IND vs ENG: ಸೋಲಿನ ಬೆನ್ನಲ್ಲೇ ಲಾರ್ಡ್ಸ್ ಟೆಸ್ಟ್‌ಗೆ ತಂಡ ಪ್ರಕಟಿಸಿದ ಇಂಗ್ಲೆಂಡ್; ಘಾತುಕ ವೇಗಿಯ ಆಗಮನ
England Announces Squad for Lord's Test: ಎಡ್ಜ್‌ಬಾಸ್ಟನ್‌ನಲ್ಲಿನ ಸೋಲಿನ ಬಳಿಕ, ಲಾರ್ಡ್ಸ್‌ನಲ್ಲಿ ನಡೆಯುವ ಮೂರನೇ ಟೆಸ್ಟ್‌ಗೆ ಇಂಗ್ಲೆಂಡ್ ತನ್ನ 16 ಸದಸ್ಯರ ತಂಡವನ್ನು ಪ್ರಕಟಿಸಿದೆ. ಗಾಯದಿಂದ ಚೇತರಿಸಿಕೊಂಡ ಗಸ್ ಅಟ್ಕಿನ್ಸನ್ ಮತ್ತು ಕೌಟುಂಬಿಕ ಕಾರಣಗಳಿಂದ ಎರಡನೇ ಟೆಸ್ಟ್ನಿಂದ ಹಿಂದೆ ಸರಿದಿದ್ದ ಜೋಫ್ರಾ ಆರ್ಚರ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ದುರ್ಬಲ ಬೌಲಿಂಗ್‌ನಿಂದ ಬಳಲುತ್ತಿರುವ ಇಂಗ್ಲೆಂಡ್ ತಂಡಕ್ಕೆ ಅಟ್ಕಿನ್ಸನ್ ಆಗಮನ ಆನೆಬಲ ತಂದಿದೆ.

ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದ ಸೋಲಿನ ಬೆನ್ನಲ್ಲೇ ಆತಿಥೇಯ ಇಂಗ್ಲೆಂಡ್ ತಂಡ (England Team) ಜುಲೈ 10 ರಿಂದ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ (Lord’s Test) ನಡೆಯಲ್ಲಿರುವ ಸರಣಿಯ ಮೂರನೇ ಪಂದ್ಯಕ್ಕೆ ತನ್ನ ತಂಡವನ್ನು ಪ್ರಕಟಿಸಿದೆ. ಇಂಗ್ಲೆಂಡ್ ಆಯ್ಕೆಮಾಡಿರುವ ಈ 16 ಸದಸ್ಯರ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಾಗದಿದ್ದರೂ, ಮತ್ತೊಬ್ಬ ವೇಗಿಯನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಎಡ್ಜ್‌ಬಾಸ್ಟನ್ ಟೆಸ್ಟ್ ಮುಗಿದ ಕೆಲವೇ ನಿಮಿಷಗಳಲ್ಲಿ ಮೂರನೇ ಟೆಸ್ಟ್ ಪಂದ್ಯಕ್ಕೆ ತಂಡವನ್ನು ಪ್ರಕಟಿಸಿರುವ ಇಂಗ್ಲೆಂಡ್ ಮಂಡಳಿ ವೇಗದ ಬೌಲರ್ ಗಸ್ ಅಟ್ಕಿನ್ಸನ್ (Gus Atkinson) ಅವರನ್ನು ತಂಡಕ್ಕೆ ಸೇರಿಸಿಕೊಂಡಿರುವುದಾಗಿ ಘೋಷಿಸಿದೆ. ಹಾಗೆಯೇ ಕೌಟುಂಬಿಕ ಕಾರಣದಿಂದಾಗಿ ಎರಡನೇ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿದ್ದರೂ, ಕೊನೆಯ ಕ್ಷಣದಲ್ಲಿ ಪಂದ್ಯದಿಂದ ಹೊರಬಿದ್ದಿದ್ದ ಜೋಫ್ರಾ ಆರ್ಚರ್ಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ. ಅಂದರೆ ಮುಂದಿನ ಪಂದ್ಯದಲ್ಲಿ ಅವರು ಆಡುವುದನ್ನು ನಾವು ಕಾಣಬಹುದಾಗಿದೆ. ಹೀಗಾಗಿ 3ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆಡುವ ಹನ್ನೊಂದರ ಬಳಗದಲ್ಲಿ ನಾವು ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ.
