PAK vs ENG: 17 ವರ್ಷಗಳ ನಂತರ ಪಾಕ್ ನೆಲದಲ್ಲಿ ಗೆಲುವಿನ ಶುಭಾರಂಭ ಮಾಡಿದ ಇಂಗ್ಲೆಂಡ್

| Updated By: ಪೃಥ್ವಿಶಂಕರ

Updated on: Sep 21, 2022 | 2:44 PM

PAK vs ENG: ಸುಮಾರು 17 ವರ್ಷಗಳ ನಂತರ ಪಾಕ್ ನೆಲಕ್ಕೆ ಕಾಲಿಟ್ಟಿರುವ ಇಂಗ್ಲೆಂಡ್ ತಂಡ, ಮೊದಲ ಪಂದ್ಯದಲ್ಲೇ ಆತಿಥೇಯ ಪಾಕಿಸ್ತಾನಕ್ಕೆ ಸೋಲಿನ ಆಘಾತ ನೀಡಿದೆ.

PAK vs ENG: 17 ವರ್ಷಗಳ ನಂತರ ಪಾಕ್ ನೆಲದಲ್ಲಿ ಗೆಲುವಿನ ಶುಭಾರಂಭ ಮಾಡಿದ ಇಂಗ್ಲೆಂಡ್
ಅರ್ಧಶತಕ ಸಿಡಿಸಿದ ಹೇಲ್ಸ್
Follow us on

ಟಿ20 ವಿಶ್ವಕಪ್​ಗೂ (T20 world cup) ಮುನ್ನ ಟೀಂ ಇಂಡಿಯಾ (Team India) ಹಾಗೂ ಪಾಕಿಸ್ತಾನ (Pakistan) ಬೇರೆ ಬೇರೆ ದೇಶಗಳೊಂದಿಗೆ ಟಿ20 ಸರಣಿ ಆಡುತ್ತಿವೆ. ಈ ಉಭಯ ದೇಶಗಳು ಆಡಿದ ಮೊದಲ ಟಿ20 ಪಂದ್ಯದಲ್ಲೇ ಸೋಲನನುಭವಿಸಿವೆ. ಒಂದೆಡೆ ಟೀಂ ಇಂಡಿಯಾ ಗೆಲ್ಲುವ ಪಂದ್ಯದಲ್ಲಿ ಆಸೀಸ್ ವಿರುದ್ಧ ಮಕಾಡೆ ಮಲಗಿದರೆ, ಇನ್ನೊಂದೆಡೆ ಪಾಕಿಸ್ತಾನ ಆಂಗ್ಲರ ಎದುರು ಸೋಲೊಪ್ಪಿಕೊಂಡಿದೆ. ಸುಮಾರು 17 ವರ್ಷಗಳ ನಂತರ ಪಾಕ್ ನೆಲಕ್ಕೆ ಕಾಲಿಟ್ಟಿರುವ ಇಂಗ್ಲೆಂಡ್ ತಂಡ, ಮೊದಲ ಪಂದ್ಯದಲ್ಲೇ ಆತಿಥೇಯ ಪಾಕಿಸ್ತಾನಕ್ಕೆ ಸೋಲಿನ ಆಘಾತ ನೀಡಿದೆ. ಕರಾಚಿಯಲ್ಲಿ ನಡೆದ 7 ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ಇಂಗ್ಲೆಂಡ್ 6 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ಮಿಂಚಿದ ಹೇಲ್ಸ್

ಈ ಪಂದ್ಯ ಇಂಗ್ಲೆಂಡ್ ತಂಡ ಮತ್ತು ಹೇಲ್ಸ್ ಇಬ್ಬರಿಗೂ ವಿಶೇಷವಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 7 ವಿಕೆಟ್‌ ನಷ್ಟಕ್ಕೆ 158 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕುತ್ತರವಾಗಿ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ 4 ಎಸೆತಗಳು ಬಾಕಿಯಿರುವಂತೆಯೆ, 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಅಲೆಕ್ಸ್ ಹೇಲ್ಸ್ ಇಂಗ್ಲೆಂಡ್ ಗೆಲುವಿನಲ್ಲಿ ಮಿಂಚಿದರು. 3 ವರ್ಷಗಳ ನಂತರ ತಂಡಕ್ಕೆ ಮರಳಿದ ಹೇಲ್ಸ್, 40 ಎಸೆತಗಳಲ್ಲಿ 7 ಬೌಂಡರಿ ಸಹಿತ ಅರ್ಧಶತಕ ಬಾರಿಸಿದರು. ಈ ಪಂದ್ಯದಲ್ಲಿ ಇನ್ನೊಂದು ವಿಶೇಷವೆಂದರೆ ಬರೋಬ್ಬರಿ 42 ತಿಂಗಳ ಬಳಿಕ ತಂಡಕ್ಕೆ ಎಂಟ್ರಿಕೊಟ್ಟಿದ್ದ ಹೇಲ್ಸ್, ತಮ್ಮ ಕೊನೆಯ ಪಂದ್ಯವನ್ನು 10 ಮಾರ್ಚ್ 2019 ರಂದು ಆಡಿದ್ದರು.

