Team India: ಟೀಮ್ ಇಂಡಿಯಾ ಪಾಲಿಗೆ ದುಃಸ್ವಪ್ನವಾಗುತ್ತಿರುವ 19ನೇ ಓವರ್..!
Bhuvneshwar Kumar: ಈ ಸೋಲಿನ ಬೆನ್ನಲ್ಲೇ ಭಾರತ ತಂಡದ ಬೌಲರ್ಗಳ ಪ್ರದರ್ಶನದ ಬಗ್ಗೆ ಟೀಕೆಗಳು ಕೇಳಿ ಬರುತ್ತಿದೆ. ಅದರಲ್ಲೂ ಡೆತ್ ಓವರ್‌ಗಳಲ್ಲಿ ಭುವನೇಶ್ವರ್ ಕುಮಾರ್ ದುಬಾರಿಯಾಗುತ್ತಿರುವುದು ಇದೀಗ ಟೀಮ್ ಮ್ಯಾನೇಜ್ಮೆಂಟ್ನ ಚಿಂತೆಯನ್ನು ಹೆಚ್ಚಿಸಿದೆ.
ಏಷ್ಯಾಕಪ್ನಲ್ಲಿನ ಹೀನಾಯ ಸೋಲಿನ ಬಳಿಕ ಟೀಮ್ ಇಂಡಿಯಾ (Team India) ಮತ್ತೊಂದು ಸೋಲು ಕಂಡಿದೆ. ಅದು ಕೂಡ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಎಂಬುದು ವಿಶೇಷ. ಅಂದರೆ ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ 208 ರನ್ ಕಲೆಹಾಕಿದರೂ, ಟೀಮ್ ಇಂಡಿಯಾ ಸೋತಿದೆ. ಈ ಸೋಲಿಗೆ ಮುಖ್ಯ ಕಾರಣ ಟೀಮ್ ಇಂಡಿಯಾ ಬೌಲರ್ಗಳ ಕಳಪೆ ಪ್ರದರ್ಶನ. ಏಕೆಂದರೆ ಆಸ್ಟ್ರೇಲಿಯಾಗೆ 6 ಓವರ್‌ಗಳಲ್ಲಿ 64 ರನ್ ಬೇಕಿದ್ದ ವೇಳೆ ಟೀಮ್ ಇಂಡಿಯಾ ಬೌಲರ್ಗಳು ಹೆಚ್ಚಿನ ರನ್ ಬಿಟ್ಟುಕೊಟ್ಟರು. ಪರಿಣಾಮ 19.2 ಓವರ್‌ಗಳಲ್ಲಿ 211 ರನ್ ಬಾರಿಸುವ ಮೂಲಕ ಆಸ್ಟ್ರೇಲಿಯಾ ತಂಡ 4 ವಿಕೆಟ್ಗಳಿಂದ ಭರ್ಜರಿ ಜಯ ಸಾಧಿಸಿತು.
ಈ ಸೋಲಿನ ಬೆನ್ನಲ್ಲೇ ಭಾರತ ತಂಡದ ಬೌಲರ್ಗಳ ಪ್ರದರ್ಶನದ ಬಗ್ಗೆ ಟೀಕೆಗಳು ಕೇಳಿ ಬರುತ್ತಿದೆ. ಅದರಲ್ಲೂ ಡೆತ್ ಓವರ್‌ಗಳಲ್ಲಿ ಭುವನೇಶ್ವರ್ ಕುಮಾರ್ ದುಬಾರಿಯಾಗುತ್ತಿರುವುದು ಇದೀಗ ಟೀಮ್ ಮ್ಯಾನೇಜ್ಮೆಂಟ್ನ ಚಿಂತೆಯನ್ನು ಹೆಚ್ಚಿಸಿದೆ. ಏಕೆಂದರೆ ಹೊಸ ಚೆಂಡಿನೊಂದಿಗೆ ಮಿಂಚುವ ಭುವಿ ಡೆತ್ ಓವರ್‌ಗಳಲ್ಲಿ (17 ನೇ ಮತ್ತು 19 ನೇ ಓವರ್‌ಗಳು) ದುಬಾರಿಯಾಗುತ್ತಾ ಬರುತ್ತಿದ್ದಾರೆ. ಕಳೆದ ಮೂರು ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆಲುವನ್ನು ಕಸಿದುಕೊಂಡಿದ್ದು 19ನೇ ಓವರ್ ಎಂಬುದು ಇಲ್ಲಿ ವಿಶೇಷ. ಈ ಮೂರು ಓವರ್ಗಳನ್ನು ಎಸೆದಿರುವುದು ಭುವನೇಶ್ವರ್ ಕುಮಾರ್ ಎಂಬುದು ಮತ್ತೊಂದು ವಿಶೇಷ.