ವಾಸ್ತವವಾಗಿ ಇಂಗ್ಲೆಂಡ್ ತಂಡ ಮೊದಲ ಪಂದ್ಯವನ್ನು ಐದು ವಿಕೆಟ್ಗಳಿಂದ ಗೆದ್ದುಕೊಂಡಿತ್ತಾದರೂ, ಬೌಲಿಂಗ್‌ನಿಂದ ಯಾವುದೇ ಪರಿಣಾಮಕಾರಿ ಪ್ರದರ್ಶನ ಕಂಡುಬರಲಿಲ್ಲ. ಹೀಗಾಗಿ ಟೀಂ ಇಂಡಿಯಾ ಒಂದೇ ಪಂದ್ಯದಲ್ಲಿ ಐದು ಶತಕಗಳನ್ನು ದಾಖಲಿಸಿತು. ಒಂದು ವೇಳೆ ಈ ಪಂದ್ಯದಲ್ಲಿ ಭಾರತ ತಂಡದ ಫೀಲ್ಡಿಂಗ್ ಹಾಗೂ ಬೌಲಿಂಗ್ ಉತ್ತಮವಾಗಿದಿದ್ದರೆ, ಆ ಪಂದ್ಯದ ಫಲಿತಾಂಶವೇ ಬೇರೆಯದ್ದಾಗಿರುತ್ತಿತ್ತು. ಆದಾಗ್ಯೂ ಬ್ಯಾಟ್ಸ್ಮನ್ಗಳ ಅಬ್ಬರದ ಬ್ಯಾಟಿಂಗ್ನಿಂದಾಗಿ ಇಂಗ್ಲೆಂಡ್ ತಂಡ ಗೆಲುವು ದಾಖಲಿಸಿತ್ತು.
Welcome, Gus 🤝
We’ve made one addition to our Test squad for Lord’s 🏡
— England Cricket (@englandcricket) July 6, 2025
ದುಬಾರಿಯಾದ ಬೌಲರ್ಸ್
ಎಡ್ಜ್‌ಬಾಸ್ಟನ್ ಟೆಸ್ಟ್ನಲ್ಲಿ ಇಂಗ್ಲೆಂಡ್ ತಂಡದ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಕೂಡ ಪರಿಣಾಮಕಾರಿಯಾಗಿರಲಿಲ್ಲ. ಅದರಲ್ಲೂ ಬೌಲರ್ಗಳು ರನ್ಗಳಿಗೆ ಕಡಿವಾಣ ಹಾಕುವಲ್ಲಿ ವಿಫಲರಾದರು. ಹೀಗಾಗಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 587 ರನ್ ಕಲೆಹಾಕಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 427 ರನ್ ಬಾರಿಸಿತು. ಇದು ಇಂಗ್ಲೆಂಡ್ ತಂಡದ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಹೀಗಾಗಿ ಮೊದಲೆರಡು ಪಂದ್ಯಗಳಲ್ಲಿ ದುಬಾರಿಯಾಗಿರುವ ಬೌಲಿಂಗ್ ವಿಭಾಗದಲ್ಲಿ ಸರ್ಜರಿ ಮಾಡಲು ಮುಂದಾಗಿರುವ ಮಂಡಳಿ ಅಂತಿಮವಾಗಿ ತನ್ನ ಬೌಲಿಂಗ್ ವಿಭಾಗವನ್ನು ಬಲಪಡಿಸಲು ನಿರ್ಧರಿಸಿದೆ.