ಫಿಲ್ ಸಾಲ್ಟ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಹೇಲ್ಸ್​ಗೆ ಉತ್ತಮ ಬೆಂಬಲ ಸಿಗಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದಿದ್ದ ಸಾಲ್ಟ್ ಬೇಗನೆ ಪೆವಿಲಿಯನ್‌ಗೆ ಮರಳಿದರು. ಅಂತಹ ಪರಿಸ್ಥಿತಿಯಲ್ಲಿ, ಒಂದು ತುದಿಯಲ್ಲಿ ಭದ್ರವಾಗಿ ಬೇರೂರಿದ ಹೇಲ್ಸ್, ಡೇವಿಡ್ ಮಲಾನ್, ಬೆನ್ ಡಕೆಟ್, ಹ್ಯಾರಿ ಬ್ರೂಕ್ ಜೊತೆಗೂಡಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ಕರೆದೊಯ್ದರು. ಹೇಲ್ಸ್ 40 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ 53 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಇವರನ್ನು ಹೊರತುಪಡಿಸಿ ಹ್ಯಾರಿ ಬ್ರೂಕ್ 25 ಎಸೆತಗಳಲ್ಲಿ ಅಜೇಯ 42 ರನ್ ಗಳಿಸಿದರು. ಇವರ ಆಟದ ಫಲವಾಗಿ ಇಂಗ್ಲೆಂಡ್​ ತಂಡ ಗುರಿಯನ್ನು ನೀರು ಕುಡಿದಷ್ಟು ಸಲೀಸಾಗಿ ಬೆನ್ನಟ್ಟಿತು. ಈ ಮೊದಲು ಬೌಲಿಂಗ್​ನಲ್ಲಿ ಪಾಕ್​ ತಂಡಕ್ಕೆ ಮುಳುವಾಗಿದ್ದ ಲ್ಯೂಕ್​ವುಡ್ ಕೇವಲ 24 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಪಾಕಿಸ್ತಾನದ ಬ್ಯಾಟಿಂಗ್ ವೈಫಲ್ಯ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನದ ಬ್ಯಾಟಿಂಗ್ ವಿಭಾಗ, ಆಂಗ್ಲ ಬೌಲರ್ಸ್​ ಎದುರು ಸಂಪೂರ್ಣ ಮಂಕಾಯಿತು. ಆರಂಭಿಕ ಮೊಹಮ್ಮದ್ ರಿಜ್ವಾನ್ ಹೊರತುಪಡಿಸಿ ಮತ್ತ್ಯಾರು ಪಿಚ್​ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲಿಲ್ಲ. ಆರಂಭಿಕ ರಿಜ್ವಾನ್ 46 ಎಸೆತಗಳಲ್ಲಿ 68 ರನ್ ಗಳಿಸಿದರೆ, ಸತತ ವೈಫಲ್ಯಗಳಿಂದ ಕಂಗೆಟ್ಟಿರುವ ನಾಯಕ ಬಾಬರ್ ಅಜಮ್ 31 ರನ್ ಗಳಿಸಿದರು. ಉಳಿದಂತೆ ಹೈದರ್ ಅಲಿ 11 ರನ್ ಹಾಗೂ ಸುದೀರ್ಘ ಸಮಯದ ಬಳಿಕ ತಂಡಕ್ಕೆ ಮರಳಿದ ಶಾನ್ ಮಸೂದ್ 7 ರನ್ ಗಳಿಸಿದರೆ, ಇಫ್ತಿಕರ್ ಅಹ್ಮದ್ 28 ರನ್ ಕೊಡುಗೆ ನೀಡಿದರು.