ಏಷ್ಯಾಕಪ್ನಲ್ಲಿ ಪಾಕಿಸ್ತಾನ್ ವಿರುದ್ಧ 19ನೇ ಓವರ್ ಎಸೆದಿದ್ದ ಭುವನೇಶ್ವರ್ ಕುಮಾರ್ 19 ರನ್ ನೀಡಿದ್ದರು. ಇದರಿಂದ ಆ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲನುಭವಿಸಬೇಕಾಯಿತು. ಇನ್ನು ಶ್ರೀಲಂಕಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲೂ 19ನೇ ಓವರ್ನಲ್ಲಿ 14 ರನ್ ಬಿಟ್ಟುಕೊಟ್ಟಿದ್ದರು. ಆ ಮ್ಯಾಚ್ನಲ್ಲೂ ಟೀಮ್ ಇಂಡಿಯಾ ಪರಾಜಯಗೊಂಡಿತು.
ಇದೀಗ ಆಸ್ಟ್ರೇಲಿಯಾ ವಿರುದ್ಧ 19ನೇ ಓವರ್ನಲ್ಲಿ 16 ರನ್ ನೀಡುವ ಮೂಲಕ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ವಿಲನ್ ಆಗಿ ಹೊರಹೊಮ್ಮಿದ್ದಾರೆ. ಅಂದರೆ ಡೆತ್ ಓವರ್‌ಗಳಲ್ಲಿ ಭುವಿ ಕಳಪೆ ದಾಖಲೆ ಹೊಂದಿದ್ದಾರೆ ಎಂಬುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ.
ಏಕೆಂದರೆ ಏಷ್ಯಾಕಪ್ನಲ್ಲಿ ಪಾಕಿಸ್ತಾನ್ ವಿರುದ್ದ ಅಂತಿಮ ಹಂತದಲ್ಲಿ 2 ಓವರ್ ಎಸೆದಿದ್ದ ಭುವಿ ನೀಡಿದ್ದು ಬರೋಬ್ಬರಿ 26 ರನ್ಗಳು. ಹಾಗೆಯೇ ಶ್ರೀಲಂಕಾಗೆ ಗೆಲ್ಲಲು ಕೊನೆಯ ಎರಡು ಓವರ್‌ಗಳಲ್ಲಿ 21 ರನ್‌ಗಳ ಅಗತ್ಯವಿದ್ದಾಗ ಭುವನೇಶ್ವರ್ ಕುಮಾರ್ 19ನೇ ಓವರ್ನಲ್ಲಿ 14 ರನ್ ನೀಡಿದರು. ಇದೀಗ ಆಸ್ಟ್ರೇಲಿಯಾ ವಿರುದ್ದ 4 ಓವರ್‌ಗಳಲ್ಲಿ 52 ರನ್ ಚಚ್ಚಿಸಿಕೊಳ್ಳುವ ಮೂಲಕ ಭುವಿ ಮತ್ತೊಮ್ಮೆ ಟೀಮ್ ಇಂಡಿಯಾ ಸೋಲಿಗೆ ಪ್ರಮುಖ ಕಾರಣರಾಗಿದ್ದಾರೆ.
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ ಎಂದರೆ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ ಭುವನೇಶ್ವರ್ ಕುಮಾರ್ ಪವರ್ಪ್ಲೇ ವೇಳೆ 5.66 ರ ಸರಾಸರಿಯಲ್ಲಿ ನೀಡಿದ್ದರೆ, ಡೆತ್ ಓವರ್ ವೇಳೆ 9.26 ಸರಾಸರಿಯಲ್ಲಿ ರನ್ ಬಿಟ್ಟುಕೊಡುತ್ತಾ ಬಂದಿದ್ದಾರೆ. ಅಂದರೆ ಡೆತ್ ಓವರ್‌ಗಳಲ್ಲಿ ಭುವಿ 10 ರನ್‌ಗಳ ಅಸುಪಾಸಿನ ಸರಾಸರಿಯಲ್ಲಿ ರನ್ ನೀಡುತ್ತಿದ್ದಾರೆ. ಇದಾಗ್ಯೂ ಭುವನೇಶ್ವರ್ ಕುಮಾರ್ ಅವರನ್ನು ಡೆತ್ ಓವರ್ನಲ್ಲಿ ಬಳಸಿಕೊಳ್ಳುತ್ತಿರುವುದು ಏಕೆ ಎಂಬುದೇ ದೊಡ್ಡ ಪ್ರಶ್ನೆ.
Published On - 1:25 pm, Wed, 21 September 22