ಗಸ್ ಅಟ್ಕಿನ್ಸನ್ ಆಗಮನ
ಗಾಯದ ಕಾರಣದಿಂದಾಗಿ ಈ ಸರಣಿಯ ಮೊದಲ ಎರಡು ಪಂದ್ಯಗಳಿಂದ ಹೊರಗುಳಿದಿದ್ದ ವೇಗದ ಬೌಲರ್ ಗಸ್ ಅಟ್ಕಿನ್ಸನ್ ಅವರನ್ನು ಮೂರನೇ ಟೆಸ್ಟ್‌ಗೆ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಮೇ ತಿಂಗಳಲ್ಲಿ ಜಿಂಬಾಬ್ವೆ ವಿರುದ್ಧದ ಟೆಸ್ಟ್ ಪಂದ್ಯದ ಸಮಯದಲ್ಲಿ ಅಟ್ಕಿನ್ಸನ್ ಗಾಯಗೊಂಡಿದ್ದರು. ಇದರಿಂದಾಗಿ ಅವರು ಲೀಡ್ಸ್ ಮತ್ತು ಎಡ್ಜ್‌ಬಾಸ್ಟನ್ ಟೆಸ್ಟ್‌ಗಳಲ್ಲಿ ಆಡಲು ಸಾಧ್ಯವಾಗಲಿಲ್ಲ. ಅವರ ಅನುಪಸ್ಥಿತಿಯಲ್ಲಿ, ಇಂಗ್ಲೆಂಡ್ ಜೋಶ್ ಟಂಗ್‌ಗೆ ಆಡುವ ಹನ್ನೊಂದರಲ್ಲಿ ಅವಕಾಶ ನೀಡಿತು.
IND vs ENG: ಈ ಆರು ಆಟಗಾರರಿಂದ ಎಡ್ಜ್‌ಬಾಸ್ಟನ್‌ನಲ್ಲಿ ಇತಿಹಾಸ ನಿರ್ಮಿಸಿದ ಟೀಂ ಇಂಡಿಯಾ
ಲಾರ್ಡ್ಸ್‌ನಲ್ಲಿ ಅಟ್ಕಿನ್ಸನ್ ದಾಖಲೆ
ಸರಣಿಯ ಮೂರನೇ ಟೆಸ್ಟ್ ಪಂದ್ಯ ಜುಲೈ 10 ರಿಂದ ಲಾರ್ಡ್ಸ್‌ನಲ್ಲಿ ಆರಂಭವಾಗಲಿದ್ದು, ಅಟ್ಕಿನ್ಸನ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ. ಈ ಮೈದಾನದಲ್ಲಿ ಅಟ್ಕಿನ್ಸನ್ ದಾಖಲೆಯೂ ಅತ್ಯುತ್ತಮವಾಗಿದೆ. ಅವರು ಈ ಮೈದಾನದಲ್ಲಿ ಕೇವಲ 2 ಪಂದ್ಯಗಳನ್ನು ಆಡಿದ್ದಾರಾದರೂ 19 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದು ಮಾತ್ರವಲ್ಲದೆ, ಬ್ಯಾಟಿಂಗ್ನಲ್ಲೂ ಮಿಂಚಿರುವ ಅವರು ಒಂದು ಶತಕವನ್ನು ಬಾರಿಸಿದ್ದಾರೆ. ಒಟ್ಟಾರೆಯಾಗಿ, ಅಟ್ಕಿನ್ಸನ್ ಕೇವಲ 12 ಪಂದ್ಯಗಳ ತಮ್ಮ ಸಣ್ಣ ಟೆಸ್ಟ್ ವೃತ್ತಿಜೀವನದಲ್ಲಿ ಒಟ್ಟು 55 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಲಾರ್ಡ್ಸ್ ಟೆಸ್ಟ್‌ಗೆ ಇಂಗ್ಲೆಂಡ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಓಲಿ ಪೋಪ್, ಜೋ ರೂಟ್, ಬೆನ್ ಡಕೆಟ್, ಜ್ಯಾಕ್ ಕ್ರಾಲಿ, ಹ್ಯಾರಿ ಬ್ರೂಕ್, ಜೇಮೀ ಸ್ಮಿತ್, ಜಾಕೋಬ್ ಬೆಥೆಲ್, ಕ್ರಿಸ್ ವೋಕ್ಸ್, ಜೋಫ್ರಾ ಆರ್ಚರ್, ಬ್ರೈಡನ್ ಕಾರ್ಸೆ, ಶೋಯೆಬ್ ಬಶೀರ್, ಗಸ್ ಅಟ್ಕಿನ್ಸನ್, ಜೋಶ್ ಟಂಗ್, ಜೇಮೀ ಓವರ್ಟನ್, ಸ್ಯಾಮ್ ಕುಕ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:28 pm, Sun, 6 July 25