಬಳಗವನ್ನು ಘೋಷಿಸಿದೆ. ನಿರೀಕ್ಷೆಯಂತೆ ತಂಡದಲ್ಲಿ ಒಂದು ಬದಲಾವಣೆಯನ್ನು ಮಾಡಲಾಗಿದ್ದು, 4 ವರ್ಷಗಳ ನಂತರ ಸ್ಟಾರ್ ವೇಗದ ಬೌಲರ್ ಜೋಫ್ರಾ ಆರ್ಚರ್ (Jofra Archer) ಟೆಸ್ಟ್ ಕ್ರಿಕೆಟ್‌ಗೆ ಮರಳುತ್ತಿದ್ದಾರೆ.
ಜೋಪ್ರಾ ಆರ್ಚರ್ ಆಗಮನ
ಜನವರಿ 9 ರ ಬುಧವಾರ, ಟೆಸ್ಟ್ ಸರಣಿಯ ಮೂರನೇ ಪಂದ್ಯಕ್ಕೆ ಒಂದು ದಿನ ಮೊದಲು, ಇಂಗ್ಲೆಂಡ್ ಕ್ರಿಕೆಟ್ ತಂಡವು ಲಾರ್ಡ್ಸ್‌ನಲ್ಲಿ ನಡೆಯಲಿರುವ ಐತಿಹಾಸಿಕ ಪಂದ್ಯಕ್ಕಾಗಿ ತನ್ನ ಪ್ಲೇಯಿಂಗ್-11 ಘೋಷಿಸಿದೆ. ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿನ ಸೋಲಿನ ನಂತರ ಇಂಗ್ಲೆಂಡ್ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆ ತರುವುದು ಖಚಿತ ಎಂದು ವರದಿಯಾಗಿತ್ತು. ಆದರೆ ಯಾವ ಆಟಗಾರನಿಗೆ ತಂಡದಿಂದ ಕೋಕ್ ನೀಡಿ ಯಾವ ಆಟಗಾರನಿಗೆ ಅವಕಾಶ ನೀಡಲಾಗುತ್ತದೆ ಎಂಬ ಕುತೂಹಲವಿತ್ತು. ಏಕೆಂದರೆ ಆರ್ಚರ್ ಹೊರತುಪಡಿಸಿ, ಮತ್ತೊಬ್ಬ ವೇಗಿ ಗಸ್ ಅಟ್ಕಿನ್ಸನ್ ಅವರನ್ನು ಮೂರನೇ ಟೆಸ್ಟ್ ಪಂದ್ಯಕ್ಕೆ ತಂಡದಲ್ಲಿ ಆಯ್ಕೆ ಮಾಡಲಾಗಿತ್ತು. ಆದರೆ ಅನುಭವಕ್ಕೆ ಹೆಚ್ಚು ಒತ್ತು ನೀಡಿರುವ ಆಯ್ಕೆ ಮಂಡಳಿ ಆರ್ಚರ್ಗೆ ಅವಕಾಶ ನೀಡಿದೆ.
One change for Lord’s 🔁 After a four year wait… Jofra returns to Test Cricket 😍
— England Cricket (@englandcricket) July 9, 2025
ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್
ಸ್ಟೋಕ್ಸ್ ಮತ್ತು ಮೆಕಲಮ್ ಜೋಡಿ ಆರ್ಚರ್ ಮೇಲೆ ಬೌಲಿಂಗ್ ವಿಭಾಗದ ಜವಾಬ್ದಾರಿ ನೀಡಲು ನಿರ್ಧರಿಸಿದೆ. ಇದರೊಂದಿಗೆ, ಆರ್ಚರ್ ಸುಮಾರು 4 ವರ್ಷ ಮತ್ತು 5 ತಿಂಗಳ ನಂತರ ಟೆಸ್ಟ್ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ಪ್ರಾಸಂಗಿಕವಾಗಿ, ಆರ್ಚರ್ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಇದೇ ಟೀಂ ಇಂಡಿಯಾ ವಿರುದ್ಧ 2021 ರ ಫೆಬ್ರವರಿಯಲ್ಲಿ ಅಹಮದಾಬಾದ್ನಲ್ಲಿ ಆಡಿದ್ದರು.
IND vs ENG: ಸೋಲಿನ ಬೆನ್ನಲ್ಲೇ ಲಾರ್ಡ್ಸ್ ಟೆಸ್ಟ್‌ಗೆ ತಂಡ ಪ್ರಕಟಿಸಿದ ಇಂಗ್ಲೆಂಡ್; ಘಾತುಕ ವೇಗಿಯ ಆಗಮನ
ಜೋಶ್ ಟಂಗ್ ಔಟ್
ಆದರೆ ಅಚ್ಚರಿಯ ವಿಷಯವೆಂದರೆ ಆರ್ಚರ್ ಬದಲಿಗೆ ಲಾರ್ಡ್ಸ್ ಟೆಸ್ಟ್ನಿಂದ ಹೊರಬಿದ್ದಿರುವ ಮತ್ತೊಬ್ಬ ವೇಗಿ, ಈ ಸರಣಿಯಲ್ಲಿ ಇದುವರೆಗೆ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ಆದಾಗ್ಯೂ ಅವರನ್ನು ತಂಡದಿಂದ ಕೈಬಿಡಲಾಗಿದೆ. ವಾಸ್ತವವಾಗಿ ಲಾರ್ಡ್ಸ್ ಟೆಸ್ಟ್ನಿಂದ ಯುವ ವೇಗಿ ಜೋಶ್ ಟಂಗ್ ಅವರನ್ನು ಹೊರಗಿಡಲು ಇಂಗ್ಲೆಂಡ್ ತಂಡ ನಿರ್ಧರಿಸಿದೆ. ಈ ಸರಣಿಯಲ್ಲಿ ಇದುವರೆಗೆ ಟಂಗ್ ಅತಿ ಹೆಚ್ಚು ಅಂದರೆ 11 ವಿಕೆಟ್ ಪಡೆದಿದ್ದಾರೆ. ಆದಾಗ್ಯೂ, ಲೈನ್-ಲೆಂಗ್ತ್ ಮೇಲೆ ಅವರಿಗೆ ನಿಯಂತ್ರಣವಿಲ್ಲ. ಇದರಿಂದಾಗಿ ಅವರು ಎರಡು ಪಂದ್ಯಗಳಲ್ಲಿ ಸಾಕಷ್ಟು ರನ್ ಬಿಟ್ಟುಕೊಟ್ಟದ್ದರು. ಹೀಗಾಗಿ ಅವರನ್ನು ಹೊರಗಿಡಲಾಗಿದೆ.
ಲಾರ್ಡ್ಸ್ ಟೆಸ್ಟ್‌ಗೆ ಇಂಗ್ಲೆಂಡ್ ಪ್ಲೇಯಿಂಗ್ 11: ಬೆನ್ ಸ್ಟೋಕ್ಸ್ (ನಾಯಕ), ಬೆನ್ ಡಕೆಟ್, ಜ್ಯಾಕ್ ಕ್ರಾಲಿ, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಜೇಮೀ ಸ್ಮಿತ್, ಕ್ರಿಸ್ ವೋಕ್ಸ್, ಬ್ರೈಡನ್ ಕಾರ್ಸೆ, ಜೋಫ್ರಾ ಆರ್ಚರ್, ಶೋಯೆಬ್ ಬಶೀರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:44 pm, Wed, 9 July 25
